ಇಂದು ಮತ್ತು ನಾಳೆ ಶ್ರೀ ಕೃಷ್ಣ ಜನ್ಮಾಷ್ಟಮಿ. ಎಲ್ಲೆಡೆ ಕೃಷ್ಣನಿಗೆ ಅತ್ಯಂತ ಪ್ರೀತಿಯಿಂದ ಪೂಜಿಸಲಾಗುತ್ತದೆ. ಜೊತೆಗೆ ಆತನಿಗೆ ಅತ್ಯಂತ ಪ್ರೀತಿ ಪಾತ್ರ ವಸ್ತುಗಳನ್ನು ಸಮರ್ಪಿಸುವುದು ಕಂಡುಬರುತ್ತದೆ.
ಹಿಂದೂ ಧರ್ಮದಲ್ಲಿ ಕೃಷ್ಣ ಜನ್ಮಾಷ್ಟಮಿ ಬಹಳ ಮಹತ್ವದ್ದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರೀಕೃಷ್ಣ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯ ರೋಹಿಣಿ ನಕ್ಷತ್ರದಲ್ಲಿ ಜನಿಸಿದ. ಶ್ರೀಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನು ದೇಶದೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 26 ರಂದು ಕೃಷ್ಣಾಷ್ಟಮಿ ಆಚರಿಸಲಾಗುತ್ತಿದೆ. ಈ ದಿನ, ಶ್ರೀಕೃಷ್ಣನ ಮಗುವಿನ ರೂಪವನ್ನು ಅಂದರೆ ಲಡ್ಡು ಗೋಪಾಲನನ್ನು ಪೂಜಿಸಲಾಗುತ್ತದೆ. ಈ ದಿನದಂದು ಉಪವಾಸವನ್ನೂ ಮಾಡಲಾಗುತ್ತದೆ.
ಹಾಗೆಯೇ ಶ್ರೀಕೃಷ್ಣನ ಪೂಜೆಯಲ್ಲಿ ಸೌತೆಕಾಯಿಗೆ ವಿಶೇಷ ಮಹತ್ವವಿದೆ. ಹಲವೆಡೆ ಸೌತೆಕಾಯಿಯನ್ನು ಪೂಜೆ ಹಾಗೂ ನೈವೇದ್ಯಕ್ಕಿಡುತ್ತಾರೆ. ಸೌತೆಕಾಯಿಯನ್ನು ಕತ್ತರಿಸುವುದು ಕೃಷ್ಣನ ಹೊಕ್ಕುಳಬಳ್ಳಿಯನ್ನು ಕತ್ತರಿಸುವುದು ಎಂದೇ ಪರಿಗಣಿಸಲಾಗುತ್ತದೆ
ಭಾರತದ ಅನೇಕ ಸ್ಥಳಗಳಲ್ಲಿ ಶ್ರೀಕೃಷ್ಣ ಸೌತೆಕಾಯಿಯಿಂದ ಹುಟ್ಟಿದನೆಂದು ನಂಬುತ್ತಾರೆ.
ಪೂಜೆಯ ಬಳಿಕ ಈ ಸೌತೆಕಾಯಿಯನ್ನು ಎಲ್ಲರಿಗೂ ಪ್ರಸಾದವಾಗಿ ಹಂಚಲಾಗುತ್ತದೆ. ಗರ್ಭಿಣಿಯರು ಈ ಕತ್ತರಿಸಿದ ಸೌತೆಕಾಯಿಯನ್ನು ಪ್ರಸಾದವಾಗಿ ಸೇವಿಸುವುದು ತುಂಬಾ ಒಳ್ಳೆಯದು. ಮಕ್ಕಳಾಗಲು ಜನ್ಮಾಷ್ಟಮಿಯಂದು ಸೌತೆಕಾಯಿಯನ್ನು ಮಹಿಳೆಯರು ಪ್ರಸಾದವಾಗಿ ಸೇವಿಸಬೇಕು ಎಂಬ ನಂಬಿಕೆಯೂ ಇದೆ.
ಹಲವೆಡೆ ಜನ್ಮಾಷ್ಟಮಿಯ ದಿನದಂದು ಮನೆಯಲ್ಲಿ ಗರ್ಭಿಣಿಯರಿಗೆ ಸೌತೆಕಾಯಿ ನೀಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.