ಬೆಂಗಳೂರು : ರಾಜ್ಯದಲ್ಲಿ ಸಾರಿಗೆ ನಿಗಮಗಳ ಬಸ್‌ಗಳ ಟಿಕೆಟ್ ದರ ಹೆಚ್ಚಾಗುವ ಸಾಧ್ಯತೆಯಿದೆ. ಕೆಎಸ್ ಆರ್‌ಟಿಸಿ ಬಸ್ಸಿನ ಟಿಕೆಟ್ ದರದಲ್ಲಿ ಶೇ.15 ರಿಂದ 20 ರಷ್ಟು ಹೆಚ್ಚಳ ಮಾಡುವ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಕೆಎಸ್ ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ ಹೇಳಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೆಎಸ್ ಆರ್‌ಟಿಸಿ ನಿಗಮದ ಬೋರ್ಡ್ ಮೀಟಿಂಗ್ ಮಾಡಿ, ಟಿಕೆಟ್ ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. 2019ರಲ್ಲಿ ಕೆಎಸ್ ಆರ್‌ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಆಗಿತ್ತು. ನಂತರ ಈವರೆಗೆ ಟಿಕೆಟ್ ದರ ಹೆಚ್ಚಳ ಮಾಡದೆ 5 ವರ್ಷ ಕಳೆದಿದೆ. ತೈಲ ಬೆಲೆ ಏರಿಕೆ ಆಗಿರುವುದರಿಂದ ದರ ಏರಿಕೆಯಾಗಿದೆ.ಈ ಹಿಂದೆ ಡೀಸೆಲ್​ ಬೆಲೆ 60 ರೂ ಇತ್ತು. ಈಗ 93 ರೂ ಆಗಿದೆ. ವಾಹನ ಬಿಡಿ ಭಾಗಗಳ ಬೆಲೆಯಲ್ಲಿ ಏರಿಕೆಯಾಗಿದೆ. ನೌಕರರಿಗೆ ಸಂಬಳದಲ್ಲಿ ಹೆಚ್ಚಳ ಮತ್ತು ಸವಲತ್ತು ಕೊಡಬೇಕಾದರೆ ಟಿಕೆಟ್ ದರ ಹೆಚ್ಚಳ ಅನಿವಾರ್ಯ ಎಂದು ಅವರು ಹೇಳಿದ್ದಾರೆ.

ಕೆಎಸ್‌ಆರ್‌ಟಿಸಿ ನೌಕರರ ವೇತನ ಪರಿಷ್ಕರಣೆ 2020 ರಲ್ಲಿ ಮಾಡಬೇಕಿತ್ತು. ಆದರೆ ಮಾಡಿರಲಿಲ್ಲ. ಈ ಬಾರಿ 2024 ರಲ್ಲಿ ವೇತನ ಪರಿಷ್ಕರಣೆ ಮಾಡಬೇಕಿದೆ. ಹೀಗಾಗಿ ಟಿಕೆಟ್ ದರ ಹೆಚ್ಚಳ ಅನಿವಾರ್ಯವಾಗುತ್ತದೆ. ಕಾಲಕಾಲಕ್ಕೆ ದರ ಹೆಚ್ಚಳ ಮಾಡಿದ್ದರೆ ಹೀಗಾಗುತ್ತಿರಲಿಲ್ಲ. ಕಳೆದ ತ್ರೈಮಾಸಿಕದಲ್ಲಿ ಕೆಎಸ್ ಆರ್‌ಟಿಸಿಗೆ 295 ಕೋಟಿ ನಷ್ಟ ಅನುಭವಿಸಿದೆ ಎಂದು ಅವರು ತಿಳಿಸಿದರು.

40 ಹೊಸ ವೋಲ್ವೋ ಬಸ್‌ಗಳ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 600 ಸಾಮಾನ್ಯ ಬಸ್‌ಗಳನ್ನು ಖರೀದಿ ಮಾಡಲಾಗಿದೆ. ಈ ಎಲ್ಲ ಕಾರಣಗಳಿಂದ ದರ ಹೆಚ್ಚಳ ಅನಿವಾರ್ಯವಾಗಿದೆ. ದರ ಹಚ್ಚಳ ಮಾಡಲಿಲ್ಲವಾದರೆ ಸಂಸ್ಥೆಗೆ ನಷ್ಟವಾಗುತ್ತದೆ.

ಇದರ ವೆಚ್ಚವನ್ನೂ ಸರ್ಕಾರವೇ ಭರಿಸಬೇಕಾಗುತ್ತದೆ. ಹೀಗಾಗಿ ಶೇ. 15-20 ದರ ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. ನಾವು ಪ್ರಸ್ತಾವನೆ ಸಲ್ಲಿಸಿದ್ದೇವೆ. ನಂತರ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದರು.

ದರ ಏರಿಕೆ ಇಲ್ಲ :

ಕೆಎಸ್ ಆರ್ ಟಿ ಸಿ ಅಧ್ಯಕ್ಷ ಎಸ್. ಆರ್.ಶ್ರೀನಿವಾಸ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ಅವರು ಸಾರಿಗೆ ಸಂಸ್ಥೆಯ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗುವುದು ಎಂದು ಹೇಳಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು, ಶ್ರೀನಿವಾಸ ಪ್ರಸ್ತಾಪ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ, ಇನ್ನು ಪ್ರಸ್ತಾಪ ಬಂದಿಲ್ಲ. ಟಿಕೆಟ್ ದರ ಏರಿಸುವ ಚಿಂತನೆ ನಡೆಸಿಲ್ಲ. ಕೆಎಸ್ಆರ್ ಟಿಸಿ ಸಹಿತ ಎಲ್ಲಾ ನಾಲ್ಕು ನಿಗಮಗಳಲ್ಲಿ ಟಿಕೆಟ್ ದರ ಏರಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.