ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚೌತಿಯ ದಿನವಾದ ಗುರುವಾರ ಭಕ್ತರು ಎಡೆಸ್ನಾನ ಸೇವೆ ಸಲ್ಲಿಸಿದರು.
ಗೋವು ನೈವೇದ್ಯ ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸಿ ಹರಕೆ ತೀರಿಸಿದರು. 78 ಭಕ್ತರು ಸ್ವಯಂಪ್ರೇರಿತರಾಗಿ ಸೇವೆ ನೆರವೇರಿಸಿದರು. ಪಂಚಮಿ ಮತ್ತು ಷಷ್ಠಿಯಂದು ಭಕ್ತರು ಎಡೆಸ್ನಾನ ಸೇವೆ ನೆರವೇರಿಸುವರು.
ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತರ ಮಾರ್ಗದರ್ಶನದಂತೆ ದೇವರ ಮಧ್ಯಾಹ್ನದ ಮಹಾಪೂಜೆ ಬಳಿಕ ದೇವಳದ ಹೊರಾಂಗಣದ ಸುತ್ತಲೂ 432 ಬಾಳೆ ಎಲೆಗಳನ್ನು ಹಾಕಿ ಅದರ ಮೇಲೆ ದೇವರ ನೈವೇದ್ಯ ಬಡಿಸಲಾಯಿತು. ಬಳಿಕ ದೇವಳದ ಗೋವುಗಳಿಗೆ ಎಲೆಗಳಲ್ಲಿದ್ದ ಅನ್ನಪ್ರಸಾದವನ್ನು ತಿನ್ನಿಸಲಾಯಿತು. ದೇವಳದ ಎದುರಿನ ದರ್ಪಣತೀರ್ಥ ನದಿಯಲ್ಲಿ ಸ್ನಾನ ಮಾಡಿ ನಿಂತಿದ್ದ ಭಕ್ತರು, ಗೋವುಗಳು ತಿಂದ ಎಲೆಯ ಮೇಲೆ ಉರುಳು ಸೇವೆ ಮಾಡುತ್ತಾ ಒಂದು ಸುತ್ತು ಪ್ರದಕ್ಷಿಣೆ ಹಾಕಿದರು. ಭಕ್ತರು ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ದೇವರ ಪ್ರಸಾದ ಮತ್ತು ಪ್ರಸಾದ ಭೋಜನ ಸ್ವೀಕರಿಸಿದರು.