ಸುಬ್ರಹ್ಮಣ್ಯ: ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ನಡೆಯುವ ವಾರ್ಷಿಕ ಜಾತ್ರೆ ಚಂಪಾಷಷ್ಠಿ ದ.ಕ. ಜಿಲ್ಲೆಯಲ್ಲಿ ನಡೆಯುವ ಜಾತ್ರೆಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿದೆ. ಪ್ರಕೃತಿ ಸೌಂದರ್ಯದ ತಾಣವೆನಿಸಿಕೊಂಡ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇದೀಗ ವಾರ್ಷಿಕ ಜಾತ್ರೆ ಚಂಪಾಷಷ್ಠಿಯ ಸಡಗರ.
ನ.27ರಂದು ಕೊಪ್ಪರಿಗೆ ಏರುವ ಮೂಲಕ ಚಂಪಾಷಷ್ಠಿಗೆ ಚಾಲನೆ ದೊರಕಿದೆ. ಡಿ.12ರಂದು ಕೊಪ್ಪರಿಗೆ ಇಳಿದು ರಾತ್ರಿ ನೀರುಬಂಡಿ ಉತ್ಸವದ ಬಳಿಕ ಜಾತ್ರೆ ತೆರೆ ಕಾಣಲಿದೆ.
7ರಂದು ಚಂಪಾಷಷ್ಠಿ: 7ರಂದು ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನೆರವೇರಲಿದೆ. ಆ ದಿನ
ಮಾರ್ಗಶಿರ ಶುದ್ಧ ಷಷ್ಠಿಯನ್ನು ಚಂಪಾಷಷ್ಠಿ ಎಂದು ಕರೆಯಲಾಗಿದೆ. ಇದು ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರಿಯವಾದ ದಿನ. ಈ ದಿನ ಕುಕ್ಕೆ ಕ್ಷೇತ್ರದಲ್ಲಿ ಸ್ವಾಮಿಯು ಸುಮುಹೂರ್ತದಲ್ಲಿ ಬ್ರಹ್ಮರಥಾರೋಹಣನಾಗುತ್ತಾನೆ. ಇದಕ್ಕಿಂತ ಮೊದಲು ಉಮಾಮಹೇಶ್ವರ ದೇವರು ಮತ್ತು ಸುಬ್ರಹ್ಮಣ್ಯ ದೇವರು ಒಂದೇ ಪಲ್ಲಕಿಯಲ್ಲಿ ಬಂದು, ಉಮಾಮಹೇಶ್ವರ ದೇವರು ಪಂಚಮಿ ರಥದಲ್ಲಿ, ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲಿ ವಿರಾಜಮಾನರಾಗುತ್ತಾರೆ. ಭಕ್ತಾದಿಗಳು ತಮ್ಮ ಹರಕೆಯಂತೆ, ಕಾಳುಮೆಣಸು, ಹಣ ಮತ್ತು, ಏಲಕ್ಕಿ ಇತ್ಯಾದಿ ಧವಸ ಧಾನ್ಯಗಳನ್ನು ರಥಕ್ಕೆ ಎಸೆದು ಕೃತಾರ್ಥರಾಗುತ್ತಾರೆ. ಅನೇಕರು ರಥವನ್ನು ಎಳೆಯುವುದರ ಮೂಲಕ ಕೃತಾರ್ಥರಾಗುತ್ತಾರೆ.5 ರಂದು ಹೂವಿನ ತೇರಿನ ಉತ್ಸವ: ಚೌತಿಯ ದಿನವಾದ 5ರಂದು ಗುರುವಾರ ರಾತ್ರಿ ಮಹಾಪೂಜೆ ಬಳಿಕ ಉತ್ಸವ ನಡೆದು ರಥಬೀದಿಯಲ್ಲಿ
ಕಾಶಿಕಟ್ಟೆವರೆಗೆ ಹೂವಿನ ತೇರಿನ ಉತ್ಸವ ನಡೆಯಲಿದೆ. ಹೂವಿನಿಂದ ಸಾಲಂಕೃತಗೊಂಡ ಹೂವಿನ ತೇರಿನ ಉತ್ಸವ ನೋಡುವುದೇ ಒಂದು ಭಾಗ್ಯ. ಈ ದಿನ ಉತ್ತರಾಧಿಮಠದಲ್ಲಿ ಮತ್ತು ಸವಾರಿ ಮಂಟಪದಲ್ಲಿ ಕಟ್ಟೆ ಪೂಜೆಗಳು ನಡೆಯುತ್ತದೆ.6 ರಂದು ಪಂಚಮಿ ರಥೋತ್ಸವ: 6 ರಂದು ಶುಕ್ರವಾರ ದೇವರ ಪಂಚಮಿ ರಥೋತ್ಸವ ನೆರವೇರಲಿದೆ. ಪಂಚಮಿಯಂದು ರಾತ್ರಿ ವಿವಿಧ ಸಂಗೀತ ವಾದ್ಯಗಳ ಅನೇಕ ನಾದಮಯ ಸುತ್ತುಗಳಲ್ಲಿ ತಲ್ಲೀನನಾದ ಕುಮಾರಸ್ವಾಮಿಯು ಪಂಚಮಿ ರಥದಲ್ಲಿ ವಿರಾಜಮಾನನಾಗುತ್ತಾನೆ. ಝಗಮಗಿಸುವ ವಿದ್ಯುತ್ ಅಲಂಕಾರದೊಂದಿಗೆ, ತಳಿರು ದೀಪದ ತೋರಣ, ಸೀಯಾಳ, ಅಡಕೆ, ಮುಂತಾದ ಫಲವಸ್ತುಗಳಿಂದ ಶೃಂಗಾರಗೊಂಡ ರಥದಲ್ಲಿ ಭಕ್ತ ಜನರ ನಡುವೆ ರಥೋತ್ಸವ ನಡೆಯುತ್ತದೆ,ನಂತರ ತೈಲಾಭ್ಯಂಜನ ನೆರವೇರವೇರಲಿದೆ.
ಭಾನುವಾರ ಪಾವನ ತೀರ್ಥ ಕುಮಾರಧಾರದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ನಡೆಯಲಿದೆ. ಬೆಳಗ್ಗೆ ದೇವಳದ ದ್ವಾದಶಿ ಮಂಟಪದಲ್ಲಿ ಓಕುಳಿ ಪೂಜೆ ನಡೆಯಲಿದೆ. ನಂತರ ದೇವಳದಿಂದ ಹೊರಟು ಬಿಲದ್ವಾರದ ಕಟ್ಟೆಯಲ್ಲಿ ಪೂಜೆ. ನಂತರ ಕುಮಾರಧಾರ
ನದಿಯಲ್ಲಿ ಮಾವು, ಬಾಳೆಗಳನ್ನೊಳಗೊಂಡು ತಳಿರು ತೋರಣ ಮತ್ತು ಹೂವುಗಳಿಂದ ಸಿಂಗರಿಸಲ್ಪಟ್ಟ ತೆಪ್ಪದಲ್ಲಿ ಶ್ರೀ ಸ್ವಾಮಿಯ ನೌಕಾವಿಹಾರ ನಡೆಯುತ್ತದೆ. ನಂತರ ಮಂತ್ರ ಘೋಷದೊಂದಿಗೆ ಕ್ಷೇತ್ರದ ಅವಭೃತೋತ್ಸವ ಸಂಪನ್ನವಾಗುತ್ತದೆ. ಅವಭೃತೋತ್ಸವದ ಬಳಿಕ ಕುಮಾರಧಾರ ನದಿತೀರದ ಕಟ್ಟೆಯಲ್ಲಿ ಪೂಜೆ ನೆರವೇರುತ್ತದೆ. ಅವಭೃತೋತ್ಸವ ಮುಗಿದ ಬಳಿಕ ದೇವಳದ ದ್ವಾದಶಿ ಮಂಟಪದಲ್ಲಿ ಪೂಜೆ ಮತ್ತು ಒಳಾಂಗಣದಲ್ಲಿ ಸಮಾಪನ ಪೂಜಾ ಕಾರ್ಯಕ್ರಮ ನೆರವೇರುತ್ತದೆ.ಪಂಚಮಿಯಂದು ಶ್ರೀ ಸ್ವಾಮಿಯು ಸವಾರಿ ಮಂಟಪದ ಕಟ್ಟೆಯಲ್ಲಿ ವಿರಾಜಮಾನನಾದ ಬಳಿಕ ಆಕರ್ಷಕ ಸಿಡಿಮದ್ದು ಬಾನಂಗಳದಲ್ಲಿ ಬಣ್ಣದ ಚಿತ್ತಾರವನ್ನು ಮೂಡಿಸಲಿದೆ. ಅಲ್ಲದೆ ಈ ಭಾರಿ ವಿಶೇಷವಾಗಿ ಕಾಶಿಕಟ್ಟೆ ಬಳಿಯ ಪಾರ್ಕಿಂಗ್ ಜಾಗದಲ್ಲಿ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಸುಬ್ರಹ್ಮಣ್ಯ ದೇವರ ಒಳಾಂಗಣ ಉತವ ನಡೆದ ಬಳಿಕ ರಥಬೀದಿ ಪ್ರವೇಶಿಸಿ ರಥೋತ್ಸವದ ವೇಳೆಯಲ್ಲಿ ಈ ಅತ್ಯಾಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಈ ವಿಶೇಷ ಹಸಿರು ಪಟಾಕಿಯ ಸಿಡಿಮದ್ದು ಪ್ರದರ್ಶನ ಕುಕ್ಕೆ ಬೆಡಿಗೆ ಸಾಕ್ಷಿಯಾಗಲಿದೆ.