ಬೆಂಗಳೂರು: ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಥವಾ ಅವರ ಸುಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಅವರು ಬಿಜೆಪಿ- ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಸೋಲು ಅನುಭವಿಸಿದ್ದರು. ಈ ನಿಟ್ಟಿನಲ್ಲಿ ನಿಖಿಲ್ ಅವರನ್ನು ಕಣಕ್ಕೆ ಇಳಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಬಹುತೇಕ ಈ ಕ್ಷೇತ್ರ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ಜೆಡಿ ಎಸ್ ಗೆ ಒಲಿಯುವ ಸಾಧ್ಯತೆ ಹೆಚ್ಚಿದೆ. ಆದರೆ, ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿರುವ ಸುಮಲತಾ ಅವರ ನಡೆ ಏನು ಎನ್ನುವುದು ಇದುವರೆಗೂ ನಿಗೂಢವಾಗಿದ್ದು ಅವರನ್ನು ರಾಜ್ಯಸಭೆ ಅಥವಾ ವಿಧಾನ ಪರಿಷತ್ತಿಗೆ ಕಳುಹಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.