ಬೆಳಗಾವಿ : ಅಥಣಿ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಲೀಲಾ ಬೂಟಾಳಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಭುವನೇಶ್ವರಿ ಬೀರಪ್ಪ ಯಕ್ಕಂಚಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಥಣಿ ಪುರಸಭೆಯಲ್ಲಿ ಒಟ್ಟು 27 ಸದಸ್ಯ ಬಲ ಹೊಂದಿದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಶಿವಲೀಲಾ ಬೂಟಾಳಿಯವರಿಂದ ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾಗಿತ್ತು.ಉಪಾಧ್ಯಕ್ಷ ಸ್ಥಾನ ಓಬಿಸಿ ಮಹಿಳೆಗೆ ಮೀಸಲಾಗಿತ್ತು.ಭುವನೇಶ್ವರಿ ಬೀರಪ್ಪ ಯಕ್ಕಂಚಿ ಅವರಿಂದ ಒಂದೇ ನಾಮಪತ್ರ ಸಲ್ಲಿಕೆಯಾಗಿತ್ತು.ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಅಧ್ಯಕ್ಷ ಉಪಾಧ್ಯಕ್ಷರು ಅವಿರೋಧವಾಗಿ ಅಧಿಕಾರದ ಗದ್ದುಗೆ ಏರಿದ್ದಾರೆ.ಇಂದು ಅಥಣಿ ಪುರಸಭೆ ಕಾಂಗ್ರೆಸ ತೆಕ್ಕೆಗೆ ಬಂದಿದ್ದು ಕಾಂಗ್ರೆಸ್ ಆಡಳಿತ ಪರ್ವ ಆರಂಭವಾಗಿದೆ .
ಅಥಣಿ ಶಾಸಕ ಲಕ್ಷ್ಮಣ ಸವದಿ ಮಾಧ್ಯಮಗಳೊಂದಿಗೆ ಮಾತನಾಡಿ, ಅಥಣಿ ಪುರಸಭೆಗೆ ಮುಂದಿನ 30 ತಿಂಗಳು ನೂತನವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ಇಂದು ಜರುಗಿದೆ. ಅಥಣಿ ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ಪಕ್ಷ ಭೇದವಿಲ್ಲದೆ ಭಿನ್ನಾಭಿಪ್ರಾಯ ಇಲ್ಲದೆ ಈ ಆಯ್ಕೆ ಜರುಗಿದೆ. ಬಹಳಷ್ಟು ಹಳೆಯದಾದ ಪುರಸಭೆಗೆ ಜೋಡಿ ಕೆರೆ ಅಭಿವೃದ್ಧಿ ಸೇರಿದಂತೆ ಪಟ್ಟಣದಲ್ಲಿ ಹತ್ತು ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳ ಬೇಕಾಗಿದೆ. ಬರುವ ದಿನಮಾನದಲ್ಲಿ ಪುರಸಭೆ ಸರ್ವಾಂಗಿಣ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಈ ವೇಳೆ ತಹಶೀಲ್ದಾರ್ ಸಿದ್ದರಾಯ ಬೋಸಗಿ ಚುನಾವಣಾಧಿಕಾರಿಯಾಗಿ ಮತ್ತು ಸಹಾಯಕರಾಗಿ ಮಹಮ್ಮದ್ ರಫಿ ಯತ್ನಟ್ಟಿ ಹಾಗೂ ಶಶಿಕಾಂತ ಡಂಗಿ, ಬಸವರಾಜ್ ಡಾಬಳ್ಳಿ , ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದರು.