ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹುಟ್ಟುಹಬ್ಬ ಫೆಬ್ರವರಿ 14. ಆದರೆ ಅವರು ಆ ದಿನವನ್ನು ಹುಟ್ಟುಹಬ್ಬವನ್ನಾಗಿ ಆಚರಿಸಿಕೊಳ್ಳುತ್ತಿಲ್ಲ. ಬದಲಾಗಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಜಯಗಳಿಸಿದ ಮೇ 12 ನ್ನು ತಮ್ಮ ಹುಟ್ಟುಹಬ್ಬವನ್ನಾಗಿ ಆಚರಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ. ಈ ಮೂಲಕವಾಗಿ ತಮ್ಮ ರಾಜಕೀಯ ಜೀವನಕ್ಕೆ ನವ ಚೈತನ್ಯ ನೀಡಿದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಜನತೆಗೆ ವಿಶೇಷ ಕೊಡುಗೆಯಾಗಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ಉಲ್ಲೇಖನೀಯ.

 

ಲಕ್ಷ್ಮೀ ಹೆಬ್ಬಾಳಕರ್. ಈ ಹೆಸರು ನಾಡಿನೆಲ್ಲೆಡೆ ಸುಪರಿಚಿತ. ಅವರು ಒಬ್ಬ ದಿಟ್ಟ ಮಹಿಳೆ. ಹಿಡಿದ ಕೆಲಸವನ್ನು ಛಲ ಬೀಳದೆ ಮಾಡುವ ಧೈರ್ಯವಂತೆ. ಈ ಕಾರಣಕ್ಕೆ ಅವರು ಇಂದು ಇಡೀ ನಾಡಿನ ಜನರ ಪ್ರೀತಿ ಸಂಪಾದನೆ ಮಾಡಿದ್ದಾರೆ.

ನಾಗರಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಬಂದಾಗ ಅವುಗಳನ್ನು ಸ್ಥಳದಲ್ಲಿ ಪರಿಹಾರ ಮಾಡಿಕೊಳ್ಳುವ ಮೂಲಕ ಜನತೆಯ ಪ್ರೀತಿಗೆ ಪಾತ್ರರಾದ ಇವರು

ಒಂದು ಕಾಲದಲ್ಲಿ ಭಾಗ್ಯ ಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕಿಯಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇಂದು ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಎರಡು ಸಕ್ಕರೆ ಕಾರ್ಖಾನೆಗಳ ಒಡತಿ. ಜೊತೆಗೆ ಸಹಕಾರಿ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಹಲವು ಸೊಸೈಟಿಗಳನ್ನು ಸ್ಥಾಪನೆ ಮಾಡುವ ಮೂಲಕ ಅವರು ಜನರ ಸ್ವಾವಲಂಬಿ ಮತ್ತು ಆರ್ಥಿಕ ಬೆನ್ನೆಲುಬಾಗಿ ಜನತೆಗೆ ನೆರವಾಗುತ್ತಿದ್ದಾರೆ. ಹೆಬ್ಬಾಳ್ಕರ್ ಅವರು ಆರಂಭದ ದಿನಗಳಲ್ಲಿ ಕರ್ನಾಟಕ ವಿಧಾನಸಭೆ ಮತ್ತು ಲೋಕಸಭೆಗೆ ಆಯ್ಕೆಯಾಗಲು ಸಾಧ್ಯವಾಗಲಿಲ್ಲ. ಇದರಿಂದ ಅವರು ಹತಾಶರಾಗಲಿಲ್ಲ. ಕ್ಷೇತ್ರದಲ್ಲಿ ಪಾದರಸದಂತೆ ಸಂಚರಿಸಿ ಅವರು ಜನರ ಪ್ರೀತಿಗೆ ಪಾತ್ರರಾದರು. ಜನರ ಮನಸ್ಸು ಗೆದ್ದರು. ಈ ಮೂಲಕ ಇದೀಗ ಸತತವಾಗಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರ ತೀರಾ ಹಿಂದುಳಿದ ಪ್ರದೇಶವಾಗಿದೆ. ಅಭಿವೃದ್ಧಿ ಕನಸು ಗಗನ ಕುಸುಮವೇ ಸರಿ. ಆದರೆ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಕ್ಷೇತ್ರದ ಶಾಸಕರಾದ ನಂತರ ಇಡೀ ಕ್ಷೇತ್ರದ ಚಿತ್ರಣ ಬದಲಾಗಿದೆ. ಈಗ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಎದ್ದು ಕಾಣುತ್ತಿದೆ. ರಸ್ತೆ, ಆರೋಗ್ಯ, ಶಿಕ್ಷಣ ಸೇರಿದಂತೆ ಸಕಲ ಮೂಲಭೂತ ಸೌಕರ್ಯಗಳು ಪಡೆದುಕೊಂಡಿದೆ. ಇಡೀ ಕ್ಷೇತ್ರದ ಅಭಿವೃದ್ಧಿ ಚಿತ್ರಣ ಬದಲಾಗಿದೆ. ಜಿಲ್ಲೆಯಲ್ಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಮುನ್ನುಗುತ್ತಿದೆ.

ತಾನು ಹಿಡಿದ ಕೆಲಸವನ್ನು ಬೆಂಬಿಡದೆ ಮಾಡುವ ಛಲ ಹೊಂದಿರುವ ಹೆಬ್ಬಾಳ್ಕರ್ ಅವರು ಜನತೆಯ ಆತ್ಮ ವಿಶ್ವಾಸದ ಪ್ರತೀಕವಾಗಿದ್ದಾರೆ. ಅವರು ಕ್ಷೇತ್ರದಲ್ಲಿ ಮಾಡುವ ಕೆಲಸಗಳು ಪ್ರತಿಯೊಬ್ಬರ ಮನ ಮೆಚ್ಚುವಂತಿವೆ. ಸಚಿವೆಯಾಗಿ ಯಶಸ್ವಿ ಖಾತೆಯನ್ನು ನಿಭಾಯಿಸುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈಗ ರಾಜ್ಯದ ಅತ್ಯಂತ ಪ್ರಭಾವಿ ಸಚಿವೆಯಾಗಿ ಬೆಳೆದು ನಿಂತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅತ್ಯಾಪ್ತರಾಗಿ ಗುರುತಿಸಿಕೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕ್ರಿಯಾಶೀಲ ಸಚಿವೆಯಾಗಿ ಇತರ ಸಚಿವರಿಗೆ ಮೇಲ್ಪಂಕ್ತಿಯಾಗಿದ್ದಾರೆ. ಇದನ್ನು ಸ್ವತಃ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯೇ ಸಾರ್ವಜನಿಕ ವೇದಿಕೆಗಳಲ್ಲಿ ಅವರ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಅವರಲ್ಲಿರುವ ಪ್ರತಿಭೆಗೆ ಸಾಕ್ಷಿಯಾಗಿದೆ.

ಒಬ್ಬ ಮಹಿಳೆಯಾಗಿ ಇಡೀ ರಾಜ್ಯವನ್ನು ಸುತ್ತಾಡುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಆದ ಕನಸು ಕಂಡಿದ್ದಾರೆ. ಈ ನಿಟ್ಟಿನಲ್ಲಿ ತಮ್ಮದೇ ಆದ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಹಂಬಲ ಹೊಂದಿದ್ದಾರೆ. ಮುಂಬರುವ ದಿನಗಳಲ್ಲಿ ಅವುಗಳನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರುವ ಮೂಲಕ ಬೆಳಗಾವಿಗೆ ನ್ಯಾಯೋಚಿತವಾಗಿ ಸರಕಾರದ ಸೌಲಭ್ಯಗಳನ್ನು ದೊರಕಿಸಿ ಕೊಡುವ ಹೆಬ್ಬಯಕೆ ಅವರದ್ದಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇಂದು ರಾಜ್ಯದ ಜನತೆಯ ಅಚ್ಚುಮೆಚ್ಚಿನ ಸಚಿವೆ. ಅವರ ಮಾತುಗಾರಿಕೆ, ಕೆಲಸಗಳನ್ನು ಮೆಚ್ಚದವರೆ ಅಪರೂಪ. ಒಟ್ಟಾರೆಯಾಗಿ ಹೇಳುವುದಾದರೆ ಲಕ್ಷ್ಮೀ ಹೆಬ್ಬಾಳ್ಕರ್ ಜನ ಮೆಚ್ಚಿದ ಸಚಿವೆ. ಜೊತೆಗೆ ಯಶಸ್ವಿ ಕೆಲಸಗಾರ್ತಿಯೂ ಹೌದು.

ಛಲವಂತೆ, ಪಾದರಸದಂತೆ ಚುರುಕು..

ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಿಂದ ರಾಜ್ಯಭಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಹೊರಹೊಮ್ಮಿದವರು ಬೆಳಗಾವಿಯ ಯುವ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ . ಅವರು ಎರಡು ವರ್ಷಗಳಿಂದ ಕರ್ನಾಟಕದ ರಾಜಕೀಯದಲ್ಲಿ ಅತ್ಯಂತ ಚಿರಪರಿಚಿತ ರಾಜಕಾರಣಿಯಾಗಿ ತಮ್ಮ ಛಾಪು ಮೂಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ದಿಟ್ಟ ನಾಯಕಿಯಾಗಿ ಅವರು ಪ್ರಖ್ಯಾತಿ ಗಳಿಸಿದವರಾಗಿದ್ದಾರೆ. ವಿಶೇಷವಾಗಿ ಪ್ರಭಾವಿ ಲಿಂಗಾಯತ ನಾಯಕಿಯಾಗಿ ಹೆಸರಾದವರು ಲಕ್ಷ್ಮಿ ಹೆಬ್ಬಾಳಕರ. ಅವರು ಉದ್ಯಮ, ಆಡಳಿತ ಸೇರಿದಂತೆ ಅತ್ಯಂತ ಎಲ್ಲಾ ವಿಷಯಗಳನ್ನು ಅತ್ಯಂತ ಪರಿಣತಿಯಾಗಿದ್ದು, ರಾಜ್ಯದ ಪ್ರಚಲಿತ ರಾಜಕಾರಣಿಗಳಲ್ಲಿ ಸದಾ ಸುದ್ದಿಯಲ್ಲಿದ್ದಾರೆ. ಒಂದೊಮ್ಮೆ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಹುದ್ದೆಗೆ ಏರುವ ಮಹಿಳೆಯರನ್ನು ಪರಿಗಣನೆಗೆ ತೆಗೆದುಕೊಳ್ಳುವುದಾದರೆ ಅದರಲ್ಲಿ ಮುಂಚೂಣಿಯಾಗಿ ಕೇಳಿ ಬರುವ ಹೆಸರು ಲಕ್ಷ್ಮೀ ಹೆಬ್ಬಾಳಕರ. ಅವರು ತೆರೆಮರೆಯಲ್ಲೇ ಅತ್ಯುತ್ತಮ ಆಡಳಿತ ನಡೆಸುತ್ತಿದ್ದು, ತಾವು ನಿರ್ವಹಿಸುತ್ತಿರುವ ಇಲಾಖೆಗೆ ಹೊಸ ಸ್ಪರ್ಶ ತಂದುಕೊಟ್ಟಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭವಿಷ್ಯದಲ್ಲಿ ದೊಡ್ಡ ಹುದ್ದೆಯ ಕನಸು ಕಂಡಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಟ್ಟಾ ಕಾರ್ಯಕರ್ತೆಯಾಗಿರುವ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಉದ್ಯಮ, ರಾಜಕಾರಣ, ಸಾಮಾಜಿಕ ಸೇವೆಯಲ್ಲಿ ಕಳೆದ ಎರಡುವರೆ ದಶಕಗಳಿಂದ ಹೆಸರು ಮಾಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇಂದು ಏರಿರುವ ಎತ್ತರ,ಅವರ ಮಹತ್ವಾಕಾಂಕ್ಷೆ, ಛಲ, ಬದುಕಿನ ಕಥೆಗಳು ಎಂಥವರನ್ನು ನಿಬ್ಬೆರಗಾಗುವಂತಿದೆ.

ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯಾಗಿ, ನಾಯಕಿಯಾಗಿ ಹಂತ ಹಂತವಾಗಿ ಮೇಲಕ್ಕೇರಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇಂದು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಖಾತೆಯ ಸಚಿವರಾಗಿದ್ದಾರೆ. ಆ ಇಲಾಖೆಯಲ್ಲಿ ದಕ್ಷ ಆಡಳಿತ ನೀಡುವ ಮೂಲಕ ಇಲಾಖೆಗೆ ಚೈತನ್ಯ ತಂದುಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮೀ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಹಿಸಿರುವ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ಯೋಜನೆ ಜಾರಿಯಾಗಲು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಗಲು ರಾತ್ರಿ ಶ್ರಮಿಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾದ ಯೋಜನೆಯನ್ನು ಜಾರಿಗೊಳಿಸುವಲ್ಲಿ ಕಾರಣೀಕರ್ತರಾಗಿದ್ದಾರೆ.

ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಿ ಇಂದು ಬೆಳಗಾವಿ ಜಿಲ್ಲೆಯಲ್ಲಿ ಪಕ್ಷಕ್ಕೆ ಗತ ವೈಭವ ತಂದು ಕೊಡುವಲ್ಲಿ ಅವರ ಕೊಡುಗೆ ಅತ್ಯಂತ ಗಣನೀಯವಾಗಿದೆ. ಕಾಲೇಜು ಹಂತದಲ್ಲಿಯೇ ಅವರಲ್ಲಿ ನಾಯಕತ್ವ ಗುಣ ಇತ್ತು. ಕಾಲೇಜು ವೇದಿಕೆಗಳಲ್ಲಿ ಅತ್ಯಂತ ನಿರ್ಭಯ ಹಾಗೂ ನಿರ್ಭೀತವಾಗಿ ತಮ್ಮ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸುತ್ತಿದ್ದರು. ಆ ಗುಣವೇ ಅವರ ರಾಜಕೀಯ ಜೀವನಕ್ಕೆ ನಾಂದಿ ಹಾಡಿತು.

ಲಕ್ಷ್ಮೀ ಹೆಬ್ಬಾಳ್ಕರ್ ಅವರು ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಬೆಳೆದವರಲ್ಲ. ಅವರಿಗೆ ಯಶಸ್ಸು ಎನ್ನುವುದು ಸುಲಭ ಸಾಧ್ಯವಾಗಿಯೂ ಬಂದಿಲ್ಲ. 2013ರಲ್ಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಕಾಂಕ್ಷಿಯಾಗಿ ಸ್ಪರ್ಧೆ ನಡೆಸಿದರು. ಮೊದಲ ಪ್ರಯತ್ನದಲ್ಲೇ ಅವರಿಗೆ ಸೋಲುಂಟಾಯಿತು. ನಂತರ 2014ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ನಡೆಸಿದರು. ಆದರೆ ಅಲ್ಲಿಯೂ ಸೋಲು ಅನುಭವಿಸಿದರು. ಅವರ ರಾಜಕೀಯ ಜೀವನ ಸೋಲಿನ ಕಹಿ ನೆನಪಿನಲ್ಲೇ ಆರಂಭವಾಯಿತು. ಆದರೆ ಕಾಂಗ್ರೆಸ್ ಪಕ್ಷ ಇವರನ್ನು ಕೈ ಬಿಡಲಿಲ್ಲ. ಅವರ ಪಕ್ಷ ನಿಷ್ಠೆ ಹಾಗೂ ಸೇವಾದಕ್ಷತೆಯನ್ನು ಗಮನಿಸಿದ ಪಕ್ಷ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕಕ್ಕೆ ಅಧ್ಯಕ್ಷನ್ನಾಗಿ ನೇಮಿಸಿತು. ಇಡೀ ರಾಜ್ಯದಲ್ಲಿ ಮಹಿಳಾ ಸಂಘಟನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡಿದ ಹೆಬ್ಬಾಳ್ಕರ್ ಅವರು ಪಕ್ಷಕ್ಕೆ ಗಣನೀಯ ಯಶಸ್ಸು ಹಾಗೂ ಶಕ್ತಿಯನ್ನು ತಂದು ಕೊಟ್ಟಿದ್ದಾರೆ.

ಜೀವನದಲ್ಲಿ ಛಲ ಬಿಡದ ಲಕ್ಷ್ಮೀ ಹೆಬ್ಬಾಳ್ಕರ್ ಅವರು 2018 ರಲ್ಲಿ ಮತ್ತೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿದರು. ಆ ಸಂದರ್ಭದಲ್ಲಿ ಅವರು ಅಭೂತಪೂರ್ವವಾದ ರೀತಿಯಲ್ಲಿ ಜಯಗಳಿಸಿದರು. ಕರ್ನಾಟಕ ವಿಧಾನಸಭಾ ಚುನಾವಣೆಗೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ಮತ್ತೆ ಸ್ಪರ್ಧೆ ನಡೆಸಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈಗ ರಾಜಕೀಯ ಚದುರಂಗದ ಪಟಗಳನ್ನು ಅರಿತು ಮೇಲಕ್ಕೆ ಏರಿದ್ದಾರೆ. ರಾಜಕೀಯವಾಗಿ ಅತ್ಯಂತ ಪಳಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈಗ ರಾಜಕಾರಣವನ್ನು ಅಳೆದು ಕುಡಿದಿದ್ದಾರೆ. ಭವಿಷ್ಯದಲ್ಲಿ ಇನ್ನೂ ಉತ್ತಮ ಹುದ್ದೆಗೆ ಏರುವ ಅದಮ್ಯ ಹಂಬಲ ಇಟ್ಟುಕೊಂಡಿರುವ ಅವರು ಮಹಿಳಾ ನಾಯಕಿಯಾಗಿ ತಮ್ಮ ಗುರಿ ತಲುಪಲು ದಿನೇ ದಿನೇ ಶ್ರಮಿಸುತ್ತಿದ್ದಾರೆ. ದಿಟ್ಟ ನಾಯಕಿಯಾಗಿ ಕರುನಾಡು ಕಂಡ ಅತ್ಯುತ್ತಮ ನಾಯಕಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಸಕ್ತ ರಾಜಕಾರಣದಲ್ಲಿ ಅತ್ಯಂತ ಮುಂಚೂಣಿಯಲ್ಲಿ ಬೆಳೆದು ನಿಂತಿದ್ದು ಸಿದ್ದರಾಮಯ್ಯ ಅವರ ಸರಕಾರದ ಅತ್ಯಂತ ಕ್ರಿಯಾಶೀಲ ಹಾಗೂ ಅತ್ಯುತ್ತಮ ಸಚಿವರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದು ಅವರ ನಾಯಕತ್ವಕ್ಕೆ ಇಡೀ ರಾಜ್ಯವೇ ಶಹಬ್ಬಾಸ್ ಗಿರಿ ನೀಡಿದೆ.