ಬೆಳಗಾವಿ: ಮಾಜಿ ಸೈನಿಕರು ನಿಮ್ಮ ಅನುಭವ, ಸೇವಾ ಮನೋಭಾವದ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದ್ದಾರೆ.

ಭಾನುವಾರ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಬಿ ಕೆ ಗ್ರಾಮದಲ್ಲಿ ಮಾಜಿ ಸೈನಿಕ ಅಭಿವೃದ್ಧಿ ಸೇವಾ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆಯಲ್ಲಿ, ಅದರಲ್ಲೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸೈನಿಕರು, ಮಾಜಿ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ನಮಗೆಲ್ಲ ಹೆಮ್ಮೆ ಪಡುವ ಸಂಗತಿ. ಬಹಳ ದೊಡ್ಡ ತ್ಯಾಗ ಮಾಡಿ, ದೇಶಸೇವೆಯಲ್ಲಿ ತೊಡಗಿಸಿಕೊಂಡು ನಿವೃತ್ತರಾಗಿರುವ ನೀವೆಲ್ಲ ಸೇರಿ ಸಂಘಟನೆ ಮಾಡಿಕೊಂಡಿದ್ದೀರಿ. ನಿಮಗೆ ನನ್ನಿಂದ ಯಾವೆಲ್ಲ ಸಹಾಯ, ಸಹಕಾರ ಬೇಕೋ ಕೊಡಲು ನಾನು ಸಿದ್ಧಳಿದ್ದೇನೆ. ಇದರ ಜೊತೆಗೆ ನೀವು ಸಮಾಜ ಸೇವೆಯ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಲು ಸಾಧ್ಯವಿದೆ ಎಂದು ಹೆಬ್ಬಾಳಕರ್ ಹೇಳಿದರು.

ನಿಮ್ಮನ್ನು ಹಾಗೂ ನಿಮ್ಮೆಲ್ಲ ಕುಟುಂಬದವರನ್ನು ನಾನು ವಿಶೇಷವಾಗಿ ಗೌರವದಿಂದ ಕಾಣುತ್ತೇನೆ. ದೇಶಕ್ಕಾಗಿ ನೀವು ಮಾಡಿರುವ ಕೆಲಸವನ್ನು ಕೇವಲ ಮಾತಿನಿಂದ ಹೇಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡೋಣ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರೋಣ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಮಾಜಿ ಸೈನಿಕ ಅಭಿವೃದ್ಧಿ ಸಂಘದ ಅಧ್ಯಕ್ಷ ರಾಮಾ ತಾರಿಹಾಳ್ಕರ್, ಉಪಾಧ್ಯಕ್ಷ ಅರುಣ ಪಾಟೀಲ,
ಗ್ರಾಮ ಪಂಚಾಯತ್ ಅಧ್ಯಕ್ಷೆ ಕೌಸರ ಜಹಾನ್ ಸೈಯದ್, ಕಾಕತಿ ಸಿಪಿಆಯ್ ಉಮೇಶ್, ಬಸಪ್ಪ ತಳವಾರ, ಅರ್ಚನಾ ಪಾಟೀಲ, ಸಂಧ್ಯಾ ಚೌಗುಲೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋವಿಂದ ರಂಗಪ್ಪಗೋಳ, ಹಿಂಡಾಲ್ಕೊ ಸಿನಿಯರ್ ಮ್ಯಾನೆಜರ್ ದಿನೇಶ್ ನಾಯ್ಕ್, ಗ್ರಾಮ ಪಂಚಾಯತ್ ಸಿಬ್ಬಂದಿ ದಯಾನಂದ ಕುಗಜಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಸಿ. ಕೆ. ತಳವಾರ, ಗ್ರಾಮ ಪಂಚಾಯತಿ ಸದಸ್ಯರು, ಮಾಜಿ ಸೈನಿಕ ಸೇವಾ ಸಂಘದ ಎಲ್ಲ ಸದಸ್ಯರು ಇದ್ದರು.