ಸವದತ್ತಿ (ಬೆಳಗಾವಿ): ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾರಥ್ಯದ ಕಾಂಗ್ರೆಸ್ ಸರ್ಕಾರ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಶ್ರಮಿಕರ ಅಭಿವೃದ್ಧಿಗಾಗಿ ಜಾರಿಗೆ ತರಲಾಗಿರುವ ಪಂಚ ಗ್ಯಾರಂಟಿ ಯೋಜನೆಗಳ ಉದ್ದೇಶ ಯಶಸ್ವಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿಯ ತಾಲೂಕು ಗುರು ಭವನದಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಕೊಟ್ಟ ಮಾತಿನಂತೆ ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದೆ ಎಂದರು.
ಕೊರೋನಾ ಮಾರಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನರು ಬೆಲೆ ಏರಿಕೆಯಿಂದಾಗಿ ತತ್ತರಿಸಿದ್ದರು. ಇಂಥ ಜನರ ಅನುಕೂಲಕ್ಕಾಗಿ ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿಗಳನ್ನು ಘೋಷಿಸಿತ್ತು. ಪಕ್ಷಾತೀತವಾಗಿ, ಯಾವುದೇ ಭೇದಭಾವ ಇಲ್ಲದೆ, ಮಧ್ಯವರ್ತಿಗಳ ಹಾವಳಿ ಇಲ್ಲದೆ ನಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿವೆ ಎಂದು ಸಚಿವರು ಹೇಳಿದರು.
ಜನರ ನೆಮ್ಮದಿಗಾಗಿ ಕಾರ್ಯರೂಪಕ್ಕೆ ತರಲಾದ ಈ ಯೋಜನೆಗಳು ಇಂದು ಮನೆ ಮನೆಗೆ ತಲುಪಿವೆ. ಸರ್ಕಾರ ಜಾರಿಗೆ ತಂದ ಯೋಜನೆಗಳಿಂದ ಕೂಲಿ ಕಾರ್ಮಿಕರು, ಕಡು ಬಡವರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಸವದತ್ತಿ ಯಲ್ಲಮ್ಮ ಹಾಗೂ ನನ್ನ ತಂದೆತಾಯಿಗಳ ಆಶೀರ್ವಾದ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನತೆಯ ಬೆಂಬಲದಿಂದಾಗಿ ಇಂದು ಸಚಿವೆಯಾಗಿರುವೆ. ವಾರ್ಷಿಕ 34 ಸಾವಿರ ಕೋಟಿ ಬಜೆಟ್ ಇರುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರುವ ಅದೃಷ್ಟ ನನ್ನ ಪಾಲಿಗೆ ಬಂತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಸವದತ್ತಿ ಕ್ಷೇತ್ರಕ್ಕೆ ಗೃಹಲಕ್ಷ್ಮಿ ಯೋಜನೆಗಾಗಿ ತಿಂಗಳಿಗೆ 15.99 ಕೋಟಿ ರೂಪಾಯಿ ನೀಡಲಾಗ್ತಿದೆ. ಒಂದು ವರ್ಷ ವರ್ಷಕ್ಕೆ 192 ಕೋಟಿ ನೀಡಲಾಗುತ್ತದೆ. ಐದು ವರ್ಷಕ್ಕೆ ಸಾವಿರ ಕೋಟಿಗಿಂತ ಹೆಚ್ಚು ಆಗುತ್ತದೆ. ಬಡವರಿಗಾಗಿ ಸಿದ್ದರಾಮಯ್ಯ ಇಂಥ ಉಪಯುಕ್ತ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಮೋದಿ, ಬಿಜೆಪಿಯವರು ಮಾಡದಂತ ಕೆಲಸವನ್ನು ಸಿದ್ದರಾಮಯ್ಯ ಮಾಡಿ ತೋರಿಸಿದ್ದಾರೆ ಎಂದು ಹೇಳಿದರು.
ಮೋದಿ ಯಾವುದೇ ಕಾರ್ಯಕ್ರಮಗಳನ್ನು ಮಾಡಿದರೂ ಅಂಬಾನಿ, ಅದಾನಿಯಂತ ಶ್ರೀಮಂತರಿಗಾಗಿ ಮಾತ್ರ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ, ಲಕ್ಷ್ಮೀ ಹೆಬ್ಬಾಳ್ಕರ್ ಯಾವುದೇ ಯೋಜನೆಗಳನ್ನು ಜಾರಿಗೆ ತಂದರೂ ರೈತರಿಗೆ, ಬಡವರಿಗಾಗಿ ಮಾತ್ರ. ಅಭಿವೃದ್ಧಿ ಕೆಲಸಗಳು ಕೇವಲ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಕಾಂಗ್ರೆಸ್ ಸರ್ಕಾರ ಇರುವವರೆಗೂ ನಮ್ಮ ಯೋಜನೆಗಳು ನಿಲ್ಲುವುದಿಲ್ಲ. ಬಿಜೆಪಿಯವರು ಯೋಜನೆಗಳ ಬಗ್ಗೆ ಅನಾವಶ್ಯಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಇಂಥ ಊಹಾಪೋಹಗಳಿಗೆ ಕಿವಿಗೊಡದೆ ಸರ್ಕಾರವನ್ನು ಮುಂದಿನ ದಿನಗಳಲ್ಲೂ ಆಶೀರ್ವದಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಈ ಭಾಗದ ಶಾಸಕರಾದ ವಿಶ್ವಾಸ್ ವೈದ್ಯ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಮೊದಲಾದವರು ಮಾತನಾಡಿದರು.
ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್, ತಹಶಿಲ್ದಾರ್ ಮಧುಸೂದನ್ ಕುಲಕರ್ಣಿ, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಯಶವಂತಕುಮಾರ್, ಬೈಲಹೊಂಗಲ ಎ.ಸಿ. ಪ್ರಭಾವತಿ, ಸಿಡಿಪಿಓ ಸುನಿತಾ, ಆರ್.ವಿ.ಪಾಟೀಲ, ಡಿ ಡಿ ಟೋಪೋಜಿ, ಮಲ್ಲು ಜಕಾತಿ, ಉಮೇಶ ಬಾಳಿ, ಚಂದು ಜಂಬಳಿ, ಮಹಾರಾಜಗೌಡ ಪಾಟೀಲ, ರಾಮನಗೌಡ ತಿಪ್ಪರಾಶಿ, ತಾಲೂಕಿನ ಫಲಾನುಭವಿಗಳು ಉಪಸ್ಥಿತರಿದ್ದರು.