ಹಿರೇಬಾಗೇವಾಡಿ (ಬೆಳಗಾವಿ): ರಾಜ್ಯದ ಕಾಂಗ್ರೆಸ್ ಸರಕಾರದ ಒಡೆದ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತ್ತಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಕೆರೆ ತುಂಬಿಸುವ ಯೋಜನೆಗೆ ಸರ್ಕಾರದಿಂದ 800 ಕೋಟಿ ರೂ,ಗಳ ಅನುದಾನ ಬಿಡುಗಡೆ ಮಾಡಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿಯಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ಹಾಗೂ ಸುತ್ತಮತ್ತಲಿನ ಗ್ರಾಮಸ್ಥರು ಆಯೋಜಿಸಿದ್ದ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿರೇಬಾಗೇವಾಡಿ ಗ್ರಾಮಕ್ಕೆ ಕೆರೆ ತುಂಬಿಸುವ ಯೋಜನೆ ತರಬೇಕೆಂದು 2018ರಿಂದ ತಾವು ನಡೆಸಿದ ಹೋರಾಟ, ಯೋಜನೆ ಮಂಜೂರಾಗಿ, ಕಾಮಗಾರಿ ಆರಂಭವಾದ ಸಂದರ್ಭದಲ್ಲಿ ಸರಕಾರ ಬದಲಾಗಿ, ಅದಕ್ಕೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರು ಅಡ್ಡಿಪಡಿಸಿದ ರೀತಿ, ಅದಕ್ಕೆ ಆಗಿನ 13 ಜನ ಬಿಜೆಪಿಯ ಸಂಸದರು, ಶಾಸಕರು ಸಹಿ ಹಾಕಿ ಯೋಜನೆಯನ್ನೇ ರದ್ಧುಪಡಿಸಿದ ಸಂದರ್ಭ ಎಲ್ಲವನ್ನೂ ನೆನಪಿಸಿದ ಲಕ್ಷ್ಮೀ ಹೆಬ್ಬಾಳಕರ್, ಜನರಿಗಾಗಿ ಮಾಡಿದ ಕೆಲಸಕ್ಕೆ ಅಡ್ಡಗಾಲು ಹಾಕುವ ಮನಸ್ಥಿತಿಗಳ ಕುರಿತು ಸಾಧ್ಯಂತವಾಗಿ ವಿವರಿಸಿದರು.

ನಾನು ವಿಶ್ವವಿದ್ಯಾಲಯ ಬರುವುದನ್ನು ವಿರೋಧಿಸಿರಲಿಲ್ಲ. ಸ್ವಲ್ಪ ಜಾಗವನ್ನು ಅದಾಗಲೇ ಮಂಜೂರಾಗಿದ್ದ ಕೆರೆತುಂಬಿಸುವ ಯೋಜನೆಗೆ ಬಿಟ್ಟುಕೊಡುವಂತೆ ಕೇಳಿದ್ದೆ. ಆದರೆ ಕೆರೆ ತುಂಬಿಸುವ ಯೋಜನೆ ಬರಲೇಬಾರದೆನ್ನುವ ಹುನ್ನಾರದಿಂದ ಏನೆಲ್ಲ ಮಾಡಿದರು. ನಮ್ಮ ರೈತರನ್ನು ಕುಡುಕರು ಎಂದು ಅವಮಾನ ಮಾಡಿದರು. ರೈತರ ಜಮೀನು ಪಡೆದು, ರೈತರಿಗೇ ನಡೆದಾಡಲು ಜಾಗವಿಲ್ಲದಂತೆ ಮಾಡಿದರು. ಆದರೆ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಹಿಡಿದ ಕೆಲಸ ಬಿಡದೆ ಯೋಜನೆಯನ್ನು ಮರು ಮಂಜೂರು ಮಾಡಿಸಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಅತ್ಯಂತ ಭಾವುಕರಾಗಿ ವಿವರಿಸಿದರು.

ಬಾಗೇವಾಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಅತ್ಯಂತ ಎತ್ತರಕ್ಕೆ ಒಯ್ಯಬೇಕೆನ್ನುವ ಕನಸು ಇಟ್ಟುಕೊಂಡು ನಾನು ಕೆಲಸ ಮಾಡುತ್ತಿದ್ದೇನೆ. ಯಾರ ಮೇಲೂ ದ್ವೇಷವಾಗಲಿ, ಬೇಸರವಾಗಲಿ ಇಲ್ಲ. ಎಲ್ಲವನ್ನೂ ಅಲ್ಲಲ್ಲೇ ಬಿಟ್ಟು ಮುನ್ನಡೆಯುವ ಸ್ವಭಾವ ನನ್ನದು. ಆದರೆ ಜನರಿಗಾಗಿ ಆಗಬೇಕಾದ ಕೆಲಸವನ್ನು ಉಡು ರೀತಿಯಲ್ಲಿ ಪಟ್ಟುಬಿಡದೆ ಮಾಡಿಸುತ್ತೇನೆ. ರೈತರಿಗೆ, ದನಕರುಗಳಿಗೆ, ಜಮೀನಿಗೆ ಶಾಶ್ವತವಾಗಿ ನೀರು ಒದಗಿಸುವ ಪುಣ್ಯದ ಕೆಲಸವನ್ನು ಮಾಡುತ್ತಿದ್ದೇನೆ. ನಬಾರ್ಡ್ ನಿಂದಲೇ ಯೋಜನೆ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ. ಈಗ ಯಾರೂ ಅಡ್ಡಿಪಡಿಸಲು ಸಾಧ್ಯವಿಲ್ಲ. ಜೊತೆಗೇ ವಿಶ್ವವಿದ್ಯಾಲಯವನ್ನೂ ಬೆಳೆಸುತ್ತೇನೆ ಎಂದು ಅವರು ಶಪಥ ಮಾಡಿದರು.

ಈಗಾಗಲೆ ರೈತರಿಗಾಗಿ ರಸ್ತೆ ನಿರ್ಮಾಣ ಮಾಡಲು 9 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ಗ್ರಾಮ ದೇವಿಯ ಜಾತ್ರೆ ಬರುತ್ತಿರುವುದರಿಂದ ಸುತ್ತಲಿನ 14 ದೇವಸ್ಥಾನಗಳ ಸೌಂದರ್ಯೀಕರಣ, ಗ್ರಾಮದ ಅಭಿವೃದ್ಧಿ ಎಲ್ಲವನ್ನೂ ಮಾಡಿಸುತ್ತಿದ್ದೇನೆ. ಹಿರೇಬಾಗೇವಾಡಿ ಜನರೊಂದಿಗೆ ನಾನಿದ್ದೇನೆ. ನನ್ನೊಂದಿಗೆ ನೀವೆಲ್ಲ ಇದ್ದೀರಿ. ಪರಸ್ಪರ ಬಿಟ್ಟು ಇರಲು ಸಾಧ್ಯವಿಲ್ಲ, ಬೇರೆ ಯಾರೂ ಈ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ. ಕ್ಷೇತ್ರದ ಸುಧಾರಣೆಗಾಗಿ ಎಂತಹ ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧಳಿದ್ದೇನೆ ಎಂದು ಸಚಿವರು ತಿಳಿಸಿದರು.

ಈ ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿಯವರು ಎಂತಹ ಪರಿಸ್ಥಿತಿಯಲ್ಲಿ ಅಧಿಕಾರ ಬಿಟ್ಟು ಹೋದರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮಂಜೂರಾಗಿದ್ದಕ್ಕಿಂತ 2 -3 ಪಟ್ಟು ಹೆಚ್ಚು ಮೊತ್ತದ ವರ್ಕ್ ಆರ್ಡರ್ ಕೊಟ್ಟು ಹೋದರು. ಅವನ್ನೆಲ್ಲ ಕ್ಲಿಯರ್ ಮಾಡುವ ಜೊತೆಗೆ, ನಾವು ಜನರಿಗೆ ವಚನ ಕೊಟ್ಟಿದ್ದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಇಡೀ ರಾಜ್ಯದಲ್ಲಿ ಒಡೆದ ಮನಸ್ಸುಗಳನ್ನು ಕಟ್ಟುವ ಜೊತೆಗೆ ಅಭಿವೃದ್ಧಿಯನ್ನೂ ಮಾಡುತ್ತಿದ್ದೇವೆ. ನಮ್ಮ ಸರಕಾರಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಲಕ್ಷ್ಮೀ ಹೆಬ್ಬಾಳಕರ್ ವಿನಂತಿಸಿದರು.

ಅತ್ಯಂತ ಅಪರೂಪದ ಕಾರ್ಯಕ್ರಮದಲ್ಲಿ ಸಮಗ್ರ ಗ್ರಾಮಸ್ಥರ ಪರವಾಗಿ ಸಚಿವರನ್ನು ಸನ್ಮಾನಿಸಿದ್ದಲ್ಲದೆ, ಪ್ರತಿ ಗ್ರಾಮದ ಜನರೂ ಪ್ರತ್ಯೇಕವಾಗಿಯೂ ಸತ್ಕರಿಸಿದರು. ಅಲ್ಲದೆ ಸಮಾರಂಭದಲ್ಲಿ ಭಾಗವಹಿಸಿದ್ದ ಮಠಾಧೀಶರು ಸಹ ಸಚಿವರ ಕಾರ್ಯವನ್ನು ಪ್ರಶಂಸಿಸಿ, ಸನ್ಮಾನ ಮಾಡಿದರು.

ಬಡೇಕೊಳ್ಳಮಠದ ಶ್ರೀ ನಾಗೇಂದ್ರ ಮಹಾಸ್ವಾಮಿಗಳು, ಮುತ್ನಾಳ ಕೇದಾರ ಶಾಖಾಪೀಠದ ಶ್ರೀ ಶಿವಾನಂದ ಶಿವಾಚಾರ್ಯರು, ಅರಳಿಕಟ್ಟಿಯ ಶ್ರೀ ಶಿವಮೂರ್ತಿ ದೇವರು, ಜಾಲಿಕರೆಮ್ಮ ದೇವಿಯ ಆರಾಧಕರಾದ ಶ್ರೀ ಉಳವಪ್ಪ ಅಜ್ಜನವರು, ಹಿರೇಬಾಗೇವಾಡಿಯ ಅಶ್ರಫ್ ಪೀರ್ ಖಾದ್ರಿ ಅಜ್ಜನವರು, ತಾರಿಹಾಳದ ಶ್ರೀ ಅಡವಿ ಸಿದ್ದೇಶ್ವರ ದೇವರು ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಸಿ ಸಿ ಪಾಟೀಲ, ಸುರೇಶ ಇಟಗಿ, ಶ್ರೀಕಾಂತ ಮಾದುಬರಮಣ್ಣವರ್, ಸ್ಮಿತಾ ಪಾಟೀಲ, ಅಡಿವೇಶ ಇಟಗಿ, ಪ್ರಕಾಶ ಜಪ್ತಿ, ಪುಷ್ಪ ನಾಯ್ಕರ್, ಗೌಸಮೊದ್ದಿನ ಜಾಲಿಕೊಪ್ಪ, ಉಷಾತಾಯಿ ಶಿಂತ್ರೆ, ನಿಂಗಪ್ಪ ತಳವಾರ, ರವಿ‌ ಮೇಳೆದ, ಸುರೇಶ ಕಂಬಿ, ಸಮೀನಾ ನದಾಫ್, ಜಗದೀಶ್ ಯಳ್ಳೂರ, ರುದ್ರಗೌಡ ಪಾಟೀಲ, ಬಸವಂತ ನಾಯ್ಕರ್, ನಾಗಪ್ಪ ಬಾಗೇವಾಡಿ, ಸಿದ್ದು ಹಾವಣ್ಣವರ, ಶಿವಾನಂದ ಚಂಡು, ಚಂಬಪ್ಪ ಉಳ್ಳಾಗಡ್ದಿ ಮೊದಲಾದವರು ಉಪಸ್ಥಿತರಿದ್ದರು.