ದೆಹಲಿ:
ದೆಹಲಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿತೀಶಕುಮಾರ ಅವರನ್ನು ಬಿಹಾರದ ಆಡಳಿತಾರೂಢ ಜನತಾ ದಳ (ಯುನೈಟೆಡ್) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷ ಸ್ಥಾನದಿಂದ ಲಲ್ಲನ್ ಸಿಂಗ್ ಕೆಳಗಿಳಿದ ಕೆಲವೇ ನಿಮಿಷಗಳಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರನ್ನು ಮರು ನೇಮಕಗೊಳಿಸಲಾಯಿತು. ಈ ಮೂಲಕ ಲಲ್ಲನ್‌ ಸಿಂಗ್ ಕುರಿತು ಎದ್ದಿದ್ದ ಊಹಾಪೋಹಗಳಿಗೆ ಕೊನೆಗೂ ತೆರೆಬಿದ್ದಿದೆ.

ಸಭೆಯ ನಂತರ ತಕ್ಷಣವೇ ಸುದ್ದಿಗಾರರೊಂದಿಗೆ ಮಾತನಾಡಿದ ಲಲ್ಲನ್‌ ಸಿಂಗ್, ಪಕ್ಷದಲ್ಲಿನ ಭಿನ್ನಾಭಿಪ್ರಾಯದ ವಿದ್ಯಮಾನವನ್ನು ಅಲ್ಲಗಳೆದರು. “ಕೋಪ? ಏನು ಕೋಪ? ನಾನು ಯಾಕೆ ಕೋಪಗೊಳ್ಳಬೇಕು? ನಾನು ಈ ಮಾತನ್ನು ಕೇಳುತ್ತಿರುವುದು ಇದೇ ಮೊದಲು” ಎಂದು ಅವರು ಹೇಳಿದರು.

ಆದರೆ, ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿಜೆಪಿಯ ವಿಜಯಕುಮಾರ ಸಿನ್ಹಾ ಅವರು, ಈ ಬಗ್ಗೆ ಪ್ರತಿಕ್ರಿಯಿಸಿ “ಸ್ವಾಭಿಮಾನಿ ವ್ಯಕ್ತಿ” ಈ ರೀತಿಯ “ವಿದಾಯ” ವನ್ನು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಹೇಳಿದರು. “ಪಕ್ಷ ಮತ್ತು ನಾಯಕತ್ವದ ಮೇಲೆ ವಿಶ್ವಾಸ ಇಲ್ಲದಿರುವಾಗ… ಹುದ್ದೆಗೇರುವುದರಲ್ಲಿ ಅರ್ಥವಿಲ್ಲ. ಮೊದಲೇ ರಾಜೀನಾಮೆ ನೀಡಬೇಕಿತ್ತು…” ಎಂದು ಹೇಳಿದ್ದಾರೆ.

ಲಾಲು ಯಾದವ್ ಅವರ ಪುತ್ರ ಮತ್ತು ಉಪಮುಖ್ಯಮಂತ್ರಿಯಾಗಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳಕ್ಕೆ ಸ್ವಲ್ಪ ಹೆಚ್ಚು ನಿಕಟವಾಗಿರುವುದರಿಂದ ಲಲ್ಲನ್‌ ಸಿಂಗ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಹಿನ್ನಲೆ ರಾಜೀನಾಮೆಗೆ ಕಾರಣ ಎನ್ನಲಾಗಿದೆ. ಅಧ್ಯಕ್ಷರಾಗಿ ಲಲನ್ ಸಿಂಗ್ ಅವರ ಎರಡು ವರ್ಷಗಳ ಅವಧಿಯೂ ಪೂರ್ಣಗೊಂಡಿದೆ. ಇದೀಗ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಂತರ ಪಕ್ಷದ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರವನ್ನು ಅನುಮೋದಿಸಲಾಗಿದೆ.