ಹೈದರಾಬಾದ್: ಹಿಂದೂ ದೇವಸ್ಥಾನಗಳನ್ನು ಸರ್ಕಾರದ ಹಿಡಿತದಿಂದ ಮುಕ್ತವಾಗಿಸಬೇಕು ಎಂಬ ಉದ್ದೇಶದ ರಾಷ್ಟ್ರವ್ಯಾಪಿ ಅಭಿಯಾನವನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಗನ್ನವರಂನಲ್ಲಿ ಭಾನುವಾರ ಆರಂಭಿಸಿದೆ. ಈ ಅಭಿಯಾನಕ್ಕೆ ‘ಹೈಂದವ ಶಂಖಾರವಂ’ ಎಂಬ ಹೆಸರು ಇಡಲಾಗಿದೆ.
ದೇಶದ ವಿವಿಧೆಡೆಗಳಿಂದ ಬರುವ ವಿಎಚ್‌ಪಿ ಕಾರ್ಯಕರ್ತರು, ಮಠಾಧೀಶರು, ವಿಎಚ್‌ಪಿ ರಾಷ್ಟ್ರೀಯ ಪ್ರತಿನಿಧಿಗಳು, ಬಿಜೆಪಿ ಮುಖಂಡರು ಮತ್ತು ಆಧ್ಯಾತ್ಮಿಕ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
‘ಹಿಂದೂ ಸಮಾಜವನ್ನು ವಿಭಜಿಸುವ ಕಾರ್ಯತಂತ್ರದ ಭಾಗವಾಗಿ ಈಸ್ಟ್ ಇಂಡಿಯಾ ಕಂಪನಿಯು 1817ರಲ್ಲಿ ದೇವಸ್ಥಾನಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಅದಾದ ನಂತರದಲ್ಲಿ ಸರ್ಕಾರಗಳು ದೇವಸ್ಥಾನಗಳ ಮೇಲೆ ಅಧಿಕಾರ ಹೊಂದಿವೆ. ದೇಶದಾದ್ಯಂತ ದೇವಸ್ಥಾನಗಳಿಗೆ ಸೇರಿದ ಲಕ್ಷಾಂತರ ಎಕರೆ ಜಮೀನು ಅತಿಕ್ರಮಣಕ್ಕೆ ಒಳಗಾಗಿದೆ. ಬೇರೆ ಸಂಸ್ಥೆಗಳಿಗೆ ಅನ್ವಯವಾಗದ ನಿಯಮಗಳನ್ನು ದೇವಸ್ಥಾನಗಳ ಮೇಲೆ ಹೇರಲಾಗುತ್ತಿದೆ. ಕೆಲವೆಡೆ ನಿರ್ವಹಣೆಯ ಹೊಣೆಯನ್ನು ಹಿಂದೂಗಳಲ್ಲದವರಿಗೆ ನೀಡಲಾಗಿದೆ.
ಇಂತಹ ವ್ಯಕ್ತಿಗಳು ದೇವಸ್ಥಾನಗಳ ಪಾವಿತ್ರ್ಯವನ್ನು ಕಾಯುವ ಹಾಗೂ ಹಿಂದೂ ಧರ್ಮವನ್ನು ರಕ್ಷಿಸುವ ನಿರೀಕ್ಷೆ ಇಟ್ಟುಕೊಳ್ಳುವುದು ಹೇಗೆ’ ಎಂದು ವಿಎಚ್‌ಪಿ ರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಪ್ರಶ್ನಿಸಿದರು.
ದೇವಸ್ಥಾನಗಳಲ್ಲಿನ ಸಾಂಪ್ರದಾಯಿಕ ಆಚರಣೆಗಳಿಗೆ ಕೆಲವರು ಅಡ್ಡಿ ಉಂಟುಮಾಡಿದ್ದಾರೆ, ಆಡಳಿತ ಮಂಡಳಿ ಹೆಸರಿನಲ್ಲಿ ದೇವಸ್ಥಾನಗಳನ್ನು ರಾಜಕೀಯ ಪುನರ್ವಸತಿಯ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ, ದೇವಸ್ಥಾನಗಳನ್ನು ಪವಿತ್ರ ಕೇಂದ್ರಗಳನ್ನಾಗಿ ಕಾಪಾಡುವ ಬದಲು ಅವುಗಳನ್ನು ವರಮಾನದ ಮೂಲಗಳನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ದೇವಸ್ಥಾನಗಳು ಹಿಂದೊಮ್ಮೆ 15 ಲಕ್ಷ ಎಕರೆ ಜಮೀನು ಹೊಂದಿದ್ದವು, ಈಗ 4.5 ಲಕ್ಷ ಎಕರೆ ಮಾತ್ರ ಉಳಿದುಕೊಂಡಿದೆ ಎಂದು ತೆಲುಗು ಭಾಷಿಕ ರಾಜ್ಯಗಳಲ್ಲಿ ಪ್ರಸಿದ್ಧರಾಗಿರುವ ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ ಹೇಳಿದರು.