
ಪುತ್ತೂರು: ಮಳೆ ಗೆ ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿಯುತ್ತಿದೆ, ಗಾಳಿಗೆ ಮರಗಳೂ ಕಂಬದ ಮೇಲೆ ಬಿದ್ದು ಹಾನಿಯಾಗಿದೆ. ಮಳೆಯ ಕಾರಣಕ್ಕೆ ಗ್ರಾಮಾಂತರ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಕರೆಂಟ್ ಇಲ್ಲ ಎಂಬ ದೂರುಗಳು ಬಂದಿದೆ. ಕಂಬ ಹಾಕಲು ಎರಡು ದಿನ ಬೇಕಾ? ದುರಸ್ಥಿ ಮಾಡಲು ಕಾರ್ಮಿಕರ ಕೊರತೆ ಇದೆಯಾ? ಏನೇ ಆಗಲಿ ವಿದ್ಯುತ್ ಸಮಸ್ಯೆಗೆ ತಕ್ಷಣ ಸ್ಪಂದಿಸಿ ನಾನು ಫೀಲ್ಡಿಗೆ ಇಳಿಯುವ ಹಾಗೆ ಮಾಡಬೇಡಿ ಎಂದು ಶಾಸಕ ಅಶೋಕ್ ರೈ ಅವರು ಮೆಸ್ಕಾಂ ಅಧಿಕಾರಿಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ.
ಮಳೆಗಾಲದ ಆರಂಭದ ದಿನಗಳಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಹಾನಿಯಾಗುವ ವಿಚಾರ ಮೊದಲೇ ಗೊತ್ತಿದ್ದು ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮೆಸ್ಕಾಂ ಮಾಡಿಕೊಳ್ಳುವಂತೆ ಈ ಹಿಂದೆಯೇ ಸೂಚಿಸಲಾಗಿತ್ತುಯ. ಕಂಬ ಮುರಿದು ಬಿದ್ದಲ್ಲಿ ಅದನ್ನು ತಕ್ಷಣ ಹಾಕುವ ಕೆಲಸ ಆಗಬೇಕು. ಇದಕ್ಕಾಗಿ ಹೆಚ್ಚುವರಿ ಕಾರ್ಮಿಕರನ್ನು ಪುತ್ತೂರು ವಿಭಾಗಕ್ಕೆ ಕಳುಹಿಸಲಾಗಿದೆ. ಎಷ್ಟು ಹೆಚ್ಚುವರಿ ಸಿಬಂದಿಗಳು ಬೇಕೋ ಅಷ್ಟು ಮಂದಿಯನ್ನು ನೇಮಕ ಮಾಡುವಂತೆ ಈ ಹಿಂದೆ ಸೂಚನೆಯನ್ನು ನೀಡಿದ್ದೆ. ಈಗ ಕಾರ್ಮಿಕರಿಲ್ಲ ಎಂಬ ವಿಷಯ ಬರಬಾರದು. ಮಳೆಗಾಲಕ್ಕೆ ಏನೆಲ್ಲಾ ಸಿದ್ದತೆ ಬೇಕೋ ಅದೆಲ್ಲವನ್ನೂ ಮಾಡಿಕೊಳ್ಳಬೇಕು. ಹೆಚ್ಚುವರಿ ಕಾರ್ಮಿಕರು ಬೇಕಿದ್ದರೆ, ವಾಹನಗಳು, ಉಪಕರಣಗಳು, ಯಂತ್ರಗಳು ಬೇಕಿದ್ದರೆ ತಿಳಿಸಿ ಅದನ್ನು ತರಿಸುವ ಕೆಲಸ ಮಾಡಬೇಕು ಎಂದು ಶಾಸಕರು ಸೂಚಿಸಿದರು.
ಮೂರು ದಿನ ಯಾಕೆ ?
ಕಂಬ ಹಾಕಲು ಮೂರು ದಿನ ಯಾಕೆ ಬೇಕು? ಕರ‍್ವೇಲು, ಈಶ್ವರಮಂಗಲ, ಪಾಣಾಜೆ, ಬೆಟ್ಟಂಪಾಡಿ ಯ ಕೆಲವು ಕಡೆಗಳಲ್ಲಿ ಮೂರು ದಿನಗಳಿಂದ ಕರೆಂಟಿಲ್ಲ ಎಂಬ ಕರೆಗಳು ಬಂದಿದೆ. ಕಂಬ ಹಾಕಲು ಮೂರು ದಿನ ಯಾಕೆ? ಮೂರು ದಿನ ಕರೆಂಟಿಲ್ಲದಿದ್ದರೆ ಆ ಮನೆಯವರು ಏನು ಮಾಡಬೇಕು? ಕರೆಂಟಿಲ್ಲದೆ ಮಕ್ಕಳು ಮನೆಯಲ್ಲಿ ಹೇಗಿರಬೇಕು? ಮೊಬೈಲ್ ಚಾರ್ಜ್‌ಗೆ ಇಡುವುದಾದರೂ ಹೇಗೆ? ಕೆಲಸದಲ್ಲಿ ಉದಾಸೀನತೆ ಮಾಡದೆ ಎಲ್ಲೆಲ್ಲಿ ಕಂಬ ಬಿದ್ದಿದೆಯೋ ಅದನ್ನು ತಕ್ಷಣ ಸರಿಪಡಿಸಬೇಕು. ಮೂರು ನಾಲ್ಕು ದಿನ ಕರೆಂಟಿಲ್ಲದೆ ಇರುವಂತಾಗಬಾರದು. ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಬೆಟ್ಟಂಪಾಡಿ ಜೆಇ ನಾಟ್‌ರೀಚೆಬಲ್…
ಬೆಟ್ಟಂಪಾಡಿ ಜೆಇ ಅವರಿಗೆ ಶಾಸಕರು ಕರೆ ಮಾಡಿದಾಗ ಅದು ನಾಟ್ ರೀಚೆಬಲ್ ಇತ್ತು ಈ ಬಗ್ಗೆ ಇಇ ರಾಮಚಂದ್ರ ಅವರಲ್ಲಿ ಪ್ರಶ್ನಿಸಿದ ಶಾಸಕರು ಮಳೆಗಾಲದಲ್ಲಿ ಅಲರ್ಟ್ ಆಗಿರಬೇಕು ಎಂಬ ಸೂಚನೆ ನಿಮಗೆ ಬಂದಿಲ್ವ? ಆ ವಿಚಾರ ಜೆಇ ಯವರಿಗೆ ಗೊತ್ತಿಲ್ವ? ಜನ ಕರೆ ಮಾಡುವಾಗ ನಾಟ್ ರೀಚೆಬಲ್ ಬಂದರೆ ಜನರು ಏನು ಮಾಡಬೇಕು? ಗ್ರಾಮಾಂತರ ಭಾಗದಲ್ಲಿ ಕೆಲಸ ಮಾಡುವ ಜೆಇಗಳು ೨೪ ಗಠಂಎಯೂ ಅಲರ್ಟ್ ಆಗಿರಬೇಕು. ಜನ ತೊಂದರೆಯಲ್ಲಿರುವಾಗ ಯಾರ ನಂಬರ್ ಕೂಡಾ ನಾಟ್‌ರೀಚೆಬಲ್ ಆಥವಾ ಸುಚ್ಚಾಫ್ ಆಗದಂತೆ ಸೂಚನೆಯನ್ನು ನೀಡಿ ಎಂದು ಶಾಸಕರು ತಿಳಿಸಿದರು.
ನನ್ನಿಂದ ಏನಾಗಬೇಕು ತಿಳಿಸಿ
ನನ್ನಿಂದ ನಿಮಗೆ ಏನು ಸಹಾಯ ಬೇಕು ಕೂಡಲೇ ತಿಳಿಸಬೇಕು. ಕಾರ್ಮಿಕರು, ವಾಹನ, ಉಪಕರಣ ಏನಾದರೂ ಬೇಕಿದ್ದರೂ ತಿಳಿಸಿ ನಾನು ನಿಮಗೆ ವ್ಯವಸ್ಥೆ ಮಾಡಲು ಸಿದ್ದನಿದ್ದೇನೆ. ಜನರಿಗೆ ತೊಂದರೆಯಾಗದಂತೆ ಮೆಸ್ಕಾಂ ಕೆಲಸ ಮಾಡಬೇಕು. ಜನರಿಗೆ ತೊಂದರೆಯಾದರೆ ನಾನು ಸುಮ್ಮನಿರಲ್ಲ ಎಂದು ಅದಿಕಾರಿಗೆ ಸೂಚಿಸಿದರು.
ಭಾರೀ ಮಳೆಯ ಹಿನ್ನೆಲೆ ಅಧಿಕಾರಿಗಳು ಅಲರ್ಟ್ ಆಗಿರುವಂತೆ ಶಾಸಕ ಅಶೋಕ್ ರೈ ಸೂಚನೆ
ಪುತ್ತೂರು: ಈ ಬಾರಿ ಮುಂಗಾರು ಮಳೆ ಒಂದು ವಆರದ ಮುಂಚೆಯೇ ಆಗಮಿಸಿದ್ದು ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಅನೇಕ ಕಡೆ ಹಾನಿಯುಂಟಾಗಿದೆ, ಹಾನಿಗೊಳಗಾದ ಸ್ಥಳಗಳಿಗೆ ತಕ್ಷಣ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಸ್ಪಂದನೆ ನೀಡುವುದರ ಜೊತೆ ೨೪ ಗಠಂಎಯೂ ಅಲರ್ಟ್ ಆಗಿರಬೇಕು ಎಂದು ಶಾಸಕ ಅಶೋಕ್ ರೈ ಸೂಚನೆಯನ್ನು ನೀಡಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು“ ಮಳೆಗಾಲಕ್ಕೆ ಪೂರ್ವ ಸಿದ್ದತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಹಿಂದೆಯೇ ಸೂಚನೆಯನ್ನು ನೀಡಲಾಗಿದೆ. ಬೇಕಾದ ಎಲ್ಲಾ ಸಿದ್ದತೆಗಳನ್ನು ಇಲಾಖೆ ಮಾಡಿಕೊಂಡಿದೆ. ಗಾಳಿ ಮಳೆಗೆ ಅಲ್ಲಲ್ಲಿ ವಿದ್ಯುತ್ ಕಂಬಗಳು ಉರುಳಿದ್ದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮುರಿದು ಬಿದ್ದ ಕಂಬಗಳ ಮರು ಜೋಡನೆ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ಮೆಸ್ಕಾಂ ಇಲಾಖೆಗೆ ಖಡಕ್ ಸೂಚನೆಯನ್ನು ನೀಡಿದ್ದೇನೆ. ಎಲ್ಲೆಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆಯೋ ಅದನ್ನು ಕೂಡಲೇ ದುರಸ್ಥಿ ಮಾಡಿ ವಿದ್ಯುತ್ ಪೂರೈಕೆ ಮಾಡುವಂತೆ ತಿಳಿಸಿದ್ದೇನೆ. ಮಳೆ ನೀರು ಸರಾಗವಾಗಿ ಹರಿದು ಹೋಗುವಲ್ಲಿ ಜನರ ಸಹಕಾರವೂ ಅಗತ್ಯವಾಗಿದೆ. ಕೌಪೌಂಡ್ ವಾಲ್ ಕಟ್ಟುವಾಗ ಮಳೆ ನೀರು ಸಂಗ್ರಹಣೆಯಾಗಿ ಪಕ್ಕದ ಮನೆಯವರಿಗೆ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ನೀರನ್ನು ತಡೆಯಲು ಸಾಧ್ಯವಿಲ್ಲದ್ದರಿಂದ ಅದು ಹರಿದು ಹೋಗುವುವುದಕ್ಕೆ ನಾವು ತಡೆಯನ್ನು ಮಾಡಬರದು ಎಂದು ಶಾಕರು ತಿಳಿಸಿದರು.
ಹಾನಿಯಾದಲ್ಲಿ ತಕ್ಷಣ ತೆರಳಬೇಕು
ಗ್ರಾಮೀಣ ಭಾಗದಲ್ಲಿ ಮಳೆಗೆ ಮನೆಗೆ ಅಥವಾ ಇನ್ಯಾವುದೇ ರೀತಿಯ ಹಾನಿಯಾದಲ್ಲಿ ಗ್ರಾಮ ಕರಣಿಕರು ತಕ್ಷಣ ಅಲ್ಲಿಗೆ ಭೇಟಿ ನೀಡಬೇಕು. ರಾತ್ರಿ ಘಟನೆ ನಡೆದರೂ ರಾತ್ರಿಯೇ ಭೇಟಿ ನೀಡಬೇಕು. ನೊಂದವರಿಗೆ ಏನೆಲ್ಲಾ ಸಹಾಯ ಬೇಕೋ ಅದೆಲ್ಲವನ್ನೂ ಇಲಾಖೆಯಿಂದ ಮಾಡಬೇಕು. ಪರಿಹಾರ ಕೊಡುವ ವಿಚಾರದಲ್ಲಿಯೂ ಕಂದಾಯ ಅಧಿಕಾರಿಗಳು ತಕ್ಷಣ ಜಾಗೃತರಾಗಿರಬೇಕು ಎಂದು ಸೂಚನೆಯನ್ನು ನೀಡಿದರು. ಅಪಾಯ ಯಕಾರಿ ಮನೆಗಳಿದ್ದಲ್ಲಿ ಅಲ್ಲಿಂದ ಆ ಕುಟುಂಬವನ್ನು ಸ್ಥಳಾಂತರಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಒಟ್ಟಿನಲ್ಲಿ ಜನರಿಗೆ ತೊಂದರೆಯಾಗದಂತೆ ಇಲಾಖಾ ಅಧಿಕಾರಿಗಳು ಸ್ಪಂದನೆಯನ್ನು ನೀಡಬೇಕು ಎಂದು ಶಾಸಕರು ತಿಳಿಸಿದರು.