ಬೆಳಗಾವಿ :
ಇಲ್ಲಿ ಪ್ರತಿ ವರ್ಷ ನಡೆಯುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನಕ್ಕೆ ಆಗಮಿಸುವ ಶಾಸಕರು ಹಾಗೂ ಸಚಿವರಿಗೆ ತಂಗಲು ಅನುಕೂಲವಾಗುವಂತೆ ಶಾಸಕರ ಭವನ ನಿರ್ಮಿಸಬೇಕು ಎನ್ನುವುದು ಹಳೆಯ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಇದೀಗ ಸಭಾಪತಿ ಬಸವರಾಜ ಹೊರಟ್ಟಿ ಅವರು ಶಾಸಕರ ಭವನ ನಿರ್ಮಾಣದ ಅನಿವಾರ್ಯತೆಯನ್ನು ಮತ್ತೆ ಪ್ರತಿಪಾದಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುವ ಪ್ರತಿ ಅಧಿವೇಶನದ ಸಂದರ್ಭದಲ್ಲೂ ವಸತಿಗಾಗಿ ಕೋಟ್ಯಾಂತರ ರು. ವ್ಯಯಿಸಲಾಗುತ್ತಿದೆ. ಅದರಿಂದ ಸರ್ಕಾರಕ್ಕೆ ನಷ್ಟವುಂಟಾಗುತ್ತಿದೆ. ಅದನ್ನು ತಪ್ಪಿಸುವ ಸಲುವಾಗಿ ಬೆಂಗಳೂರು-ಪುಣೆ ಹೆದ್ದಾರಿಯ ಪಕ್ಕದಲ್ಲಿ ಮೀಸಲಿರಿಸಲಾಗಿರುವ 20 ಎಕರೆ ಜಾಗದಲ್ಲಿ ಶಾಸಕರ ಭವನ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೇನೆ. ಶಾಸಕರ ಭವನ ನಿರ್ಮಾಣದ ನಂತರ ಅದನ್ನು ಖಾಸಗಿಯವರ ನಿರ್ವಹಣೆಗೆ ನೀಡಿದರೆ, ಭವನ ಸುಸ್ಥಿತಿಯಲ್ಲಿರಲಿದೆ. ಅದರಿಂದ ಸರ್ಕಾರಕ್ಕೂ ಆದಾಯ ಬರಲಿದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.

ಸುವರ್ಣ ಸೌಧ ನಿರ್ಮಾಣದ ಉದ್ದೇಶ ಈಡೇರಿಲ್ಲ :
ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣದ ಉದ್ದೇಶ ಈವರೆಗೆ ಈಡೇರಿಲ್ಲ. ಸರ್ಕಾರದ ಹಲವು ಕಚೇರಿಗಳಲ್ಲಿ ಬೆಳಗಾವಿಗೆ ಸ್ಥಳಾಂತರಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಈಡೇರಿವೆ. ಆದರೆ, ಯಾವ ಸರ್ಕಾರಗಳೂ ಅದರ ಬಗ್ಗೆ ಇಚ್ಛಾಶಕ್ತಿ ಹೊಂದಿಲ್ಲ. ಈಗಿನ ಸರ್ಕಾರವಾದರೂ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಸರ್ಕಾರಿ ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.