ಬೆಳಗಾವಿ : ಬೈಲಹೊಂಗಲ ತಾಲೂಕಿನ ಸಂಪಗಾಂವ ಹಾಗೂ ಪಟ್ಟಿಹಾಳ ಕೆ.ಎಸ್.ಗ್ರಾಮಗಳಲ್ಲಿ ಚಿರತೆ ಜನರ ಕಣ್ಣಿಗೆ ಬಿದ್ದಿದೆ. ಹೊಲಗಳಲ್ಲಿ ಚಿರತೆ ಅಡ್ಡಾಡಿದ ಹೆಜ್ಜೆ ಗುರುತುಗಳು ಕಾಣಿಸಿವೆ. ಹತ್ತಿರದಲ್ಲೇ ನರಿಯನ್ನು ಕೊಂದು ತಿಂದಿದ್ದು, ಅದರ ಅವಶೇಷಗಳು ಸಿಕ್ಕಿವೆ.

ಚಿರತೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ಕು ಕಡೆ ಬೋನು ಇಟ್ಟಿದ್ದಾರೆ. ಅದರಲ್ಲಿ ಆಡನ್ನು ಕಟ್ಟಿ, ಮೇವು ಹಾಕಲಾಗಿದೆ.

ಸಂಪಗಾಂವ, ಪಟ್ಟಿಹಾಳ ಕೆ.ಎಸ್. ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಒಬ್ಬೊಬ್ಬರೇ ರಾತ್ರಿಯ ಹೊತ್ತು ಹೊಲಗಳಿಗೆ ಹೋಗಬಾರದು. ಚಿರತೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಘಟನಾ ಸ್ಥಳಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದ್ದಾರೆ.