ಬೆಂಗಳೂರು : “ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆಗಿರುವ ಅನ್ಯಾಯದ ವಿರುದ್ದ ನಿರ್ಣಯ ಮಂಡಿಸಿದ್ದೇವೆ. ಬಿಜೆಪಿಯವರು ರಾಜ್ಯದ ಬೆಂಬಲಕ್ಕೆ ನಿಲ್ಲಲಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು.
ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ನಿರ್ಣಯ ಮಂಡನೆ ಬಗ್ಗೆ ಕೇಳಿದಾಗ ಅವರು ಹೇಳಿದ್ದಿಷ್ಟು;
“ನಮ್ಮ ತೆರಿಗೆ ನಮ್ಮ ಹಕ್ಕು, ನಮ್ಮ ಪಾಲಿಗಾಗಿ ಹೋರಾಟ ಮಾಡುತ್ತಿದ್ದೇವೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ನಿರ್ಣಯ ಮಂಡಿಸಿ ಸದನದಲ್ಲಿ ಅಂಗೀಕಾರ ಮಾಡಲಾಗಿದೆ. ಇದನ್ನು ಕೇಂದ್ರಕ್ಕೆ ಕಳುಹಿಸಲು ತೀರ್ಮಾನ ಮಾಡಿದ್ದೇವೆ. ಆದರೆ ಬಿಜೆಪಿಯವರು ರಾಜ್ಯದ ಬೆಂಬಲಕ್ಕೆ ಬಂದಿಲ್ಲ”.
“ನಾವು ಕಾನೂನು ಚೌಕಟ್ಟಿನಲ್ಲೇ ನಿರ್ಣಯ ಮಂಡಿಸಿದ್ದೇವೆ. ಇದೇ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ, ಸಿದ್ದರಾಮಯ್ಯ ಅವರು ಮತ್ತು ಕೃಷ್ಣಬೈರೇಗೌಡರು ಮಾಡಿದ ಪ್ರಸ್ತಾವನೆಗೆ ಉತ್ತರ ಕೊಡುತ್ತಾ ನಾವೆಲ್ಲಾ ಸೇರಿ ಒಟ್ಟಿಗೆ ಹೋರಾಟ ಮಾಡಬೇಕು ಎಂದು ಕರೆ ನೀಡಿದ್ದರು. ಅವರ ಮಾತಿನಂತೆ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ನೋವನ್ನು ಹೇಳಿದ್ದೇವೆ” ಎಂದರು.
*ಬಿಜೆಪಿ, ಜೆಡಿಎಸ್ ಚರ್ಚೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ*
ರಾಜ್ಯಸಭೆ ಚುನಾವಣೆ ಸಂಬಂಧ ಕುಮಾರಸ್ವಾಮಿ ಮತ್ತು ಅಮಿತ್ ಶಾ ಭೇಟಿ ವಿಚಾರ ಕೇಳಿದಾಗ “ಇಬ್ಬರೂ ಏನೇನು ಚರ್ಚೆ ಮಾಡಿದ್ದಾರೆ ಎನ್ನುವ ಅರಿವು ನಮಗಿದೆ. ಯಾವ, ಯಾವ ಶಾಸಕರಿಗೆ ದೂರವಾಣಿ ಕರೆ ಮಾಡಿ ಏನೇನು ಮಾತನಾಡಿದ್ದಾರೆ ಎನ್ನುವುದು ಗೊತ್ತಿದೆ. ಶಾಸಕರ ಸಂಬಂಧಿಕರು, ಸ್ನೇಹಿತರ ಮೂಲಕ ಏನೇನು ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದು ನಮಗೆ ತಿಳಿದಿದೆ. ನಮ್ಮ ಬತ್ತಳಿಕೆಯಲ್ಲಿ ಏನಿದೆ ಎನ್ನುವುದು ಅವರಿಗೆ ಗೊತ್ತಿದೆ. ಅವರ ಬತ್ತಳಿಕೆಯಲ್ಲಿ ಏನಿದೆ ಎನ್ನುವುದು ನಮಗೆ ಗೊತ್ತಿದೆ. ಈ ವಿಚಾರಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲರ ಮೇಲೆ ನಾವು ನಿಗವಿಟ್ಟಿದ್ದೇವೆ” ಎಂದರು.
*ಇತರೆ ಪಕ್ಷದವರು ನಮ್ಮ ಸಂಪರ್ಕದಲ್ಲಿ ಇದ್ದಾರೆ; ಹೆಸರು ಬಹಿರಂಗ ಮಾಡುವುದಿಲ್ಲ*
ಕಾಂಗ್ರೆಸ್ ಶಾಸಕರಿಗೆ ದೆಹಲಿಯಿಂದ ಕರೆ ಬಂದಿದೆಯೇ ಎಂದು ಕೇಳಿದಾಗ “138 ಜನ ಶಾಸಕರು ನಮ್ಮ ಜೊತೆ ಇದ್ದಾರೆ. ಜನಾರ್ದನ ರೆಡ್ಡಿ ಅವರ ಬಳಿಯೂ ಮತ ಹಾಕುವಂತೆ ಮನವಿ ಮಾಡುತ್ತೇನೆ. ಅಧಿವೇಶನ ಮುಗಿದ ನಂತರ ಖಾಸಗಿ ಹೋಟೆಲ್ನಲ್ಲಿ ಶಾಸಕಾಂಗ ಪಕ್ಷದ ಸಭೆ ಇದೆ. ಅಲ್ಲಿ ಅಣಕು ಮತದಾನ ನಡೆಸುತ್ತೇವೆ. ನಮ್ಮ ಬಳಿ ಹೆಚ್ಚುವರಿ ಮತಗಳಿವೆ. ನಮ್ಮ ಮನೆಯನ್ನು ಎಷ್ಟು ಬಿಗಿ ಮಾಡಿಕೊಳ್ಳಬೇಕೊ ಅದನ್ನು ಮಾಡುತ್ತೇವೆ. ಇತರೆ ಪಕ್ಷದವರು ನಮ್ಮ ಜೊತೆ ಸಂಪರ್ಕದಲ್ಲಿ ಇದ್ದಾರೆ, ಅದನ್ನು ಬಹಿರಂಗಗೊಳಿಸುವುದಿಲ್ಲ. ಅವರ ಜೀವನ ಹಾಳು ಮಾಡಲು ನನಗೆ ಇಷ್ಟವಿಲ್ಲ” ಎಂದು ತಿಳಿಸಿದರು.
ಸಚಿವ ಎಚ್.ಸಿ.ಮಹದೇವಪ್ಪ ಅವರು ದಲಿತ ಸಿಎಂ ವಿಚಾರವನ್ನು ಮುನ್ನೆಲೆಗೆ ತಂದಿರುವ ಬಗ್ಗೆ ಕೇಳಿದಾಗ “ಸೋಮವಾರ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಬರುತ್ತಾರೆ ಅವರನ್ನು ಪ್ರಶ್ನಿಸಿ” ಎಂದರು.
ಐಟಿ ಕಂಪೆನಿಗಳಲ್ಲಿ ಕನ್ನಡ ಭಾಷಿಕರಿಗೆ ಇಂತಿಷ್ಟು ಹುದ್ದೆಗಳನ್ನು ಮೀಸಲಿಡಬೇಕು ಎನ್ನುವ ವಿಚಾರವಾಗಿ ಮೋಹನ್ ದಾಸ್ ಪೈ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ಈ ಬಗ್ಗೆ ಯಾವುದೇ ಆದೇಶವನ್ನು ಸರ್ಕಾರ ಹೊರಡಿಸಿಲ್ಲ. ಯಾವುದೇ ನಿಯಮಗಳು ಇಲ್ಲ. ಒಂದಷ್ಟು ಕನ್ನಡ ಸಂಘಟನೆಯ ಸದಸ್ಯರು ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ” ಎಂದರು.
ಮೇಕೆದಾಟು ವಿಚಾರವಾಗಿ ಕೇಳಿದಾಗ “ರಾಜ್ಯಸಭೆ ಚುನಾವಣೆಯಾದ ನಂತರ ಅದರ ಬಗ್ಗೆ ಚರ್ಚೆ ಮಾಡೋಣ” ಎಂದು ತಿಳಿಸಿದರು.
*ನಮ್ಮ ಸರಸ್ ಮೇಳ 2024 ಹಾಗೂ ಅಕ್ಕ ಕೆಫೆ ಲೋಗೋ ಅನಾವರಣ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತುಗಳು*
ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ಸರಸ್ ಮೇಳ ಎಂದರೆ ಸ್ವಸಹಾಯ ಗುಂಪುಗಳ ಕುಂಭ ಮೇಳವಿದ್ದಂತೆ. ನಿಮ್ಮಲ್ಲಿರುವ ಕ್ರಿಯಾಶೀಲತೆ, ಶಕ್ತಿ ಪ್ರದರ್ಶನಕ್ಕೆ ಇದೊಂದು ವೇದಿಕೆ.
ಮಹಾತ್ಮಾ ಗಾಂಧಿ ಅವರು “The salvation of India lies in cottage and small scale industries” ಎಂದು ಹೇಳಿದ್ದಾರೆ. ನಾನು ಸಹಕಾರಿ ಸಚಿವನಾಗಿದ್ದಾಗ ರಮಾದೇವಿ ಅವರು ರಾಜ್ಯಪಾಲರಾಗಿದ್ದರು. ಆಗ ಬೀದರ್ ಗೆ ಹೋಗಿದ್ದಾಗ ಸ್ವಸಹಾಯ ಗುಂಪುಗಳು ಆರಂಭವಾಗಿದ್ದವು. ಈ ವಿಚಾರವಾಗಿ ನಾನು ಎಸ್.ಎಂ ಕೃಷ್ಣ ಅವರ ಜತೆ ಚರ್ಚೆ ಮಾಡಿದೆ. ಆಗ ಅವರು ಸ್ತ್ರೀ ಶಕ್ತಿ ಸಂಘಗಳ ಪ್ರಾರಂಭ ಮಾಡಬೇಕು. ಇದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವಹಿಸಲು ತೀರ್ಮಾನಿಸಿದೆವು.
ಆರಂಭದಲ್ಲಿ ಕೇವಲ 5 ಸಾವಿರ ರೂಪಾಯಿ ಹಣವನ್ನು ನೀಡಲಾಗಿತ್ತು. ನಂತರ ಐದಾರೂ ತಿಂಗಳಲ್ಲಿ 7-8 ಲಕ್ಷ ಸ್ತ್ರೀ ಶಕ್ತಿ ಗುಂಪಿನ ಸದಸ್ಯರನ್ನು ಸೇರಿಸಿ ಸೋನಿಯಾ ಗಾಂಧಿ ಅವರಿಂದ ಯೋಜನೆ ಉದ್ಘಾಟಿಸಿದೆವು. ಇಂದು ಆ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ಬೆಳೆದಿವೆ. ಇದಾದ ನಂತರ ಅನೇಕ ಬ್ಯಾಂಕುಗಳು, ಧರ್ಮಸ್ಥಳದ ಮಂಜುನಾಥ ದೇವಾಲಯದ ಟ್ರಸ್ಟ್ ಗಳು ಈ ಸಂಘಟನೆಗಳಿಗೆ ನೆರವು ನೀಡುತ್ತಿವೆ.
ಇಲ್ಲಿ ಅನೇಕ ಖಾಸಗಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಚರ್ಚೆ ಮಾಡಿ ಹೊಸ ರೂಪ ನೀಡುವ ಕೆಲಸ ಮಾಡುತ್ತೇವೆ. ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷದವರೆಗೂ ಸಾಲ ನೀಡಲು ತೀರ್ಮಾನಿಸಿದೆ. ಇದು ಕೇವಲ ನಿಮ್ಮ ಉದ್ಯೋಗಕ್ಕೆ ಅಲ್ಲ. ಬೇರೆಯವರಿಗೂ ಉದ್ಯೋಗ ಕಲ್ಪಿಸಬೇಕು ಎಂದು ನೀವೆಲ್ಲರೂ ಮುಂದೆ ಬಂದಿದ್ದೀರಿ. ನಿಮ್ಮ ಈ ಧೀಮಂತ ತೀರ್ಮಾನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನೀವು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ನಮ್ಮಿಂದ ಇದು ಸಾಧ್ಯವಾಗುವುದಿಲ್ಲ ಎಂದು ಭಾವಿಸಬೇಡಿ. ಈ ಇಲಾಖೆಯಿಂದ ನಿಮ್ಮ ಪದಾರ್ಥಕ್ಕೆ ಮೌಲ್ಯ ಹೆಚ್ಚಿಸುವ, ಮಾರುಕಟ್ಟೆ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ.
ಕಾಫಿ ಡೇ, ಎಂಟಿಆರ್ ಸೇರಿದಂತೆ ಅನೇಕ ಬ್ರ್ಯಾಂಡ್ ಗಳು ಸಣ್ಣದಾಗಿ ಆರಂಭವಾಗಿ ದೊಡ್ಡದಾಗಿ ಬೆಳೆದಿವೆ. ಇಂದು ನೀವು ಆರಂಭಿಸಿರುವ ಅಕ್ಕ ಕೆಫೆ ಮೂಲಕ ಹೊಸ ಹೆಜ್ಜೆಗೆ ಮುಂದಾಗಿದ್ದೀರಿ. ನೀವು ನಾಳೆ ಎಷ್ಟು ದೊಡ್ಡ ಮಟ್ಟಕ್ಕೆ ಬೇಕಾದರೂ ಬೆಳೆಯಬಹುದು.
ನಿನ್ನೆಯಿಂದ ಸರ್ಕಾರಿ ಶಾಲೆಗಳಲ್ಲಿ ರಾಗಿ ಮಾಲ್ಟ್ ನೀಡಲು ಆರಂಭಿಸಿದ್ದೇವೆ. ಬಂಗಾರಪ್ಪ ಅವರ ಕಾಲದಲ್ಲಿ ಶ್ರೀಕಂಠಯ್ಯನವರ ಮನೆಯಲ್ಲಿ ಸಂಜೆ ವೇಳೆಗೆ ಹುರುಳಿ ಕಾಳನ್ನು ಉರಿದು ಕೊಟ್ಟರು. ಆಗ ಮಂತ್ರಿಯೊಬ್ಬರು ದನ ತಿನ್ನುವುದನ್ನು ನಮಗೆ ನೀಡುತ್ತಿದ್ದೀಯಾ ಎಂದು ಕೇಳಿದ್ದರು. ಅದಾದ ಕೆಲವೇ ದಿನಗಳಲ್ಲಿ ಮೈಸೂರಿನ ಸುತ್ತೂರು ಮಠಕ್ಕೆ ಹೋದಾಗ ಹುರುಳಿ ಕಟ್ಟಿನ ಸಾರನ್ನು ಊಟಕ್ಕೆ ಬಡಿಸಿದರು. ಅದೇ ಮಂತ್ರಿ ಬಹಳ ಚೆನ್ನಾಗಿದೆ ಎಂದು ಸೇವನೆ ಮಾಡಿದ್ದರು. ನೀನು ದನ ತಿನ್ನುವ ಪದಾರ್ಥ ಎಂದು ಹೇಳಿದ್ದರಲ್ಲ ಅದೇ ಹುರುಳಿ ಕಾಳಿಂದ ಮಾಡಲಾಗಿದೆ ಎಂದು ಮತ್ತೊಬ್ಬ ಮಂತ್ರಿ ಹೇಳಿದ್ದರು. ಹೀಗೆ ಪ್ರತಿ ಪದಾರ್ಥ, ಉತ್ಪನ್ನವನ್ನು ಅದರದೇ ಆದ ರೀತಿಯಲ್ಲಿ, ವಿನ್ಯಾಸದಲ್ಲಿ ನೀಡಿದಾಗ ಜನರಿಗೆ ಇಷ್ಟವಾಗುತ್ತದೆ.
ನಮ್ಮ ಪ್ರಕೃತಿ, ಗ್ರಾಮೀಣ ಬದುಕನ್ನೇ ಹೊಸ ಹೊಸ ರೂಪದಲ್ಲಿ ನಾವು ನೋಡುತ್ತಿದ್ದೇವೆ. ವ್ಯಾಪಾರದಲ್ಲಿ ಎಲ್ಲವೂ ಸಾಧ್ಯ. ನವೋದ್ಯಮಗಳ ಹೆಸರಲ್ಲಿ ಅನೇಕ ಕಂಪನಿಗಳು ಹುಟ್ಟುಕೊಳ್ಳುತ್ತಿವೆ. ಕಬ್ಬಿನ ಹಾಲನ್ನು ಪ್ಯಾಕೆಟ್ ಮೂಲಕ ನೀಡುತ್ತಿದ್ದಾರೆ. ನೀವು ಕೂಡ ಆತ್ಮವಿಶ್ವಾಸದಿಂದ ನಿಮ್ಮ ಉತ್ಪನ್ನವನ್ನು ಮಾರ್ಕೆಟಿಂಗ್ ಮಾಡಿ. ನಿಮಗೆ ಬ್ರ್ಯಾಂಡ್ ಕಟ್ಟಿಕೊಡಲು ಸರ್ಕಾರ ಮುಂದಾಗಿದೆ.
ನಮ್ಮ ಸರ್ಕಾರ ಉದ್ಯೋಗಕ್ಕಿಂತ ಉದ್ಯೋಗ ಸೃಷ್ಟಿಸುವ ಮಹಿಳೆಯರನ್ನು ತಯಾರು ಮಾಡಲು ಆದ್ಯತೆ ನೀಡಿದೆ. ಯಾವುದೇ ಮನೆ ಬೆಳಗಬೇಕಾದರೆ ಹೆಣ್ಣು ಬಹಳ ಮುಖ್ಯ. ಇಂತಹ ಮಹಿಳೆಯರಿಗೆ ಉತ್ತೇಜನ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಶರಣಪ್ರಕಾಶ್ ಪಾಟೀಲ್ ಅವರು ಬಹಳ ಉತ್ಸುಕತೆಯಿಂದ ಕೌಶಲ್ಯಾಭಿವೃದ್ಧಿ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವರಿಗೆ ಶುಭವಾಗಲಿ. ಈ ಇಲಾಖೆಯ ಅಧಿಕಾರಿಗಳನ್ನು ನಾನು ಗಮನಿಸುತ್ತಿದ್ದು ಬಹಳ ಬದ್ಧತೆ ಹೊಂದಿದ್ದಾರೆ