ಘಟಪ್ರಭಾ:
ದೇಶದ ಅಭಿವೃದ್ಧಿ ಜೊತೆಗೆ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಸದುಪಯೋಗ ಪಡೆಯುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ರವಿವಾರ ಡಿ-31 ರಂದು ಅರಭಾವಿ ಮತಕ್ಷೇತ್ರದ ಲೋಳಸೂರ ಗ್ರಾಮದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದರೆ ಅದು ದೇಶದ ಅಭಿವೃದ್ಧಿ ಸಾಧ್ಯ ಮೋದಿ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಗ್ರಾಮೀಣ ಭಾಗಗಳ ಜನರಿಗೆ ತಲುಪಿಸುವ ದಿಶೆಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಆಯೋಜಿಸಲಾಗಿದೆ ಎಂದರು.

ಹಿಂದೆ ರಾಜ್ಯ, ಕೇಂದ್ರದ ಯೋಜನೆಯ ಪ್ರಯೋಜನ ಪಡೆಯಲು ಸರಕಾರಿ ಕಚೇರಿ ಮುಂದೆ ತಿಂಗಳುಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಿತ್ತು. ಕಮಿಷನ್ ಕೊಟ್ಟರಷ್ಟೇ ಕೇಂದ್ರದ ಯೋಜನೆಯ ಪ್ರಯೋಜನ ಸಿಗುತ್ತಿತ್ತು. ಕೇಂದ್ರದ 100 ರೂ. ಅನುದಾನದಲ್ಲಿ ಕೇವಲ 15 ರೂ. ಫಲಾನುಭವಿಗೆ ಸಿಗುತ್ತದೆ. ಉಳಿದುದನ್ನು ಬ್ರೋಕರ್‌ಗಳು ತಿಂದು ತೇಗುತ್ತಾರೆ ಎಂದು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರೇ ಹೇಳಿದ್ದರು ಎಂದು ನೆನಪಿಸಿದರು.

ಸರ್ಕಾರದ ಯೋಜನೆಗಳಿಂದ ವಂಚಿತ ಫಲಾನುಭವಿಗಳಿಗೆ ಸೌಲಭ್ಯಗಳನ್ನು ದೊರಕಿಸಿಕೊಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕಿದ್ದು ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡುವ ಕೆಲಸ ಅಧಿಕಾರಿಗಳಿಂದ ನಡೆಯಬೇಕು. ಪಿಎಂ ಕಿಸಾನ್ ಸಮ್ಮಾನ್, ಉಜ್ವಲಾ ಯೋಜನೆ, ಗರೀಬ್ ಕಲ್ಯಾಣ ಅನ್ನಭಾಗ್ಯ ಯೋಜನೆ, ಜನಧನ ಯೋಜನೆ, ವಿಶ್ವಕರ್ಮ ಯೋಜನೆ ಹೀಗೆ ಹಲವಾರು ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಗ್ರಾಮ ಪಂಚಾಯತ ಅಧ್ಯಕ್ಷೆ ಕಮಲವ್ವಾ ಪರಕನಟ್ಟಿ, ಉಪಾಧ್ಯಕ್ಷೆ ಅಕ್ಕಾತಾಯಿ ಭಾವಂಚಿ, ಸದಸ್ಯರಾದ ಶಂಕುತಲಾ ಗಡಾದ, ಶಾರದಾ ಬಾಗಾಯಿ, ವಿನೋದ ಬಾಗಾಯಿ, ಲಕ್ಷ್ಮಣ ಕುರಿ, ಲಕ್ಷ್ಮಣ ಗುಂಡ್ಯಾಗೋಳ, ಸುನೀತಾ ಹರಿಜನ ಯಮನಪ್ಪ ಬಾಗಾಯಿ, ನಾಗಪ್ಪ ಭಾವಂಚಿ ಸೇರಿದಂತೆ ಇಲಾಖೆಗಳ ಅಧಿಕಾರಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.