This is the title of the web page
This is the title of the web page

Live Stream

September 2023
S M T W T F S
 12
3456789
10111213141516
17181920212223
24252627282930

| Latest Version 9.4.1 |

Feature Article

ಯಕ್ಷಗಾನ ರಾಜ್ಯ ಸಮ್ಮೇಳನ-ಭವಿಷ್ಯದ ದಿಕ್ಸೂಚಿಯಾಗಲಿ

Join The Telegram Join The WhatsApp

ಉಡುಪಿಯಲ್ಲಿ ಫೆ. 11-12 ರಂದು ನಡೆಯಲಿರುವ ಎರಡು ದಿವಸಗಳ ಸಮ್ಮೇಳನದಿಂದಲೇ ಬಹಳಷ್ಟನ್ನು ನಿರೀಕ್ಷಿಸಲಾಗದು. ಯಕ್ಷಗಾನ ಕಲಾ ಕ್ಷೇತ್ರದ ಬೆಳವಣಿಗೆಯ ದೃಷ್ಟಿಯಿಂದ ಮುಂದಿನ ಹಾದಿ ಹೇಗಿರಬೇಕೆನ್ನುವದಕ್ಕೆ ಅದೊಂದು ದಿಕ್ಸೂಚಿಯಾದರೆ ಸಾಕು. ಸಮ್ಮೇಳನದಲ್ಲಿ ನಡೆಯುವ ಚರ್ಚೆ ಮತ್ತು ತೆಗೆದುಕೊಳ್ಳುವ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರಲು ಕಾಲಾವಕಾಶ ಬೇಕಾಗುತ್ತದೆ. (ಅವು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ತೆಗೆದುಕೊಳ್ಳುವ ನಿರ್ಣಯಗಳಂತಾಗದಿರಲಿ ಎಂದಷ್ಟೇ ಆಶಿಸಬೇಕಾಗಿದೆ).

ಯಕ್ಷಗಾನ ಕ್ಷೇತ್ರ ಸಾಕಷ್ಟು ವ್ಯಾಪಕವಾಗಿ ಬೆಳೆದಿದ್ದು ಅದಕ್ಕೆ ನಿರ್ದೇಶಕರೂ ಇಲ್ಲ, ನಿಯಂತ್ರಕರೂ ಇಲ್ಲ. ಅದು ಸ್ವಚ್ಛಂದ ಕಲೆಯಾಗಿ ಬೆಳೆಯುತ್ತಿದೆ. ಆದ್ದರಿಂದ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಯಾರು , ಹೇಗೆ ಜಾರಿಗೊಳಿಸುತ್ತಾರೆಂಬ ಪ್ರಶ್ನೆಯೂ ಇದೆ. ಕಲೆಯ ಈಗಿನ ಸ್ವರೂಪದ ಬೆಳವಣಿಗೆಯನ್ನು ನಿಯಂತ್ರಿಸಲು ಸಾಧ್ಯವೆ, ಹೇಗೆ ಸಾಧ್ಯ, ಯಾರಿಂದ ಸಾಧ್ಯ ಎನ್ನುವುದೂ ಯೋಚಿಸಬೇಕಾದ್ದೆ. ಅದು ಮುಂದಿನ ವಿಚಾರ. ಆದರೆ ಸಮ್ಮೇಳನದಲ್ಲಿ ಅಂತಹ ಚರ್ಚೆ ನಡೆಯಬೇಕಾದ ಅನಿವಾರ್ಯತೆಯಂತೂ ಇದೆ. ಯಕ್ಷಗಾನದ ಇಂದಿನ ಸ್ಥಿತಿ ಹೇಗಿದೆ ಮತ್ತು ಹೇಗಿರಬೇಕು ಎನ್ನುವದೇ ಚರ್ಚೆಯ ಕೇಂದ್ರಬಿಂದುವಾಗಿರಬೇಕು.

ನನಗನಿಸುವಂತೆ ಇಂದು ಈ ಕಲಾಕ್ಷೇತ್ರದ ಸ್ಥಿತಿ :

1. ಮೇಳಗಳು

ಮೇಳಗಳು ಇಂದು ಯಾರ ನಿಯಂತ್ರಣದಲ್ಲಿವೆಯೋ ಅವರು ಆ ಕಲೆಯ ಸುಸ್ವರೂಪದ ಬಗ್ಗೆ , ಶುದ್ಧತೆಯ ಬಗ್ಗೆ ಯೋಚಿಸಬೇಕಿತ್ತು. ಅಂತಹ ಸಾಧ್ಯತೆಗಳಿಲ್ಲ. ಏಕೆಂದರೆ ಅವರಿಗೆ ಲಾಭನಷ್ಟಗಳ ವಿಚಾರ ಮುಖ್ಯ ಮತ್ತು ಅದು ಸಹಜವೂ ಹೌದು. ಅವರು ಲಾಭಕ್ಕಾಗಿಯೇ ಮೇಳ ನಡೆಸುವದು. ಕಲೆಯ ಉದ್ಧಾರಕ್ಕಾಗಿ ಹಾನಿ ಮಾಡಿಕೊಳ್ಳಲು ಸಿದ್ಧರಿರುವದಿಲ್ಲ. ದೇವಸ್ಥಾನಗಳು ಆರೆಂಟು ಮೇಳಗಳನ್ನು ನಡೆಸುವದೂ ಅವರ ಆದಾಯದ ದೃಷ್ಟಿಯಿಂದಲೆ. ಅಷ್ಟೆಲ್ಲ ಮೇಳಗಳಿಗಾಗುವಷ್ಟು ಸಮರ್ಥ ಕಲಾವಿದರು ಇದ್ದಾರೆಯೇ? ಖಂಡಿತವಾಗಿಯೂ ಇಲ್ಲ. ಆಗ ಯಾರು ಬೇಕಾದರೂ ಕಲಾವಿದರೆನಿಸಿಕೊಳ್ಳುತ್ತಾರೆ. ಕಾಲು ಬಡಿಯಲು ಬಂದರೆ ಸಾಕು. ಇದು ಇಂದಿನ ನೈಜ ಸ್ಥಿತಿ. ಪ್ರೇಕ್ಷಕರನ್ನು ರಂಜಿಸಿ ಆಕರ್ಷಿಸಲು ವಿದೂಷಕರನ್ನೋ ವಿವಿಧ ಬಗೆಯ ಕಸರತ್ತುಗಳನ್ನೋ ಮಾಡುವ ಅನಿವಾರ್ಯತೆಯಿರುತ್ತದೆ.

2. ಅಭಿಮಾನಿಗಳು,

ಅಭಿಮಾನಿಗಳಲ್ಲಿ ಎರಡು ಬಗೆ. ಕಲೆಯ ಅಭಿಮಾನಿಗಳು ಮತ್ತು ಕಲಾವಿದರ ಅಭಿಮಾನಿಗಳು. ಕಲೆಯ ಅಭಿಮಾನಿ ಕಲೆಯ ಪರಿಶುದ್ಧತೆಯ ಬಗ್ಗೆ ಕಾಳಜಿ ಹೊಂದಿರುತ್ತಾನೆ. ಕಲಾವಿದರ ಅಭಿಮಾನಿ ಅವನಿಗೆ ಬೇಕಾದ ಕಲಾವಿದನನ್ನು ಚಪ್ಪಾಳೆಯ ಮೂಲಕವೋ ಮತ್ತೆ ಹೇಗೋ ದೊಡ್ಡವನನ್ನಾಗಿಸಲು ಪ್ರಯತ್ನಿಸುತ್ತಾನೆ. ಒಟ್ಟಾರೆ ಆಟ ಚೆನ್ನಾಗಿ ಆಗಬೇಕೆಂಬ ಯಾವ ಕಾಳಜಿಯೂ ಈ ಕಲಾವಿದರ ಅಭಿಮಾನಿಗಳಿಗಿರುವದಿಲ್ಲ.

3.ಕಲಾವಿದರು,

ಮೇಳಗಳು ಬಹಳ ಇವೆ. ಕಲಾವಿದರಿಗೆ ಯಾವ ತರಬೇತಿ ಇಲ್ಲದಿದ್ದರೂ ಕುಣಿಯಲು ಮೇಳ ಸಿಕ್ಕೇ ಸಿಗುತ್ತದೆ. ಕುಣಿದು ಹುಡಿ ಹಾರಿಸುವದು ಮುಖ್ಯ. ಕಲಾವಿದನಿಗೆ ಸೊಂಟತ್ರಾಣ, ಭಾಗವತರಿಗೆ ಕಂಠತ್ರಾಣ ಎರಡಿದ್ದರೆ ಸಾಕು. ಕಾಲಕ್ಕೆ ತಕ್ಕ ಬದಲಾವಣೆ ಎಂಬ ಹೆಸರಲ್ಲಿ ರಂಗದಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ಮತ್ತು ಹಾಗೆ ಮಾಡಲು ಅವಕಾಶ ಇರುವಾಗ ಕಲೆಯ ಪರಂಪರೆ/ ಪರಿಶುದ್ಧತೆಯ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಾದರೂ ಏನಿದೆ/ ಯಾರಿಗಿದೆ? ಹೇಗಾದರೂ ಬೆಳಗು ಮಾಡಿದರಾಯಿತಲ್ಲ. ತಾನು ಕಾಲಿಟ್ಟ ಕಲೆಯ ಬಗ್ಗೆ ಅಭ್ಯಾಸ ಮಾಡಬೇಕೆಂಬ ಪ್ರಜ್ಞೆ ಇಲ್ಲದವರು ಕಲಾವಿದರೇ ಅಲ್ಲ. ಅವರು ಕೇವಲ ಬದುಕಿಗಾಗಿ ಬರುವವರು. ಕಲೆಗಾಗಿ ಅಲ್ಲ. ಅಂಥವರಲ್ಲಿ ಅಭ್ಯಾಸ ಪ್ರವೃತ್ತಿ , ರಂಗಪ್ರಜ್ಞೆ ಬೆಳೆಸುವಂತಹ ಯಾವ ವ್ಯವಸ್ಥೆಯೂ ಇಂದು ಯಕ್ಷಗಾನ ಕ್ಷೇತ್ರದಲ್ಲಿ ಇಲ್ಲ. ಕಲೆಯ ಹಿತದ ದೃಷ್ಟಿಯಿಂದ ಈ ಕುರಿತು ಸಮ್ಮೇಳನದಲ್ಲಿ ಒಂದು ದಾರಿ ಕಂಡುಕೊಳ್ಳಬೇಕು ಎಂದು ನನಗನಿಸುತ್ತದೆ.

4, ಪ್ರೇಕ್ಷಕರು :      

ಪ್ರೇಕ್ಷಕರು ಪ್ರಬುದ್ಧರಾಗಿದ್ದಾಗ ಮಾತ್ರ ಯಾವುದೇ ಕಲೆ ಸರಿಯಾದ ಸ್ವರೂಪದಲ್ಲಿ ಉಳಿಯಲು ಬೆಳೆಯಲು ಸಾಧ್ಯ. ಹಿಂದೆ ಯಕ್ಷಗಾನಕ್ಕೂ ಉತ್ತಮ ಪ್ರೇಕ್ಷಕ ಪ್ರಜ್ಞೆಯುಳ್ಳವರು ಇದ್ದರು. ಕಲಾವಿದನ ರಂಗನಡೆಯ ಸರಿತಪ್ಪುಗಳನ್ನು ಗುರುತಿಸಬಲ್ಲವರಿದ್ದರು. ಹೇಳಿ ತಿದ್ದುತ್ತಿದ್ದರು. ಇಂದು ಎಲ್ಲ ಅಸಡ್ಢಾಳಗಳಿಗೂ ಸೂಪರ್ ಎನ್ನುವ ಹೊಸ ಪೀಳಿಗೆಯ ಅಪ್ರಬುದ್ಧ ಪ್ರೇಕ್ಷಕವರ್ಗವಿದೆ. ಅವರಿಗೆ ಯಕ್ಷಗಾನ ಪರಂಪರೆಯ ಬಗ್ಗೆ ಏನೂ ಅರಿವಿಲ್ಲದ್ದರಿಂದ ಕಣ್ಣಿಗೆ ಆಕರ್ಷಕವಾಗಿ ಕಂಡರೆ ಸಾಕು. ಅದು ಅವರ ಮಿತಿ. ಬದಲಾವಣೆ ಹೆಸರಲ್ಲಿ ಯಕ್ಷಗಾನ ಸಿನಿಮಾವಾದರೂ ನಡೆಯುತ್ತದೆ, ನಾಟಕವಾದರೂ ನಡೆಯುತ್ತದೆ. ಅದನ್ನು ಪ್ರಶ್ನಿಸುವವರ ಮೇಲೆಯೇ ಎರಗುತ್ತಾರೆ. ಅಂತಹ ಆಕ್ರಮಣಕ್ಕೆ ಹೆದರಿ ಪ್ರಾಜ್ಞರಾದವರೇ ಸುಮ್ಮನಿರುವಂತಹ ಕಾಲ ಬಂದಿದೆ.

5. ಕಲಾವಿಮರ್ಶೆ ಮತ್ತು ಮಾಧ್ಯಮ

ಹೆಚ್ಚಿನ ಮಾಧ್ಯಮದ ಮಂದಿಗೆ ಯಕ್ಷಗಾನ ಕಲೆಯ ಪರಿಜ್ಞಾನ ಇಲ್ಲ. ಇದರ ಪರಿಣಾಮವಾಗಿ ಕಲಾವಿಮರ್ಶೆಗಳು ದಾರಿ ತಪ್ಪುತ್ತಿವೆ. ನಿನ್ನೆ ಮೊನ್ನೆ ರಂಗಕ್ಕೆ ಕಾಲಿಟ್ಟವನ ಕುರಿತೂ ಅವನಿಗೆ ಬೇಕಾದ ಅಭಿಮಾನಿ ಬಂಧುವೊಬ್ಬ ಏನೆಲ್ಲ ಬಿರುದು ಬಾವಲಿಗಳನ್ನು ಕೊಟ್ಟು ಲೇಖನ ಬರೆದರೆ ಅದನ್ನು ಪತ್ರಿಕೆಯವರು ಕಣ್ಣು ಮುಚ್ಚಿ ಪ್ರಕಟಿಸುತ್ತಾರೆ. ಇದರಿಂದ ನಮ್ಮಲ್ಲಿಂದು ಲೆಕ್ಕವಿಲ್ಲದಷ್ಟು ಕಲಾಸಾಮ್ರಾಟರು, ಚಕ್ರವರ್ತಿಗಳು, ಗಾನಕೋಕಿಲೆಗಳು , ಗಾನರತ್ನಗಳೇ ತುಂಬಿ ಹೋಗಿದ್ದಾರೆ. ಸಾಮಾಜಿಕ ಜಾಲತಾಣವೂ ಇದರಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಕಲೆಯ ಬಗ್ಗೆ ಸರಿಯಾಗಿ ಅರಿವಿಲ್ಲದ ಬರೆಹಗಾರರು ಮತ್ತು ಅದನ್ನು ಪ್ರಕಟಿಸುವವರು ಇಬ್ಬರೂ ಸಮಾನ ತಪ್ಪಿತಸ್ಥರೇ.

ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನ ಈ ಎಲ್ಲ ಅಂಶಗಳ ವಿಚಾರವಿಮರ್ಶೆಗೆ, ವಿಚಾರ ಮಥನಕ್ಕೆ ಹಾದಿ ಮಾಡಿಕೊಡುತ್ತದೆಂದು ಆಶಿಸಬೇಕಾಗಿದೆ. ಈ ಹಿಂದೆಯೂ ಕೆಲವು ಸಮ್ಮೇಳನಗಳಾಗಿವೆ. ಜಿಲ್ಲಾ ಮಟ್ಟದಲ್ಲಿ ಆಗಿದ್ದು ಹೆಚ್ಚು. ಆದರೆ ಗೋಷ್ಠಿಗಳಲ್ಲಿ ಮಾತನಾಡಿದ್ದು ಗಾಳಿಯಲ್ಲಿ ಹಾರಿಹೋಗುವಂತಾಗಬಾರದು. ಸಮ್ಮೇಳನಕ್ಕಿಂತಲೂ ಮುಖ್ಯವೆನಿಸಬೇಕಾದ್ದು ಅದರ ನಂತರ ಇಡುವ ಹೆಜ್ಜೆಗಳು. ಹಾಗೆ ಹೆಜ್ಜೆ ಇಡದಿದ್ದರೆ ಸಮ್ಮೇಳನ ನಡೆಸುವದರಲ್ಲಿ ಏನೂ ಅರ್ಥವಿಲ್ಲ. ಅದರ ಅರಿವು ಸಮ್ಮೇಳನದ ಸಂಘಟಕರಲ್ಲಿ ಇದೆ ಎಂದು ನಾನು ನನ್ನಂಥವರು ಭಾವಿಸಿದ್ದೇವೆ. ಯಕ್ಷಗಾನ ಕ್ಷೇತ್ರದಲ್ಲಿ ಇರುವ ತಜ್ಞರು, ಚಿಂತಕರು , ಅಭ್ಯಾಸಿ ವಿಮರ್ಶಕರು ಹಾಗೂ ಹಿರಿಯ ಕಲಾವಿದರು , ಅರ್ಥಧಾರಿಗಳು, ಪ್ರಸಂಗಕರ್ತರು ಎಲ್ಲರೂ ಭಾಗವಹಿಸುವಂತಾಗಲಿ. ಹೊಸ ಚಿಂತನೆಗಳು ಹೊರಬರಲಿ. ಮುಂದಿನ ದಿನಗಳಿಗಾಗಿ ಉತ್ತಮ ಕಾರ್ಯಯೋಜನೆ ರೂಪುಗೊಳ್ಳಲಿ. ಸ್ವೀಕರಿಸಲಾಗುವ ನಿರ್ಣಯಗಳು ಅನುಷ್ಠಾನಕ್ಕೆ ಬರುವಂತಾಗಲಿ. ಅದೇ ಯಕ್ಷಗಾನ ಕಲಾಪ್ರಿಯರೆಲ್ಲರ ಮನದಾಶಯ.

ಸಮ್ಮೇಳನ ಹೇಗಿರಬೇಕೆಂಬ ಕುರಿತು ಮುಂಚಿತ ಚರ್ಚೆಯಾಗಿದ್ದರೆ ಒಳ್ಳೆಯದಿತ್ತು ಎನ್ನುವ ಅಭಿಪ್ರಾಯವೂ ಇದೆ. ಆಗಿದೆಯೋ ಇಲ್ಲವೋ ನನಗೆ ತಿಳಿಯದು. ಆಗಿದ್ದರೆ ಒಳ್ಳೆಯದು.

 – ಎಲ್. ಎಸ್. ಶಾಸ್ತ್ರಿ


Join The Telegram Join The WhatsApp
Admin
the authorAdmin

Leave a Reply