ಹೈದರಾಬಾದ್:
“ನಮ್ಮ ಪಕ್ಷಕ್ಕೆ ಬೆಂಬಲ ನೀಡಿರುವ ತೆಲಂಗಾಣ ಜನರಿಗೆ ಧನ್ಯವಾದಗಳು. ಅವರಿಗೆ ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ತೆಲಂಗಾಣ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ತೆರಳಿದ ಸಂದರ್ಭದಲ್ಲಿ ಶಿವಕುಮಾರ್ ಅವರು ಹೈದರಾಬಾದ್ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳ ಪ್ರಶ್ನೆಗೆ ಗುರುವಾರ ಪ್ರತಿಕ್ರಿಯಿಸಿದರು.
“ತೆಲಂಗಾಣ ರಾಜ್ಯದ ಜನರು ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಗೌರವ ನೀಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ನಾವು ಅವರಿಗೆ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತೇವೆ” ಎಂದು ತಿಳಿಸಿದರು.
ಯತ್ನಾಳ್ ಅವರನ್ನು ಒಳ್ಳೆಯ ಆಸ್ಪತ್ರೆಗೆ ಸೇರಿಸೋಣ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣದ ಬಳಿ ನಿನ್ನೆ ರಾತ್ರಿ ಮಾಧ್ಯಮಗಳು, “ಸಿಎಂ ಭಯೋತ್ಪಾದಕರ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ” ಎಂಬ ಬಿಜೆಪಿ ಶಾಸಕ ಯತ್ನಾಳ್ ಅವರ ಆರೋಪದ ಬಗ್ಗೆ ಕೇಳಿದಾಗ “ಯತ್ನಾಳ್ ಅವರನ್ನು ನಿಮ್ಹಾನ್ಸ್ ಅಥವಾ ಬೇರೆ ಒಳ್ಳೆಯ ಆಸ್ಪತ್ರೆಗೆ ಸೇರಿಸೋಣ” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದರು.
ಪಂಚರಾಜ್ಯ ಚುನಾವಣೆಯಲ್ಲಿ ನಿರೀಕ್ಷೆಗೆ ತಕ್ಕ ಫಲಿತಾಂಶ ಬಂದಿಲ್ಲ ಎಂದು ಕೇಳಿದಾಗ, “ಜನರ ತೀರ್ಪಿಗೆ ನಾವು ಗೌರವ ನೀಡುತ್ತೇವೆ” ಎಂದು ತಿಳಿಸಿದರು.
ನೀವು ಸದನದಲ್ಲಿ ಹಾಜರಾಗಿಲ್ಲ ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, “ಅವರು ಹುಡುಕಾಡಲಿ. ಕಾಳು, ಬಲೆ ಹಾಕಿಕೊಂಡು ಹುಡುಕಾಡಲಿ” ಎಂದರು.
ವಿಶೇಷ ವಿಮಾನದಲ್ಲಿ ತೆರಳಿದ ಡಿಕೆಶಿ :
ತೆಲಂಗಾಣ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನಿಂದ ಹೈದರಾಬಾದ್ ಗೆ ವಿಶೇಷ ವಿಮಾನದಲ್ಲಿ ಗುರುವಾರ ತೆರಳಿದರು. ಸಚಿವ ಕೆ ಎಚ್ ಮುನಿಯಪ್ಪ, ಶಾಸಕರಾದ ಶಿವಣ್ಣ, ಎ ಸಿ ಶ್ರೀನಿವಾಸ್, ರಂಗನಾಥ್, ಇಕ್ಬಾಲ್ ಹುಸೇನ್, ನೆಲಮಂಗಲ ಶ್ರೀನಿವಾಸ್, ಶರತ್ ಬಚ್ಚೇಗೌಡ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್, ರಾಜ್ಯ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಜತೆಯಲ್ಲಿ ತೆರಳಿದರು.