ಬೆಂಗಳೂರು: ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರನ್ನು ಮುಂದಿನ ಸೇನಾ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಪ್ರಸ್ತುತ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಸೇನಾ ಮುಖ್ಯಸ್ಥರಾಗಿರುವ ಜನರಲ್ ಮನೋಜ್ ಸಿ ಪಾಂಡೆ ಅವರ ಅಧಿಕಾರವಧಿ ಜೂನ್ 30, 2024 ರಂದು ಕೊನೆಗೊಳ್ಳಲಿದೆ. ಹೀಗಾಗಿ ಉಮೇಂದ್ರ ದ್ವಿವೇದಿ ಅವರನ್ನು ನೇಮಕ ಮಾಡಲಾಗಿದೆ.

ಜುಲೈ 1, 1964 ರಂದು ಜನಿಸಿದ ದ್ವಿವೇದಿ ಅವರನ್ನು ಡಿಸೆಂಬರ್ 15, 1984 ರಂದು ಭಾರತೀಯ ಸೇನೆಯ ಇನ್ಫೆಂಟ್ರಿ (ಜಮ್ಮು ಮತ್ತು ಕಾಶ್ಮೀರ ರೈಫಲ್ಸ್) ಗೆ ನಿಯೋಜಿಸಲಾಯಿತು. ಸುಮಾರು 40 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಅವರು ವಿವಿಧ ಕಮಾಂಡ್​ಗಳಲ್ಲಿ, ಸಿಬ್ಬಂದಿ, ಸೂಚನೆ ಮತ್ತು ವಿದೇಶಿ ನೇಮಕ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು, ರೆಜಿಮೆಂಟ್ ಕಮಾಂಡ್ (18 ಜಮ್ಮು ಮತ್ತು ಕಾಶ್ಮೀರ ರೈಫಲ್ಸ್), ಬ್ರಿಗೇಡ್ (26 ಸೆಕ್ಟರ್ ಅಸ್ಸಾಂ ರೈಫಲ್ಸ್), ಡಿಐಜಿ, ಅಸ್ಸಾಂ ರೈಫಲ್ಸ್ (ಪೂರ್ವ) ಮತ್ತು 9 ಕಾರ್ಪ್ಸ್​​ನ ಕಮಾಂಡ್​ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

2022-2024 ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು ಉಪೇಂದ್ರ ದ್ವಿವೇದಿ ಅವರು ಡೈರೆಕ್ಟರ್ ಜನರಲ್ ಇನ್ಫೆಂಟ್ರಿ ಮತ್ತು ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ (ಪ್ರಧಾನ ಕಚೇರಿ ನಾರ್ತ್​ ಕಮಾಂಡ್) ಸೇರಿದಂತೆ ಪ್ರಮುಖ ನೇಮಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ಸೈನಿಕ್ ಸ್ಕೂಲ್ ರೇವಾ, ನ್ಯಾಷನಲ್ ಡಿಫೆನ್ಸ್ ಕಾಲೇಜ್ ಮತ್ತು ಯುಎಸ್ ಆರ್ಮಿ ವಾರ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಡಿಎಸ್ಎಸ್ಸಿ ವೆಲ್ಲಿಂಗ್ಟನ್ ಮತ್ತು ಮೋವ್​​ನ ಆರ್ಮಿ ವಾರ್ ಕಾಲೇಜಿನಲ್ಲಿ ಕೋರ್ಸ್​ಗಳನ್ನು ಪಡೆದಿದ್ದಾರೆ. ಅಮೆರಿಕದ ಕಾರ್ಲೈಲ್​ನ ಯುಎಸ್ಎಡಬ್ಲ್ಯೂಸಿಯಲ್ಲಿ ಎನ್​ಡಿಸಿ ಸಮಾನ ಕೋರ್ಸ್​​ನಲ್ಲಿ ‘ವಿಶೇಷ ಡಾಕ್ಟರೇಟ್​’ ಪಡೆದಿದ್ದಾರೆ. ಡಿಫೆನ್ಸ್ ಮತ್ತು ಮ್ಯಾನೇಜ್ಮೆಂಟ್ ಸ್ಟಡೀಸ್​ನಲ್ಲಿ ಎಂ.ಫಿಲ್ ಮತ್ತು ಸ್ಟ್ರಾಟೆಜಿಕ್ ಸ್ಟಡೀಸ್ ಮತ್ತು ಮಿಲಿಟರಿಯಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ.