ಬೆಳಗಾವಿ: ಚಚಡಿಯಲ್ಲಿ 2015ರ ಡಿ.29ರಂದು ನಡೆದಿದ್ದ ಕೊಲೆ ಪ್ರಕರಣ ಸಂಬಂಧಿಸಿದಂತೆ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹2.10 ಲಕ್ಷ ದಂಡ ವಿಧಿಸಿ ಇಲ್ಲಿಯ 10ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಚಚಡಿಯ ಶಿವಾನಂದ ಬೀರಪ್ಪ ಕುರಬರ ಶಿಕ್ಷೆಗೆ ಒಳಗಾದವನು.
ಚಚಡಿ ಗ್ರಾಮದಲ್ಲಿ ಕೃಷಿಭೂಮಿಯ ಒಡ್ಡು ನಿರ್ಮಾಣದ ವಿಚಾರವಾಗಿ ಕಲಹ ಏರ್ಪಟ್ಟಿತ್ತು. ಶಿವಾನಂದ ಕುರಬರ ಮತ್ತು ಸಿದ್ದವ್ವ ಕುರಬರ ಅವರು ಸಾವಿತ್ರಿ ಕುರಬರ ಅವರ ಹೊಲಕ್ಕೆ ನುಗ್ಗಿದ್ದರು. ಅಲ್ಲಿ ನೀರು ಹಾಯಿಸುತ್ತಿದ್ದ ಸಾವಿತ್ರಿ ಅವರ ಸಹೋದರ ಶಂಕ್ರಣ್ಣ ಅವರನ್ನು ಶಿವಾನಂದ ಕೊಲೆ ಮಾಡಿದ್ದರು. ಇದಕ್ಕೆ ಸಿದ್ದವ್ವ ಸಹಕರಿಸಿದ್ದರು. ಈ ಬಗ್ಗೆ ಸಾವಿತ್ರಿ ಮುರಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಿಪಿಐ ಆಗಿದ್ದ ಬಿ.ಎಸ್.ಮಂಟೂರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಆರ್.ಎ.ಬಾರಾವಲಿ ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 10ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗುರುರಾಜ ಶಿರೋಳ ತೀರ್ಪು ಪ್ರಕಟಿಸಿದ್ದಾರೆ.
: