ಬೆಳಗಾವಿ: ಪರಮ ಪವಿತ್ರ ವಾರಣಾಸಿಯಲ್ಲಿ ನಡೆಯುವ ಗಂಗಾ ಆರತಿ ಮಾದರಿಯಲ್ಲೇ ಇದೀಗ ರಾಜ್ಯ ಸರಕಾರ ರಾಜ್ಯದ ಕಾವೇರಿ ನದಿಗೆ ಕಾವೇರಿ ಆರತಿ ಹೆಸರಲ್ಲಿ ವಿಶೇಷ ಕಾರ್ಯಕ್ರಮ ರೂಪಿಸುತ್ತಿದೆ. ಅದರಂತೆ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಗೂ ಆರತಿ ಕಾರ್ಯಕ್ರಮ ಮಾಡುವಂತೆ ಬೆಳಗಾವಿ ಜಿಲ್ಲೆಯಲ್ಲೂ ಒತ್ತಾಯ ವ್ಯಕ್ತವಾಗಿದೆ.

ಮಹಾರಾಷ್ಟ್ರದಿಂದ ಭೋರ್ಗರೆಯುತ್ತ ಬೆಳಗಾವಿ ಜಿಲ್ಲೆ ಪ್ರವೇಶಿಸುವ ಕೃಷ್ಣೆ ಪ್ರತಿವರ್ಷ ತುಂಬಿ ಹರಿಯುತ್ತಾಳೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿ, ಸಚಿವರು ಬಾಗಿನ ಅರ್ಪಿಸುವುದು ವಾಡಿಕೆ. ಆಗ ಜನಪ್ರತಿನಿಧಿಗಳಿಗೆ ಮಾತ್ರ ಅವಕಾಶ. ಸಾರ್ವಜನಿಕರಿಗೆ ಅವಕಾಶ ಇಲ್ಲ. ಆದರೆ ಕೃಷ್ಣಾ ಆರತಿ ಏರ್ಪಡಿಸಿದರೆ ಬೆಳಗಾವಿ ಜಿಲ್ಲೆಗೂ ಪ್ರವಾಸಿಗರನ್ನು ಆಕರ್ಷಿಸಬಹುದು ಎಂಬ ಅಭಿಪ್ರಾಯವಿದೆ.

ಕೃಷ್ಣೆಗೂ ಆರತಿ ಮಾಡುವುದರಿಂದ ನದಿಯನ್ನು ಹೆಚ್ಚಿನ ಜನ ಕಣ್ತುಂಬಿಕೊಳ್ಳಬಹುದು. ಕೃಷ್ಣಾ ಆರತಿ ನಡೆಸುವ ಜತೆಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸಬಹುದು. ರಾಜ್ಯದಲ್ಲಿ ಹರಿಯುವ ಇನ್ನೊಂದು ದೊಡ್ಡನದಿ ಕಾವೇರಿಗಿಂತ ಕೃಷ್ಣಾ ಅತಿ ದೊಡ್ಡ ನದಿ. ಮೂರ್ನಾಲ್ಕು ರಾಜ್ಯದಲ್ಲಿ ಕೃಷ್ಣೆ ಹರಿಯುತ್ತಾಳೆ. ಲಕ್ಷಾಂತರ ಜನರಿಗೆ ಜೀವನಾಡಿ. ಕೃಷ್ಣೆಗೆ ಆರತಿ ಮಾಡುವುದರಿಂದ ಗಂಗಾರತಿ ನೋಡಲು ಉತ್ತರ ಭಾರತಕ್ಕೆ ತೆರಳಲು ಅಸಾಧ್ಯವಾದ ಈ ಭಾಗದ ಜನತೆಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.