ಬೆಳಗಾವಿ: ರಾಜ್ಯದಲ್ಲಿ ಈ ವರ್ಷದ ಬೇಸಿಗೆಯಲ್ಲಿ ಮತ್ತೊಂದು ಚುನಾವಣೆ ನಡೆಯುವ ಸಾಧ್ಯತೆ ಇದೆ. 2023 ರ ಬೇಸಿಗೆಯಲ್ಲಿ ಕರ್ನಾಟಕ ವಿಧಾನಸಭೆ 2024 ರಲ್ಲಿ ದೇಶದ ಲೋಕಸಭೆಗೆ ಚುನಾವಣೆ ಬೇಸಿಗೆಯಲ್ಲಿ ನಡೆದಿತ್ತು. ಇದೀಗ ಈ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಘೋಷಣೆ ಮಾಡಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ಹೇಳಿದರು.
ರಾಜ್ಯದಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮರು ವಿಂಗಡಣೆ ಕಾರಣ ಚುನಾವಣೆ ವಿಳಂಬವಾಗಿವೆ. ಕ್ಷೇತ್ರವಾರು ಮೀಸಲಾತಿಯನ್ನು ಪ್ರಕಟಿಸಿದ ತಕ್ಷಣ ಚುನಾವಣೆ ಘೋಷಿಸಲಾಗುವುದು. ವಿದ್ಯುನ್ಮಾನ ಮತಪೆಟ್ಟಿಗೆ ಬದಲು ಮತಪತ್ರಗಳನ್ನೇ ಬಳಸುವ ಉದ್ದೇಶವಿದ್ದು, ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಪ್ರತಿ ಸಲ ಚುನಾವಣೆ ಮುಗಿದ ಬಳಿಕ ಇವಿಎಂ ಯಂತ್ರಗಳ ವಿಶ್ವಾಸಾರ್ಹತೆ ಪ್ರಶ್ನಿಸಲಾಗುತ್ತದೆ. ರಾಜಕೀಯ ಪಕ್ಷಗಳ ನಾಯಕರು ಮತ್ತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ, ಮತಪತ್ರಗಳ ಬಳಕೆ ಬಗ್ಗೆ ತೀರ್ಮಾನಿಸಲಾಗುವುದು’ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ 91 ಜಿಲ್ಲಾ ಪಂಚಾಯಿತಿ ಮತ್ತು 301 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ಮರು ವಿಂಗಡಣೆ ಮಾಡಲಾಗಿದೆ. ಹೊಸದಾಗಿ 7 ಪಟ್ಟಣ ಪಂಚಾಯಿತಿಗಳು ರಚನೆಯಾಗಿದ್ದು, ಈ ಚುನಾವಣೆಗಳನ್ನೂ ಇದೇ ವೇಳೆ ನಡೆಸುವ ಸಾಧ್ಯತೆ ಇದೆ ಎಂದರು.