ಮೇ 7 ರಂದು ಮತದಾನ ನಡೆಯುವ ಉತ್ತರ ಕನ್ನಡ ಜಿಲ್ಲೆಯೂ ಮೈಕೊಡವಿಕೊಂಡು ಎದ್ದೇಳುತ್ತಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಮತ್ತು ಖಾನಾಪುರವೂ ಒಳಗೊಂಡಂತೆ ಉ. ಕ. ಜಿಲ್ಲೆಯ ಮತದಾರರೆದುರು ಮುಖ್ಯವಾಗಿ ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮತ್ತು ಕಾಂಗ್ರೆಸ್ಸಿನಿಂದ ಅಂಜಲಿ ನಿಂಬಾಳಕರ ಅವರು ಕಣದಲ್ಲಿದ್ದಾರೆ.

ಉತ್ತರ ಕನ್ನಡ ೧೨ ತಾಲೂಕುಗಳನ್ನೊಳಗೊಂಡಿದ್ದು ಲೋಕಸಭೆಗೆ ಕಳೆದ ಆರು ಅವಧಿಯಲ್ಲೂ ಬಿಜೆಪಿಯ ಅಭ್ಯರ್ಥಿಯನ್ನೇ ಆಯ್ಕೆ ಮಾಡಿದ್ದಾರೆ. ಈ ಸಲ ಬಿಜೆಪಿ ಅನಂತ ಹೆಗಡೆಯವರ ಬದಲು ಕಾಗೇರಿಯವರನ್ನು ಕಣಕ್ಕಿಳಿಸಿದೆ. ಸಹಜವಾಗಿಯೇ ಅನಂತ ಹೆಗಡೆ ಬೆಂಬಲಿಗರಿಗೆ ಇದರಿಂದ ಅಸಮಾಧಾನವಾಗಿದ್ದು ಅವರು ಅದೇ ಅದೇ ಹಳೇ ಕಥೆಗಳನ್ನೇ ಹೇಳುತ್ತ ಅನಂತ ಹೆಗಡೆಯವರನ್ನು ಹೊಗಳುತ್ತ ಕಾಗೇರಿಯವರ ವಿರುದ್ಧ ಅಪಪ್ರಚಾರಕ್ಕಿಳಿದಿದ್ದು ಜಾಲತಾಣದಲ್ಲಿ ಕಂಡುಬರುತ್ತದೆ.
ವಾಸ್ತವವಾಗಿ ಇದು ಉತ್ತರ ಕನ್ನಡದ ಲೋಕಸಭಾ ಮತಕ್ಷೇತ್ರದ ಮೇಲೆ ಯಾವ ವ್ಯತಿರಿಕ್ತ ಪರಿಣಾಮವನ್ನೂ ಬೀರುವುದಿಲ್ಲ. ಮತ್ತು ಕಾಗೇರಿಯವರ ಗೆಲುವಿಗೂ ಇದು ಅಡ್ಡಿಯಾಗುವುದಿಲ್ಲ.
ಒಬ್ಬ ಪತ್ರಕರ್ತನಾಗಿ ಲೋಕಸಭಾ ಮತಕ್ಷೇತ್ರದ ವಾತಾವರಣವನ್ನು ಪರಿಶೀಲಿಸಿದಾಗ ನನಗೆ ಹಾಗನಿಸುತ್ತದೆ. ಅದಕ್ಕೆ ಹಲವು ಕಾರಣಗಳಿವೆ. ಕಾಂಗ್ರೆಸ್ಸು ಇಲ್ಲಿ ಅಂತಹ ಪ್ರಭಾವಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಇರುವುದು ಮೊದಲ ಕಾರಣ. ಅಂಜಲಿ ನಿಂಬಾಳಕರ ಅವರು ಮರಾಠಿಗರಾದ್ದರಿಂದ ಮರಾಠಿಗರ ಮತಗಳನ್ನು ಪಡೆಯಲಿದ್ದಾರೆಂಬ ಲೆಕ್ಕಾಚಾರವೂ ತಪ್ಪು. ಖಾನಾಪುರದಲ್ಲೇ ಅವರು ಎಂ.ಎಲ್ ಎ. ಚುನಾವಣೆಯಲ್ಲಿ ಸೋತಿದ್ದಾರೆ. ಅಲ್ಲಿ ಅವರಿಗೆ ಜನಪ್ರಿಯತೆಯಿಲ್ಲ. ಜನಬೆಂಬಲವೂ ಇಲ್ಲ. ಅಲ್ಲೀಗ ಬಿಜೆಪಿ ಶಾಸಕರಿದ್ದಾರೆ. ಈಚೆಗೆ ಅಲ್ಲಿ ನಡೆದ ಬೂಥ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯೇ ಅಲ್ಲಿನ ಬಿಜೆಪಿ ಪ್ರಾಬಲ್ಯವನ್ನು ಸಾರಿ ಹೇಳುತ್ತದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ ಮರಾಟಿಗರು ಹಿಂದುತ್ವದ ಪ್ರಬಲ ಬೆಂಬಲಿಗರು. ಅವರೆಂದೂ ಹಿಂದೂವಿರೋಧಿ ಕಾಂಗ್ರೆಸ್ಸಿಗೆ ಮತ ಹಾಕುವುದಿಲ್ಲ. ಕಿತ್ತೂರಲ್ಲಿ ಸಹ ಬಿಜೆಪಿ ಪರವಾದ ಮತಗಳು ದೊಡ್ಡ ಪ್ರಮಾಣದಲ್ಲಿವೆ. ಆದ್ದರಿಂದ ಈ ಎರಡು ಕ್ಷೇತ್ರಗಳಲ್ಲೂ ಕಾಗೇರಿಯವರೇ ಹೆಚ್ಚಿನ ಮತ ಪಡೆಯುವುದು ನಿಶ್ಚಿತ.
ಇನ್ನು ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಸಹ ಕಾಗೇರಿಯವರ ಕುರಿತು ವೈಯಕ್ತಿಕವಾಗಿ ಒಳ್ಳೆಯ ಅಭಿಪ್ರಾಯವೇ ಇದೆ ಮತ್ತು ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳಕರ ಇಲ್ಲಿನ ಮತದಾರರ ಮಟ್ಟಿಗೆ ಪರಕೀಯರು ಮತ್ತು ಅಪರಿಚಿತರು. ಕಾಂಗ್ರೆಸ್ ಮತಗಳೆಲ್ಲ ಅವರಿಗೆ ಬೀಳುತ್ತವೆಂದುಕೊಂಡರೂ ಬಿಜೆಪಿ ಪರ ಮತಗಳು ಅದಕ್ಕಿಂತ ಹೆಚ್ಚು ಸಾಲಿಡ್ ಆಗಿ ಕಾಗೇರಿಯವರಿಗೇ ಲಭಿಸಲಿವೆ. ಇರಬಹುದಾದ ಅಲ್ಪಸ್ವಲ್ಪ ವಿರೋಧ ಇಲ್ಲಿ ಗಣನೀಯವಲ್ಲ. ಏಕೆಂದರೆ ಕಾಗೇರಿಯವರ ಕುರಿತು ಅಪಸ್ವರವೆತ್ತುವವರೂ ಸಹ ಮೋದಿ ಮತ್ತು ಬಿಜೆಪಿ ಪರವಾಗಿಯೇ ಮತ ಹಾಕುತ್ತಾರೆ ಹೊರತು ಕಾಂಗ್ರೆಸ್ಸಿಗೆ ಹಾಕಲಾರರು. ರಾಜಕೀಯದಲ್ಲಿ ಅಪಸ್ವರಗಳು ಇಲ್ಲದ್ದು ಯಾವಾಗ? ಚುನಾವಣೆ ಬಂದಾಗೆಲ್ಲ ಅಂತಹ ಧ್ವನಿಗಳು ಕೇಳಿಬಂದು ಮಾಯವಾಗುವುದುಂಟು.
ಕಾಗೇರಿಯವರಿಗೆ ಅನಂತ ಹೆಗಡೆಯವರ ಬೆಂಬಲವಿಲ್ಲ ಎಂಬುದು ಕೆಲವರ ಅಭಿಪ್ರಾಯ. . ಹಾಗಿದ್ದರೆ ಅಪ್ಪಟ ಹಿಂದುತ್ವದ ಪ್ರತಿಪಾದಕರಾದ ಅನಂತ ಹೆಗಡೆಯವರು ಕಾಗೇರಿ ವಿರುದ್ಧ ಹಿಂದೂ ವಿರೋಧಿ ಕಾಂಗ್ರೆಸ್ಸಿಗೆ ಮತ ಹಾಕಿ ಎಂದು ಹೇಳುತ್ತಾರೆಂದು ಭಾವಿಸಲು/ ನಂಬಲು ಸಾಧ್ಯವೇ? ಹಾಗೆ ಮಾಡಿದರೆ ಅವರ ಹಿಂದೂಪರ ನಿಲುವೇ ಪ್ರಶ್ನಾರ್ಹವಾಗುತ್ತದೆ. ಆದ್ದರಿಂದ ಏನೇ ಅಸಮಾಧಾನ ಇದ್ದರೂ ಅದು ಚುನಾವಣೆಯಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತವಾಗಿ ಪರಿವರ್ತನೆ ಆಗುತ್ತದೆಂದು ಹೇಳಲು ಸಾಧ್ಯವಿಲ್ಲ. ಕಾಗೇರಿಯವರ ಗೆಲುವಿಗೆ ಅಡ್ಡಿಯಾಗಬಹುದಾದ ಯಾವ ಬೇರೆ ಮಹತ್ವದ ಅಂಶಗಳೂ ಇಲ್ಲ.
ಶಾಸಕರಾಗಿ ಕಾಗೇರಿಯವರ ಜನಸಂಪರ್ಕದ ಕುರಿತಾಗಲಿ, ಅವರ ಕಾರ್ಯವೈಖರಿಯ ಕುರಿತಾಗಲಿ ಮತದಾರರ ಅನಿಸಿಕೆಗಳೇನೇ ಇರಲಿ ಅದು ಈಗಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರರ ಮೋದಿಪರ ಮತ್ತು ಬಿಜೆಪಿ ಪರ ಒಲವುನಿಲುವುಗಳನ್ನು ಬದಲಿಸುತ್ತದೆಂದು ಭಾವಿಸಬೇಕಿಲ್ಲ. ಅಲ್ಲದೆ ಕಾಗೇರಿಯವರ ಹೊರತಾಗಿ ಉತ್ತರ ಕನ್ನಡ ಜಿಲ್ಲೆಯ ಜನರು ಮತ ಹಾಕುವಂತಹ ಬೇರೆ ಪ್ರಭಾವಿ ಅಭ್ಯರ್ಥಿಗಳು ಯಾರೂ ಕಣದಲ್ಲಿಲ್ಲ. ಕಾಂಗ್ರೆಸ್ಸಿಗೆ ಅದರದೇ ಆದ ಮತಗಳಿವೆ. ಆದರೆ ಬಿಜೆಪಿ ಮತಗಳನ್ನು ಕಸಿದುಕೊಳ್ಳಬಲ್ಲಂತಹ ಪ್ರಬಲ ಹಾಗೂ ಉತ್ತರ ಕನ್ನಡದವರೇ ಆದ ಒಬ್ಬ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದ್ದರೆ ಆಗ ಪೈಪೋಟಿಯ ಪ್ರಶ್ನೆ ಬರುತ್ತಿತ್ತು. ಸದ್ಯ ಅಂತಹ ಅಪಾಯವೇನೂ ಬಿಜೆಪಿಗೆ ಕಂಡುಬರುತ್ತಿಲ್ಲ. ಅಭಿಪ್ರಾಯ ಭೇದಗಳು ಏನೇ ಇರಲಿ, ಜಿಲ್ಲೆಯ ಹಿತದ ದೃಷ್ಟಿಯಿಂದ ಬಿಜೆಪಿಗೆ ಮತ ಹಾಕುವುದು ಅನಿವಾರ್ಯ. ಏಕೆಂದರೆ ಮತ್ತೆ ಕೇಂದ್ರದಲ್ಲಿ ಮೋದಿ ಸರಕಾರವೇ ಅಧಿಕಾರಕ್ಕೆ ಬರಲಿದೆಯೆಂಬುದು ಎಲ್ಲ ಸಮೀಕ್ಷೆಗಳಲ್ಲೂ ಕಂಡುಬಂದಿದೆ. ಸಂಸದರು ಅಭಿವೃದ್ಧಿ ಕೆಲಸ ಮಾಡಿಲ್ಲವೆಂದು ದೂರುತ್ತ ಕುಳಿತುಕೊಳ್ಳುವ ಬದಲು ತಾವು ಆಯ್ಕೆ ಮಾಡಿದ ಸಂಸದರಿಂದ ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳುವುದು ಹೇಗೆಂದು ಪ್ರಜ್ಞಾವಂತ ಮತದಾರರೂ ಯೋಚಿಸುವುದು ಉತ್ತಮ.

ಎಲ್.ಎಸ್.ಶಾಸ್ತ್ರಿ