ಬೆಂಗಳೂರು:
ಘೋಷಿತ ಆದಾಯಕ್ಕಿಂತ ಹೆಚ್ಚು ಸಂಪತ್ತು ಹೊಂದಿರುವ ಆರೋಪ ಹೊತ್ತಿರುವ ರಾಜ್ಯದ ವಿವಿಧ ಇಲಾಖೆಗಳ 10 ಅಧಿಕಾರಿಗಳ ವಿರುದ್ಧ ಹತ್ತು ಜಿಲ್ಲೆಗಳಲ್ಲಿ 40 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ರಾಜ್ಯದ 10 ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ,ಸಂಬಂಧಿಕರ ಮನೆಗಳ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ದಾಳಿ ವೇಳೆ ಸಿಕ್ಕ ಅಪಾರ ಪ್ರಮಾಣದ ಹಣ, ಒಡವೆಗಳು ಹಾಗೂ ಇನ್ನಿತರ ಆಸ್ತಿಗಳ ಬಗ್ಗೆ ಪರಿಶೀಲನೆ ನಡೆದಿದೆ.

ಚಿಕ್ಕಮಗಳೂರು, ಮಂಡ್ಯ ಮೈಸೂರು, ಕೊಪ್ಪಳ, ಚಾಮರಾಜನಗರ, ಬಳ್ಳಾರಿ, ವಿಜಯನಗರ, ಮಂಗಳೂರು, ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿದೆ. ತುಮಕೂರಿನ ಕೆಆರ್‌ಡಿಎಲ್‌ ಇಂಜಿನಿಯರ್​ ಹನುಮಂತರಾಯಪ್ಪ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ.ಚಿಕ್ಕಮಗಳೂರಿನ ವಾಣಿಜ್ಯ ಅಧಿಕಾರಿ ನೇತ್ರಾವತಿ, ಮಂಡ್ಯ ಪಿಡಬ್ಲ್ಯು ಡಿ ಇಇ ಹರ್ಷ, ಮೈಸೂರಿನ ಮೂಡಾ ಇಂಜಿನಿಯರ್ ಯಜ್ಞೇಂದ್ರ, ಹಾಸನದ ಫುಡ್ ಇನ್ಸ್ ಪೆಕ್ಟರ್ ಜಗನ್ನಾಥ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಅಧಿಕಾರಿಗಳ ಆಪ್ತರು, ಸಂಬಂಧಿಕರ ಮನೆಗಳ ಮೇಲೂ ಲೋಕಾಯುಕ್ತ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.