ಬೆಂಗಳೂರು: ಇಂದು, ಗುರುವಾರ ಬೆಳಿಗ್ಗೆ ಬೆಂಗಳೂರು ರಾಜ್ಯದ 4 ಸ್ಥಳಗಳ 25 ಕಡೆ ದಾಳಿ ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದಾರೆ.
ಭ್ರಷ್ಟಾಚಾರದ ಆರೋಪವಿದ್ದ ಅಧಿಕಾರಿಗಳ ಮನೆ ಹಾಗೂ ಕಚೇರಿಗಳಿಗೆ ದಾಳಿ ನಡೆಸಲಾಗಿದೆ. ಬೆಂಗಳೂರಿನಲ್ಲಿ ಟೌನ್ ಪ್ಲಾನಿಂಗ್ ನಿರ್ದೇಶಕ ತಿಪ್ಪೇಸ್ವಾಮಿ ಮನೆ ಮೇಲೆ ದಾಳಿ ನಡೆಸಿದ ವೇಳೆ ಕಂಡುಬಂದ ಅಕ್ರಮ ಆಸ್ತಿಪಾಸ್ತಿ ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.
ಬನಶಂಕರಿಯ 3ನೇ ಹಂತದ ವಿಶ್ವೇಶ್ವರಯ್ಯ ರಸ್ತೆಯಲ್ಲಿರುವ ಟೌನ್ ಪ್ಲಾನಿಂಗ್ ನಿರ್ದೇಶಕ ತಿಪ್ಪೇಸ್ವಾಮಿ ನಿವಾಸದಲ್ಲಿ ಶೋಧ ನಡೆಸಿದಾಗ ದಂಗಾಗುವಷ್ಟು ಸಂಪತ್ತು ಪತ್ತೆಯಾಗಿದೆ. ಅಪಾರ ಮೌಲ್ಯದ ಆಸ್ತಿ ದಾಖಲೆಗಳು, ಚಿನ್ನಾಭರಣ ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದು, ಈ ಆಸ್ತಿಪಾಸ್ತಿಗೆ ಸೂಕ್ತ ವಿವರಣೆ ನೀಡಲು ತಿಪ್ಪೇಸ್ವಾಮಿ ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.
ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಚಿನ್ನದ ನೆಕ್ಲೆಸ್, ಚಿನ್ನದ ಉಂಗುರ ಪತ್ತೆಯಾಗಿದೆ. 28ಕ್ಕೂ ಹೆಚ್ಚು ಜೊತೆ ಓಲೆ, 23ಕ್ಕೂ ಹೆಚ್ಚು ಚಿನ್ನದ ಸರ, ಮುತ್ತಿನ ಹಾರ ಪತ್ತೆಯಾಗಿವೆ. ಬಂಗಾರ ಮಾತ್ರ ಅಲ್ಲದೆ, ಕೆಜಿಗಟ್ಟಲೆಯ ಬೆಳ್ಳಿ ಸಾಮಗ್ರಿಗಳು ಕೂಡ ಪತ್ತೆಯಾಗಿದೆ. 500, 200 ರೂ. ಮುಖ ಬೆಲೆಯ 8 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. 8 ಕ್ಕೂ ಹೆಚ್ಚು ದುಬಾರಿ ಬೆಲೆಯ ಬ್ರಾಂಡೆಡ್ ವಾಚ್ಗಳು ಸಿಕ್ಕಿವೆ.
ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಅಬಕಾರಿ ಇಲಾಖೆ ಎಸ್ಪಿ ಮನೆ ಮೇಲೂ ಲೋಕಾಯುಕ್ತ ದಾಳಿ ಮಾಡಿದೆ. ಬೆಳಗ್ಗೆ 6 ಗಂಟೆಯ ವೇಳೆ ಅಬಕಾರಿ ಇಲಾಖೆ ಎಸ್ಪಿ ಮೋಹನ್ ಮನೆ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆಗಳನ್ನ ಪರಿಶೀಲನೆ ಮಾಡಲಾಯಿತು.ಮಂಗಳೂರಿನಲ್ಲಿ ದಾಳಿ
ಲೋಕಾಯುಕ್ತ ಅಧಿಕಾರಿಗಳು ಮಂಗಳೂರಿನಲ್ಲಿ ಗಣಿ ಅಧಿಕಾರಿ ಕಚೇರಿ, ಮನೆ ಮೇಲೂ ದಾಳಿ ಮಾಡಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಕೃಷ್ಣವೇಣಿ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದಾರೆ. ಮಂಗಳೂರಿನ ವೆಲೆನ್ಸಿಯಾದ ಮನೆ, ಕಚೇರಿಯಲ್ಲಿ ದಾಖಲೆಗಳನ್ನ ಪರಿಶೀಲನೆ ಮಾಡಿದ್ದಾರೆ. ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಗಣಿ ಇಲಾಖೆ ಅಧಿಕಾರಿಯಾಗಿದ್ದ ಕೃಷ್ಣವೇಣಿ ಅವರು 2 ತಿಂಗಳ ಹಿಂದಷ್ಟೇ ಮಂಗಳೂರಿಗೆ ಬಂದಿದ್ದರು ಎಂದು ಹೇಳಲಾಗಿದೆ.
ಕೃಷ್ಣವೇಣಿಗೆ ಸಂಬಂಧಪಟ್ಟ ಚಿಕ್ಕಬಳ್ಳಾಪುರದಲ್ಲಿರುವ ಮನೆ, ಅಪಾರ್ಟ್ಮೆಂಟ್, ಕಚೇರಿ ಮೇಲೆ ರೇಡ್ ಮಾಡಲಾಗಿದೆ. ಯಲಹಂಕದಲ್ಲಿರುವ ಅಪಾರ್ಟ್ಮೆಂಟ್ ಅನ್ನು ಪರಿಶೀಲನೆ ಮಾಡಲಾಯಿತು.ಮಂಡ್ಯ ಜಿಲ್ಲೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ ನಿವಾಸಗಳ ಮೇಲೆ ದಾಳಿ ನಡೆದಿದ್ದು, ಮಳವಳ್ಳಿಯಲ್ಲಿರುವ ನಿವಾಸದಲ್ಲಿ ದಾಖಲೆಗಳನ್ನ ಪರಿಶೀಲನೆ ಮಾಡಲಾಗಿದೆ. ಮಹೇಶ, ಅವರ ಪತ್ನಿಗೆ ಸೇರಿದ ಪೆಟ್ರೋಲ್ ಬಂಕ್ ಮೇಲೂ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಮಹತ್ವದ ದಾಖಲೆಗಾಗಿ ಹುಡುಕಾಡಿದ್ದಾರೆ.