ಚಂಡೀಗಢ : ಮೂರು ವರ್ಷದ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಪರಿಚಿತಳಾಗಿದ್ದ ಮನ್‌ಪ್ರೀತ್ ಕೌರ್ ಎಂಬ ಮಹಿಳೆಯನ್ನು ಮದುವೆಯಾಗಲು ಜಲಂಧರ ಮೂಲದ ದೀಪಕಕುಮಾರ(24) ದುಬೈನಿಂದ ಕಳೆದ ತಿಂಗಳು ಭಾರತಕ್ಕೆ ವಾಪಸಾಗಿದ್ದ. ಆದರೆ ಮದುವೆಯ ದಿನ ವಧು ನಾಪತ್ತೆಯಾಗಿದ್ದು, ಆಕೆ ವಿವಾಹಕ್ಕಾಗಿ ಬುಕ್ ಮಾಡಲಾಗಿದೆ ಎಂದು ಹೇಳಿದ ಕಲ್ಯಾಣ ಮಂಟಪಕ್ಕೆ ಮದುಮಗ ದಿಬ್ಬಣದೊಂದಿಗೆ ಬಂದರೆ ಅಲ್ಲಿ ಆ ಹೆಸರಿನ ಕಲ್ಯಾಣ ಮಂಟಪವೇ ಇರಲಿಲ್ಲ..!

ವಿಶೇಷವೆಂದರೆ ಅವರಿಬ್ಬರೂ ಮೂರು ವರ್ಷಗಳಿಂದ ಮಾತನಾಡುತ್ತಿದ್ದರೂ ಒಮ್ಮೆಯೂ ಭೇಟಿಯೇ ಆಗಿರಲಿಲ್ಲ..! ಸಾಮಾಜಿಕ ಜಾಲತಾಣದ ಮೂಲಕವೇ ಆಕೆಯ ಜತೆ ಮದುವೆ ಮಾತುಕತೆಯನ್ನೆಲ್ಲ ಮುಗಿಸಿದ್ದ ದೀಪಕುಮಾರಗೆ ತನ್ನ ಕುಟುಂಬ ಮದುವೆಗೆ ಒಪ್ಪಿಕೊಂಡಿದೆ ಎಂದು ಆಕೆಯೂ ತಿಳಿಸಿದ್ದಳು. ನಂತರ ಮನೆಯವರು ದೂರವಾಣಿಯಲ್ಲೇ ಮಾತನಾಡಿ ಮದುವೆ ತಯಾರಿಯನ್ನೂ ನಡೆಸಿದ್ದರು.

ನಿಗದಿಯಾದಂತೆಯೇ ಜಲಂಧರದ ಮಂಡಿಯಾಲಿ ಗ್ರಾಮದಿಂದ ಮದುಮಗಳು ಹೇಳಿದ ಮೋಗಾದಲ್ಲಿನ ವಿವಾಹ ಸ್ಥಳಕ್ಕೆ ದಿಬ್ಬಣ ಸಮೇತ ದೀಪಕಕುಮಾರ ಆಗಮಿಸಿದ್ದ. ಮೋಗಾ ತಲುಪಿದ ಬಳಿಕ ತಮ್ಮ ಕಡೆಯ ಕೆಲವು ಜನರು ಅಲ್ಲಿಗೆ ಬರುತ್ತಾರೆ. ಅಲ್ಲಿಂದ ಮದುವೆ ಹಾಲ್‌ಗೆ ಕರೆದುಕೊಂಡು ಹೋಗುತ್ತಾರೆ ಎಂದು ಮದುಮಗಳ ಕುಟುಂಬ ಇವರಿಗೆ ತಿಳಿಸಿತ್ತು. ಆದರೆ ಅಲ್ಲಿ ಆಗಿದ್ದೇ ಬೇರೆ. ಬೆಳಿಗ್ಗೆ ಅಲ್ಲಿಗೆ ಹೋದವರು ಸಂಜೆ 5 ಗಂಟೆ ವರೆಗೆ ಕಾದರೂ ಹುಡುಗಿ ಕಡೆಯವರ ಪತ್ತೆಯೇ ಇರಲಿಲ್ಲ…! ಫೋನ್ ಮಾಡಿದರೂ ಸಂಪರ್ಕ ಸಿಗುತ್ತಿರಲಿಲ್ಲ…!!

ಕಾದು ಕಾದು ಬೇಸರ ಬಂದು ತಾವೇ ಕಲ್ಯಾಣ ಮಂಟಪಕ್ಕೆ ಹುಡುಕುವ ಬಗ್ಗೆ ತೀರ್ಮಾನಿಸಿ ‘ರೋಸ್ ಗಾರ್ಡನ್ ಪ್ಯಾಲೇಸ್’ ಎಲ್ಲಿದೆ ಎಂದು ಸ್ಥಳೀಯರಲ್ಲಿ ವಿಚಾರಿಸಿದಾಗ ಅಲ್ಲಿಯೂ ಅವರಿಗೆ ಮತ್ತೊಂದು ಆಘಾತ ಕಾದಿತ್ತು. ಯಾಕೆಂದರೆ ಮೋಗಾದಲ್ಲಿ ಅಂತಹ ಜಾಗವೇ ಇರಲಿಲ್ಲ. ಆಗ ತಾನು ಮೋಸ ಹೋಗಿರುವುದು ಮದುಮಗನಿಗೆ ಗೊತ್ತಾಗಿದೆ.
ನಂತರ ಆತ ಪೊಲೀಸ್ ಠಾಣೆಗೆ ತೆರಳಿ ವಧು ಹಾಗೂ ಆಕೆಯ ಕುಟುಂಬದವರ ವಿರುದ್ಧ ದೂರು ನೀಡಿದ್ದಾನೆ.

ಆಗಿದ್ದೇನು..?
ತಾನು ದುಬೈನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ದೀಪಕಕುಮಾರಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದಮನಪ್ರೀತ್‌ ಕೌರ್ ಎಂಬವಳ ಜೊತೆ ಮೂರು ವರ್ಷದಿಂದ ಆಕೆ ಆತನೊಂದಿಗೆ ತನ್ನ ಫೋಟೋಗಳನ್ನು ಹಂಚಿಕೊಂಡಿದ್ದಳು. ಆದರೆ ಎಂದಿಗೂ ಒಬ್ಬರಿಗೊಬ್ಬರು ಮುಖತಃ ಭೇಟಿಯಾಗಿರಲಿಲ್ಲ. ಆದರೆ ಇಬ್ಬರೂ ಮದುವೆಯಾಗುವುದಾಗಿ ಫೋನ್‌ನಲ್ಲೇ ತೀರ್ಮಾನಿಸಿದ ನಂತರ ಫೋನ್ ಮೂಲಕವೇ ಎರಡೂ ಕುಟುಂಬದ ಹಿರಿಯರು ಮದುವೆ ಮಾತುಕತೆಗಳನ್ನು ನಡೆಸಿದ್ದರು. ಮದುವೆ ಸಿದ್ಧತೆಗಾಗಿ ದಿನೇಶಕುಮಾರ ಆಕೆಗೆ 50 ಸಾವಿರ ರೂ ಹಣ ಸಹ ಕಳುಹಿಸಿರುವುದಾಗಿ ಹೇಳಿದ್ದಾನೆ.
ಮದುವೆ ಸ್ಥಳಕ್ಕೆ 150 ಜನರ ಜತೆ ಹುಡುಗಿ ಹೇಳಿದ ಸ್ಥಳಕ್ಕೆ ತೆರಳಿದ್ದರು. ಅಲ್ಲದೆ, ಟ್ಯಾಕ್ಸಿಗಳನ್ನು ಬಾಡಿಗೆ ಮಾಡಿಕೊಂಡು ಬರಲಾಗಿತ್ತು. ಕ್ಯಾಟರಿಂಗ್‌ ಮತ್ತು ವಿಡಿಯೋಗ್ರಾಫರ್‌ಗೆ ಮುಂಗಡ ಹಣ ಕೂಡ ನೀಡಲಾಗಿತ್ತು ಎಂದು ದೀಪಕಕುಮಾರ ತಂದೆ ಪ್ರೇಮಚಂದ್ ತಿಳಿಸಿದ್ದಾರೆ. ತಾನು ಮೋಗಾದವಳಾಗಿದ್ದು, ಫಿರೋಜ್‌ಪುರದಲ್ಲಿ ಕೆಲಸ ಮಾಡುತ್ತಿರುವುದಾಗಿ ಮನ್‌ಪ್ರೀತ್ ಕೌರ್ ಹೇಳಿಕೊಂಡಿದ್ದಳು. ಆದರೆ ಮದುವೆ ದಿಬ್ಬಣ ಮೋಗಾಕ್ಕೆ ಬಂದಾಗ ಮದುಮಗಳ ಫೋನ್ ಸ್ವಿಚ್ ಆಫ್ ಆಗಿತ್ತು, ಆಕೆಯನ್ನು ಸಂಪರ್ಕಿಸುವುದು ವರನ ಕಡೆಯವರಿಗೆ ಕೊನೆಗೂ ಸಾಧ್ಯವಾಗಿಲ್ಲ ಎಂದು ದೀಪಕಕುಮಾರ ಕಡೆಯಿಂದ ದೂರು ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೋಗಾದ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಹರ್ಜಿಂದರ್ ಸಿಂಗ್ ತಿಳಿಸಿದ್ದಾರೆ.