1. ಬೆಳಗಾವಿ: ಮಹಾಕುಂಭ ಮೇಳದಲ್ಲಿ ಮಂಗಳವಾರ ಮೌನಿ ಅಮಾವಾಸ್ಯೆ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿಯ ನಾಲ್ವರ ಪೈಕಿ ಇಬ್ಬರ ದೇಹಗಳನ್ನು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಗುರುವಾರ ಸಂಜೆ 6 ಕ್ಕೆ ತರಲಾಗಿದೆ.

ಶಿವಾಜಿ ನಗರದ ಮಹಾದೇವಿ ಬಾವನೂರ(48) ಹಾಗೂ ಶೆಟ್ಟಿ ಗಲ್ಲಿಯ ಅರುಣ ಕೋಪರ್ಡೆ(61) ಅವರ ಮೃತದೇಹಗಳನ್ನು ದೆಹಲಿಯಿಂದ ನೇರವಾಗಿ ಬೆಳಗಾವಿಗೆ ಏರ್ ಲಿಫ್ಟ್ ಮಾಡಲಾಯಿತು. ಶವಗಳನ್ನು ಜಿಲ್ಲಾಡಳಿತದಿಂದ ಬರಮಾಡಿಕೊಳ್ಳಲಾಯಿತು.

ಮಹಾದೇವಿ ಅವರ ಶವವನ್ನು ಅವರ ತವರು ಹುಬ್ಬಳ್ಳಿ ಸಮೀಪದ ನೂಲ್ವಿ ಗ್ರಾಮಕ್ಕೆ ರವಾನಿಸಲಾಗಿದೆ.

ದೇಹಗಳನ್ನು ಎರಡು ಪ್ರತ್ಯೇಕ ಆ್ಯಂಬುಲೆನ್ಸ್‌ನಲ್ಲಿ ಹಾಕಿ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಯಿತು.
ಮೃತ ದೇಹಗಳನ್ನು ಆ್ಯಂಬುಲೆನ್ಸ್‌ನಿಂದ ಹೊರಕ್ಕೆ ತರುತ್ತಿದ್ದಂತೆ ಕುಟುಂಬಸ್ಥರ ದುಃಖ ಉಮ್ಮಳಿಸಿತು. ಶವಗಳ ಪೆಟ್ಟಿಗೆ ಮೇಲೆ ಒರಗಿ ಕಣ್ಣೀರು ಹಾಕಿದರು. ಸತ್ತವರ ಮುಖ ನೋಡುತ್ತೇವೆ, ಮುಖ ತೋರಿಸಿ ಎಂದು ಅವರ ಮಕ್ಕಳು ಅಳತೊಡಗಿದರು. ಸರ್ಕಾರಿ ಪ್ರಕ್ರಿಯೆಗಳನ್ನು ಮುಗಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಬಳಿಕ ದೇಹಗಳನ್ನು ಹಸ್ತಾಂತರ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಸಂಸದರಾದ ಜಗದೀಶ ಶೆಟ್ಟರ್, ಪ್ರಿಯಾಂಕಾ ಜಾರಕಿಹೊಳಿ, ಶಾಸಕರಾದ ಅಭಯ ಪಾಟೀಲ, ಆಸೀಫ್ ಸೇಠ್, ಮಾಜಿ ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಪುಷ್ಪನಮನ ಸಲ್ಲಿಸಿದರು.