ಪುಣೆ : ಪುಣೆ ವಿಮಾನ ನಿಲ್ದಾಣಕ್ಕೆ ಹೊಸ ಹೆಸರನ್ನು ಮಹಾರಾಷ್ಟ್ರ ಸರ್ಕಾರ ಅನುಮೋದಿಸಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಹಿಂದೆ ಹೆಸರು ಬದಲಾವಣೆಯನ್ನು ಬೆಂಬಲಿಸಿದ್ದರು, ಈ ಪ್ರಸ್ತಾಪಕ್ಕೆ ಕೇಂದ್ರದಲ್ಲಿ ಬೆಂಬಲ ಸಿಗುತ್ತದೆ ಎಂದು ಖಚಿತಪಡಿಸಿಕೊಳ್ಳುವುದಾಗಿ ಹೇಳಿದರು. ಇದೀಗ ಕೊನೆಗೂ ಪುಣೆ ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸರ್ಕಾರ ಸೋಮವಾರ ಅನುಮೋದನೆ ನೀಡಿದೆ. ಈ ವಿಮಾನ ನಿಲ್ದಾಣವನ್ನು ಈಗ ಜಗದ್ಗುರು ಸಂತ ತುಕಾರಾಂ ಮಹಾರಾಜ್ ವಿಮಾನ ನಿಲ್ದಾಣ ಎಂದು ಕರೆಯಲಾಗುವುದು. ಪ್ರಸ್ತಾವನೆಯನ್ನು ಅನುಮೋದನೆಗಾಗಿ ಕೇಂದ್ರಕ್ಕೆ ಕಳುಹಿಸಲಾಗುವುದು.

ಪುಣೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ‘ಜಗದ್ಗುರು ಸಂತಶ್ರೇಷ್ಠ ತುಕಾರಾಂ ಮಹಾರಾಜ್ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ ಮಾಡುವ ನಿಟ್ಟಿನಲ್ಲಿ ಇಂದು ಮೊದಲ ಹೆಜ್ಜೆ ಇಡಲಾಗಿದೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು. ನವೆಂಬರ್‌ನಲ್ಲಿ ದಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರದ ಆಶಯದಂತೆ ಇದೀಗ ಕೇಂದ್ರದ ನರೇಂದ್ರ ಮೋದಿ ಸರಕಾರ ಸಂತ ತುಕಾರಾಮರ ಹೆಸರಿಡಲು ಹಸಿರು ನಿಶಾನೆ ತೋರುವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ.