ಜೊಯಿಡಾ :
ಹರ ಹರ ಮಹಾದೇವ, ಅಡಕೇಶ್ವರ, ಮಡಕೇಶ್ವರ ಉಳವಿ ಚೆನ್ನ ಬಸವೇಶ್ವರ ಎನ್ನುತ್ತಾ ತೇರನ್ನು ಎಳೆಯುವ ಮೂಲಕ ಶ್ರೀ ಕ್ಷೇತ್ರ ಉಳವಿ ಚನ್ನ ಬಸವೇಶ್ವರ ಮಹಾರಥೋತ್ಸವ ಶನಿವಾರ ಸಂಪನ್ನಗೊಂಡಿತು.

ಸಂಭ್ರಮ ಸಡಗರಗಳ ನಡುವೆ ಮಹಾರಥೋತ್ಸವ ನಡೆಯಿತು. ಲಕ್ಷಾಂತರ ಜನರು ಜಯ ಘೋಷ ಹಾಕುತ್ತಾ ವಿಶಾಲವಾದ ರಥ ಬೀದಿಯಲ್ಲಿ ತೇರನ್ನು ಎಳೆದು ಸಂಭ್ರಮಿಸಿದರು.

ಬೆಳಗಾವಿ, ಬೈಲಹೂಂಗಲ,ವಿಜಯಪುರ, ಕಲಬುರ್ಗಿ, ಗದಗ, ಕೊಪ್ಪಳ, ಧಾರವಾಡ ಸೇರಿದಂತೆ ಬಸವಣ್ಣನ ಭಕ್ತರು ವಾರಗಳ ಮೊದಲೇ ಜಾತ್ರೆಗೆ ಬಂದು ಸೇರಿದ್ದರು. ಚಕ್ಕಡಿಗಳಲ್ಲಿ ಸಾವಿರಾರು ಭಕ್ತರು ಬಂದು ಚನ್ನ ಬಸವಣ್ಣನ ದರ್ಶನ ಪಡೆದರು. ಎತ್ತುಗಳನ್ನು ಶೃಂಗರಿಸಿ ದೇವರ ಮುಂದೆ ತಂದು ಪೂಜಿಸಿದರು. ಹರಕೆ ಪೂರೈಸಲು ಉರುಳುಗಾಯಿ ಬಿಟ್ಟರು. ದೀಡ ನಮಸ್ಕಾರ ಹಾಕಿದರು, ದಾಸೋಹ ನಡೆಸಿದರು. ಹಲವಾರು ವಿಧಗಳಿಂದ ದೇವರ ಸೇವೆ ಮಾಡಿದರು.ರಥಕ್ಕೆ ಉತ್ತತ್ತಿ,ಬಾಳೆಹಣ್ಣು ಹೊಡೆದು ಹರಕೆ ತೀರಿಸಿದರು.

ಈ ಸಲ ಅಂಗಡಿಗಳನ್ನು ನಿಯೋಜಿತ ಸ್ಥಳದಲ್ಲಿ ಹಾಕಿದ್ದರಿಂದ ರಥಬೀದಿಯಲ್ಲಿ ಥೇರನ್ನು ಎಳೆಯಲು ಜನಜಂಗುಳಿಯಿಲ್ಲದೆ ವ್ಯವಸ್ಥಿತವಾಗಿ ಸುಗಮವಾಗಿದ್ದು ಕಂಡುಬಂತು.

ದಿನಾಂಕ 16ನೇ ತಾರೀಕು ರಥಸಪ್ತಮಿಯಿಂದ ಪ್ರಾರಂಭ ವಾದ ಜಾತ್ರೆ ದಿನಾಂಕ 24ರ ಮಧ್ಯಾಹ್ನ ಮಘಾ ನಕ್ಷತ್ರದ ಶುಭಗಳಿಗೆಯಲ್ಲಿ ಸರಿಯಾಗಿ 4 ಘಂಟೆಗೆ ಲಕ್ಷಾಂತರ ಜನರು ಜಯಘೋಷಗಳೊಂದಿಗೆ ತೆರನ್ನೆಳೆದರು. ಚಕ್ಕಡಿಗಳಲ್ಲಿ ಬಂದ ಭಕ್ತರು ವಾರಗಳ ಕಾಲ ಬೀಡು ಬಿಡುತ್ತಾರೆ. ಈ ವರ್ಷ 1400 ಕ್ಕೂ ಹೆಚ್ಚು ಚಕ್ಕಡಿಗಳು ಬಂದಿದ್ದು 2800 ಕ್ಕೂ ಹೆಚ್ಚು ಎತ್ತುಗಳ ಆರೈಕೆಯಲ್ಲಿ ಪಶುಸಂಗೋಪನಾ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಡೆಪ್ಯೂಟಿ ಡೈರೆಕ್ಟರ್ ಮೋಹನ್ ಕುಮಾ‌ರ್ ಅಸಿಸ್ಟಂಟ್ ಡೈರೆಕ್ಟರ್ ಟಿ. ಎಸ್. ಮಂಜಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ವಿವಿಧ ಮಿಠಾಯಿ ಅಲಂಕಾರಿಕ ವಸ್ತುಗಳು, ಆಟಿಕೆ ಸಾಮಾನುಗಳು, ಬೆತ್ತದ ಸಾಮಗ್ರಿಗಳು ಅರಣ್ಯ ಇಲಾಖೆ ಇಂದ ಬೆತ್ತ ಮಾರಾಟ, ರೈತರ ಸಾಮಗ್ರಿಗಳು ಸೇರಿದಂತೆ ಅನೇಕ ಬಗೆಯ ಅಂಗಡಿಗಳು, ಹತ್ತಾರು ದಾಸೋಹಗಳು ಜನರ ನೆರವಿಗೆ ಬಂದವು.

ಮಹಾರಥೋತ್ಸವದಲ್ಲಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಗಂಗಾಧರ ಕಿತ್ತೂರ, ಉಪಾಧ್ಯಕ್ಷ ಸಂಜಯ ಕಿತ್ತೂರ, ಸದಸ್ಯ ಶಿವಾನಂದ ಕಿತ್ತೂರ, ವ್ಯವಸ್ಥಾಪಕ ಶಂಕರಯ್ಯ ಕಲ್ಮಠ ಶಾಸ್ತ್ರಿ, ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಮೊಕಾಶಿ, ಅಧಿಕಾರಿಗಳು ಉಪಸ್ಥಿತರಿದ್ದರು.ಶಾಸಕ ಆ‌ರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳವೇಕ‌ರ್ ಶುಭಕೋರಿದರು.