ಬೆಳಗಾವಿ :
ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್. ಎಸ್. ತೇರದಾಳ ಅವರು ಸಂತ ಕನಕದಾಸರ ಭಾವ ಚಿತ್ರಕ್ಕೆ ಪುಷ್ಪನಮನ ಮಾಡಿ ಮಾತನಾಡಿದರು. ಕೀರ್ತನಾ ಸಾಹಿತ್ಯದ ಅಶ್ವಿನಿ ದೇವತೆಯಾಗಿರುವ ಕನಕದಾಸರು ದಿವ್ಯವಾದ ಕೀರ್ತನೆಗಳು ಮತ್ತು ಅನುಪಮವಾದ ಸಾಹಿತ್ಯ ಕೃತಿಗಳನ್ನು ರಚಿಸುವುದರ ಮೂಲಕ ಸಾಹಿತ್ಯಲೋಕದಲ್ಲಿ ಇತರ ದಾಸರಿಗಿಂತ ವಿಭಿನ್ನವಾದರು. ತಮ್ಮ ಬರವಣಿಗೆಯಲ್ಲಿ ದೀನ-ದಲಿತ-ನಿರ್ಗತಿಕರ, ಶೋಷಿತರ ಧ್ವನಿಯನ್ನೇ ಸ್ಥಾಯಿಯಾಗಿ ಇಟ್ಟುಕೊಂಡರು.
ಸಮಸಮಾಜ ನಿರ್ಮಾಣಕ್ಕಾಗಿ, ಅನಾಥ ಪ್ರಜ್ಞೆಯಲ್ಲಿ ಬದುಕುತ್ತಿರುವ, ನಿರ್ಲಕ್ಷಿತ ಸಮುದಾಯದವರ ಬದುಕಿನಲ್ಲಿ ಬೆಳಕನ್ನು ತರಲು ತಮ್ಮ ಜೀವನವನ್ನು ಮುಡಿಪಿಟ್ಟರು. ತನ್ನ ಬದುಕಿನ ಪಯಣವೇ ಮಾದರಿಯಾಗುವಂತೆ ಅವರೆಲ್ಲರಿಗೂ ಬದುಕಿನಲ್ಲಿ ಆಶಾಕಿರಣವನ್ನು ತುಂಬಿ ಆತ್ಮಾಭಿಮಾನದಿಂದ ಬದುಕುವಂತೆ ಮಾಡಿದರು. ಸಮಾಜದಲ್ಲಿ ಬೇರು ಬಿಟ್ಟಿರುವ ಅಸಮಾನತೆ, ಕಂದಾಚಾರಗಳ, ಅನಾಚಾರಗಳ ವಿರುದ್ಧ ಸಮರ ಸಾರಿದರು. ಜನಸಾಮಾನ್ಯರಲ್ಲಿ ಅವುಗಳ ಕುರಿತು ಅರಿವು ಮೂಡಿಸಿದರು. ಕನಕದಾಸರ ವಿಚಾರಧಾರೆಗಳು ಮನುಕುಲದ ಉನ್ನತಿಗೆ ಕಾರಣವಾಗಿವೆ. ಮಾನವತೆಯ ಬೆಳಕು ಬೀರಿದ ಮಹಾಸಂತ ಕನಕದಾಸರು ಎಂದರು.

ಡಾ. ನಾರಾಯಣ ನಾಯ್ಕ ಅವರು ಕನಕದಾಸರು ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ನೀಡಿದ ಕೊಡುಗೆಗಳು ಮತ್ತು ತಿಮ್ಮಪ್ಪನಿಂದ ಕನಕನಾಗುವ ತನಕ ನಡೆಸಿದ ಹೋರಾಟದ ಪಲ್ಲಟಗಳನ್ನು ಸ್ಮರಿಸಿದರು.
ಡಾ. ಅರ್ಜುನ ಜಂಬಗಿ ನಿರೂಪಿಸಿ, ವಂದಿಸಿದರು. ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗಳು,
ಮಹಾವಿದ್ಯಾಲಯದಲ್ಲಿ ಪದವಿ ವಿಷಯಗಳ ಮೌಲ್ಯಮಾಪನ ಮಾಡುತ್ತಿರುವ ರಾಚವಿಯ ಸಂಯೋಜಿತ ಮಹಾವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.