ಮುಂಬೈ: ಬಿಜೆಪಿ, ಶಿವಸೇನೆ, ಎನ್‌ಸಿಪಿ ಪಕ್ಷಗಳ ಮೈತ್ರಿಕೂಟ ವಾದ ‘ಮಹಾಯುತಿ’ ಮಹಾರಾಷ್ಟ್ರ ಸರಕಾರದ ಸಚಿವ ಸಂಪುಟ ವಿಸ್ತರಣೆ ಭಾನುವಾರ ನಡೆಯಲಿದೆ. ನಾಗಪುರದಲ್ಲಿ ಭಾನುವಾರ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್‌ ನೇತೃತ್ವದ ಸಚಿವ ಸಂಪುಟವನ್ನು ಸೇರಲಿರುವ 40 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡರು ತಿಳಿಸಿದ್ದಾರೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಒಟ್ಟು 43 ಸಚಿವರಿಗೆ ಅವಕಾಶವಿದೆ. ಬಿಜೆಪಿ 132 ಶಾಸಕರನ್ನು ಹೊಂದಿದ್ದು, 20-21 ಸಚಿವ ಸ್ಥಾನ ಪಡೆಯಲಿದೆ, 57 ಶಾಸಕ ಬಲದ ಶಿವಸೇನೆ 11-12 ಸಚಿವ ಸ್ಥಾನ ಹೊಂದಲಿದೆ. ಎನ್‌ಸಿಪಿಯಿಂದ 41 ಶಾಸಕರು ಗೆದ್ದಿದ್ದು, 9-10 ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ. ಆ ಬಳಿಕ ಸೋಮವಾರದಿಂದಲೇ ನಾಗಪುರದಲ್ಲಿ ಮಹಾಯುತಿ 2.0 ಸರಕಾರದ ಅವಧಿಯ ಮೊದಲ ಚಳಿಗಾಲದ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಒಂದು ವಾರ ಕಾಲ ಕಲಾಪ ನಡೆಯಲಿದೆ.