ಬೆಳಗಾವಿ : ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನಗಳಲೊಂದಾದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮಹಿಳೆಯೊಬ್ಬರು ಮಕ್ಕಳಿಗೆ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ. ರಾಯಬಾಗ ತಾಲೂಕಿನ ಮಂಟೂರ ಗ್ರಾಮ ಪಂಚಾಯತಿಯ ಮಲ್ಲವ್ವ ಭೀಮಪ್ಪ ಮೇಟಿ ಗೃಹಲಕ್ಷ್ಮೀಯಿಂದ ಬಂದ ಹಣದಿಂದ ಗ್ರಾಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಮಲ್ಲವ್ವ ಮೇಟಿ ಮಾಹಿತಿ ಹಂಚಿಕೊಂಡಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಡೆವಲಪ್ಮೆಂಟ್ ಕಮೀಷನರ್ ಉಮಾ ಮಹದೇವನ್ ದಾಸ್ಗುಪ್ತ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಟ್ಯಾಗ್ ಮಾಡಿದ್ದಾರೆ. ಮಂಟೂರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾಗಿರುವ ಮಲ್ಲಪ್ಪ ಭೀಮಪ್ಪ ಮೇಟಿ ಅವರ ಕಾರ್ಯಕಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
13 ತಿಂಗಳಿನಿಂದ ಗೃಹಲಕ್ಷ್ಮೀ ಹಣ 26 ಸಾವಿರ ರೂಪಾಯಿ ಬಂದಿತ್ತು. ಅದರೊಂದಿಗೆ ಗ್ರಾಮ ಪಂಚಾಯಿತಿ ಮೆಂಬರ್ ಆಗಿರುವ ಕಾರಣಕ್ಕೆ ಗೌರವ ಧನ ಕೂಡ ಸಿಗುತ್ತದೆ. ಈ ಎಲ್ಲಾ ಹಣವನ್ನು ಒಟ್ಟು ಮಾಡಿ ನಾನು ಒಂದು ಸಣ್ಣ ಪ್ರಮಾಣದ ಗ್ರಂಥಾಲಯ ಕಟ್ಟಿದ್ದೇನ. ಸಣ್ಣ ಗ್ರಂಥಾಲಯಕ್ಕೆ ಒಂದೂವರೆ ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಮಲ್ಲವ್ವ ಭೀಮಪ್ಪ ಮೇಟಿ ತಿಳಿಸಿದ್ದಾರೆ.