Join The Telegram | Join The WhatsApp |
ಮಂಗಳೂರು :
ಮಂಗಳೂರು ಆಟೋ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಆಟೋ ಸ್ಫೋಟದ ವೇಳೆ ಸಿಕ್ಕಿದ ಪ್ರಯಾಣಿಕನದ್ದು ಎನ್ನಲಾದ ಆಧಾರಕಾರ್ಡ್ ಕೂಡ ನಕಲಿಯಾಗಿದ್ದು, ಇದು ತುಮಕೂರಿನಲ್ಲಿ ಕೆಲಸ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಹೆಸರಲ್ಲಿದೆ ಎಂಬುದು ಗೊತ್ತಾಗಿದೆ.
ಆಟೋದಲ್ಲಿ ಸ್ಫೋಟ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೆಯಾದ ಆಧಾರ್ ಕಾರ್ಡ್ನಲ್ಲಿದ್ದ ಮೂಲ ವ್ಯಕ್ತಿಯ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಆಧಾರ್ ಕಾರ್ಡ್ನಲ್ಲಿದ್ದ ವ್ಯಕ್ತಿಯನ್ನು ಹುಬ್ಬಳ್ಳಿ ಮೂಲದ ಪ್ರೇಮರಾಜ್ ಹುಟಗಿ ಎಂದು ಗುರುತಿಸಲಾಗಿದೆ. ಇವರು ತುಮಕೂರಿನಲ್ಲಿ ರೈಲ್ವೆ ಇಲಾಖೆಯ ಟ್ರ್ಯಾಕ್ ಮೆಂಟೇನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಇವರು ತುಮಕೂರಿನ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.
ಎರಡು ವರ್ಷಗಳಲ್ಲಿ ಇವರು ಎರಡು ಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದಾರೆ. ಧಾರವಾಡದಿಂದ ಬೆಳಗಾವಿಗೆ ಬಸ್ನಲ್ಲಿ ಬರುವಾಗ ಒಮ್ಮೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ನಂತರ ಮತ್ತೊಮ್ಮೆ ಆಧಾರ್ ಕಾರ್ಡ್ ಪಡೆದಿದ್ದರು. ಆದರೆ ಆರು ತಿಂಗಳ ಹಿಂದೆ ಹುಬ್ಬಳ್ಳಿಯಿಂದ ಬಸ್ನಲ್ಲಿ ಬರುವಾಗ ಮತ್ತೊಮ್ಮೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಅವರ ಆಧಾರ್ ಕಾರ್ಡ್ ಸ್ಫೋಟಗೊಂಡ ಆಟೋದಲ್ಲಿ ಪತ್ತೆಯಾಗಿದೆ.
ಮೈಸೂರಿನಲ್ಲಿ ಪತ್ತೆಯಾದ ಆಧಾರ್ ಕಾರ್ಡ್ನ ಮಾಹಿತಿ ಸಂಗ್ರಹಿಸಿದ ಎಡಿಜಿಪಿ ಅಲೋಕಕುಮಾರ್, ಪ್ರೇಮರಾಜ್ ಹುಟಗಿಗೆ ಕರೆ ಮಾಡಿ ಮಾತನಾಡಿ, ತಕ್ಷಣ ತುಮಕೂರು ಎಸ್ಪಿ ರಾಹುಲ್ ಕುಮಾರ್ ಅವರನ್ನು ಸಂಪರ್ಕಿಸುವಂತೆ ಸೂಚಿಸಿದ್ದರು. ಅದರಂತೆ ತುಮಕೂರು ಎಸ್ಪಿಯನ್ನು ಪ್ರೇಮರಾಜ್ ಹುಟಗಿ ಸಂಪರ್ಕಿಸಿದ್ದರು. ‘ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಟೋರಿಕ್ಷಾ ಸ್ಫೋಟವು ಆಕಸ್ಮಿಕವಲ್ಲ. ಆದರೆ ಗಂಭೀರ ಹಾನಿಯನ್ನುಂಟುಮಾಡುವ ಉದ್ದೇಶದಿಂದ ಭಯೋತ್ಪಾದಕ ಕೃತ್ಯ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ, ಪೊಲೀಸರು ಕೇಂದ್ರ ಏಜೆನ್ಸಿಗಳೊಂದಿಗೆ ಘಟನೆಯ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರಕರಣದಲ್ಲಿ ಕೇಂದ್ರ ತನಿಖಾ ತಂಡ ಪೊಲೀಸರಿಗೆ ನೆರವು ನೀಡುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಹೇಳಿದ್ದಾರೆ.
ಕೇಂದ್ರೀಯ ಗುಪ್ತಚರ ಸಂಸ್ಥೆಗಳ ಪ್ರಕಾರ, ಶಂಕಿತ ವ್ಯಕ್ತಿಯು ಕೊಯಮತ್ತೂರಿನಿಂದ ಸುಳ್ಳು ಹೆಸರಿನಲ್ಲಿ ಸಿಮ್ ಕಾರ್ಡ್ ಅನ್ನು ಪಡೆದಿದ್ದಾನೆ. “ಆತನ ಸಿಮ್ ಟವರ್ ಲೊಕೇಶನ್‌ಗಳನ್ನು ತೋರಿಸುತ್ತದೆ, ಆತ ತಮಿಳುನಾಡಿನಾದ್ಯಂತ ಪ್ರಯಾಣಿಸಿದ್ದಾನೆ. ತಮಿಳುನಾಡಿನಲ್ಲಿರುವ ತನ್ನ ಸಹಚರರನ್ನು ಹುಡುಕಲು ಆತನ ಕರೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು ಎನ್ ಡಿ ಟಿವಿ ವರದಿ ಮಾಡಿದೆ.
Join The Telegram | Join The WhatsApp |