ಮಂಗಳೂರು: ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದಲ್ಲಿ ಶ್ರೀ ಶಾರದಾ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಮಂಗಳೂರು ದಸರಾ ಮಹೋತ್ಸವಕ್ಕೆ ಗುರುವಾರ ಚಾಲನೆ ದೊರಕಿತು.

ಮಂಗಳೂರು ದಸರಾದ ವಿಶೇಷ ಆಕರ್ಷಣೆಯಾದ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಮಂಗಳವಾದ್ಯಗಳೊಂದಿಗೆ ದೇವಸ್ಥಾನದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಮಾಡಿಸಿ, ದರ್ಬಾರ್ ಸಭಾಂಗಣಕ್ಕೆ ತಂದು ಪ್ರತಿಷ್ಠಾಪಿಸಲಾಯಿತು. ಇದೇ ಸಭಾಂಗಣದಲ್ಲಿ ಶ್ರೀಮಹಾಗಣಪತಿ, ಸಿದ್ದಿಧಾತ್ರಿ, ಮಹಾಗೌರಿ, ಮಹಾಕಾಳಿ,
ಕಾತ್ಯಾಯಿನಿ, ಸ್ಕಂದಮಾತಾ, ಚಂದ್ರಘಂಟಾ, ಬ್ರಹ್ಮಚಾರಿಣಿ, ಶೈಲಪುತ್ರಿ, ಆದಿಶಕ್ತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಈ ವೇಳೆ ಶಾರದಾ ಹುಲಿವೇಷಧಾರಿಗಳ ತಂಡದವರು ಹುಲಿ ಕುಣಿತ ಸೇವೆ ಸಲ್ಲಿಸಿದರು. ಹುಲಿ ವೇಷ ಧರಿಸಿದ್ದ 9 ತಿಂಗಳ ಮಗುವು ಗಮನ ಸೆಳೆಯಿತು.

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ರೂವಾರಿ ಬಿ.ಜನಾರ್ದನ ಪೂಜಾರಿ ಅವರು ದಸರಾ ಮಹೋತ್ಸವವನ್ನು ಉದ್ಘಾಟಿಸಿದರು.

ನವರಾತ್ರಿ ಪ್ರಯುಕ್ತ ಶಾರದಾ ಮಾತೆಗೆ ಅ.13ರವರೆಗೆ ನಿತ್ಯವೂ ವಿಶೇಷ ಪೂಜೆ ಹಾಗೂ ವಿಶೇಷ ಅಲಂಕಾರಗಳು ನಡೆಯಲಿವೆ.

ನವರಾತ್ರಿ ಹಾಗೂ ದಸರಾ ಮಹೋತ್ಸವದ ಅಂಗವಾಗಿ ನಗರವು ಕಳೆ ಗಟ್ಟಿದೆ. ಕುದ್ರೋಳಿ ಕ್ಷೇತ್ರದಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ದಸರಾ ಮೆರವಣಿಗೆ ಸಾಗುವ ನಗರದ ಬೀದಿಗಳಲ್ಲಿ ಮಾಡಲಾದ ವಿದ್ಯುತ್ ದೀಪಾಲಂಕಾರ ಮಂಗಳೂರು ದಸರಾ ಸಂಭ್ರಮಕ್ಕೆ ವಿಶೇಷ ಕಳೆ ತಂದಿದೆ. ಹುಲುವೇಷ ಕುಣಿತದ ತಾಸೆ ಸದ್ದು ಬೀದಿ ಬೀದಿಗಳಲ್ಲಿ ಕಿವಿಗಪ್ಪಳಿಸುತ್ತಿದೆ. ನಗರದಲ್ಲಜ ಸಡಗರದಿಸನದ ಆಚರಿಸುವ ಈ ಉತ್ಸವಕ್ಕೆ ಶುಭಾಶಯ ಕೋರುವ ಫಲಕಗಳು ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ರಾರಾಜಿಸುತ್ತಿವೆ.