ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿಗಳಾದ ಮನೀಶ್ ಕರ್ಬೀಕರ್ ಮತ್ತು ಪ್ರಶಾಂತ್ ಕುಮಾರ್ ಥಾಕೂರ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಿಐಡಿ ಎಡಿಜಿಪಿ (ಆರ್ಥಿಕ ಅಪರಾಧಗಳು) ಆಗಿದ್ದ ಮನೀಶ್ ಕರ್ಬೀಕರ್ ಅವರು ಲೋಕಾಯುಕ್ತ ಎಡಿಜಿಪಿಯಾಗಿ ನೇಮಕವಾಗಿದ್ದು, ಲೋಕಾಯುಕ್ತ ಡಿಜಿಪಿಯಾಗಿದ್ದ ಪ್ರಶಾಂತ್ ಕುಮಾರ್ ಥಾಕೂರ್ ಅವರು ಅಗ್ನಿಶಾಮಕ ದಳ ಡಿಜಿಪಿಯಾಗಿ ವರ್ಗಾವಣೆಯಾಗಿದ್ದಾರೆ.
ಮನೀಶ್ ಕರ್ಬೀಕರ್ ಅವರು ಸದ್ಯ ವಾಲ್ಮೀಕಿ ನಿಗಮದ ಹಗರಣ ಹಾಗೂ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಖ್ಯಸ್ಥರೂ ಆಗಿದ್ದಾರೆ. ಇವರು ಲೋಕಾಯುಕ್ತ ಎಡಿಜಿಪಿಯಾಗಿ ನೇಮಕವಾಗಿದ್ದರೂ ಎರಡೂ ಪ್ರಕರಣಗಳ ಎಸ್ಐಟಿ ಮುಖ್ಯಸ್ಥರಾಗಿ ಮುಂದುವರಿಯುವಂತೆ ಸೂಚಿಸಲಾಗಿದೆ.
ಲೋಕಾಯುಕ್ತ ಡಿಜಿಪಿಯಾಗಿದ್ದ ಪ್ರಶಾಂತ್ ಠಾಕೂರ್ ಅವರನ್ನು ಅಗ್ನಿಶಾಮಕ ದಳ ಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಅಗ್ನಿಶಾಮಕ ದಳ ಡಿಜಿಪಿ ಹಾಗೂ ಮಹಾ ನಿರ್ದೇಶಕರಾಗಿದ್ದ ಮಾಲಿನಿ ಕೃಷ್ಣಮೂರ್ತಿ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.