ಕೊಪ್ಪಳ : ಗಂಗಾವತಿ ತಾಲೂಕು ಮರಕುಂಬಿಯಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ದಲಿತರು ಮತ್ತು ಸವರ್ಣೀಯರ ನಡುವಿನ ಜಾತಿ ಸಂಘರ್ಷ ಪ್ರಕರಣಕ್ಕೆ ಸಂಬಂಧಿಸಿ 101 ಅಪರಾಧಿಗಳ ಪೈಕಿ 98 ಜನರಿಗೆ ನ್ಯಾಯಾಲಯ ಗುರುವಾರದಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದೆ. ಜೊತೆಗೆ ತಲಾ 5000 ರೂ.ದಂಡ ವಿಧಿಸಲಾಗಿದೆ. ಇನ್ನುಳಿದ ಮೂವರು ಅಪರಾಧಿಗಳಿಗೆ ಎರಡು ಸಾವಿರ ರೂ. ದಂಡ ಮತ್ತು ಐದು ವರ್ಷಗಳ ಶಿಕ್ಷೆ ವಿಧಿಸಿರುವ ಇಲ್ಲಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಶೇಖರ ಸಿ. ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ 117 ಆರೋಪಿಗಳಿದ್ದರು. 101 ಜನರ ಮೇಲಿನ ಆರೋಪ ದೃಢಪಟ್ಟಿದ್ದು, ಕೆಲವರು ಈಗಾಗಲೇ ಮೃತಪಟ್ಟಿದ್ದಾರೆ ಬರೋಬ್ಬರಿ ದಶಕದ ಹಿಂದೆ ಗಂಗಾವತಿಯಲ್ಲಿ ಚಲನಚಿತ್ರ ನೋಡಲು ಹೋಗಿದ್ದಾಗ ಟಿಕೆಟ್ ವಿಚಾರಕ್ಕೆ ಆರಂಭವಾದ ಜಗಳ ಸಂಘರ್ಷಕ್ಕೆ ಕಾರಣವಾಗಿ ವಿವಾದ ಏರ್ಪಟ್ಟಿತ್ತು.