ಬೆಂಗಳೂರು : ನೆರೆಯ ಚೀನಾ ದೇಶದಿಂದ ಇದೀಗ ಕೊರೋನಾ ನಂತರ ಮತ್ತೊಂದು ಮಹಾಮಾರಿ ಅಬ್ಬರ ಶುರು ಮಾಡಿದೆ. ಇದರಿಂದ ಜನ ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ. ಜನರಲ್ಲಿ ಈ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ.

ನಮ್ಮ ದೇಶದಲ್ಲಿಯೂ hMPV ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಸರ್ಕಾರಗಳು ಎಚ್ಚೆತ್ತಿವೆ. ಬೆಂಗಳೂರು, ಅಹಮದಾಬಾದ್‌, ಕೋಲ್ಕತ್ತಾ, ಚೆನ್ನೈನಲ್ಲಿ ಪ್ರಕರಣಗಳು ವರದಿಯಾಗಿವೆ. ಯಾವುದೇ ವಿದೇಶಿ ಪ್ರಯಾಣದ ಹಿಸ್ಟರಿ ಇಲ್ಲದಿದ್ದರೂ ಸಹ ಟೆಸ್ಟ್ ಮಾಡಿಸಿದಾಗ ಪಾಸಿಟಿವ್‌ ರೋಗಲಕ್ಷಣಗಳನ್ನು ಹೊಂದಿರುವವರು ಬಹಿರಂಗ ಪ್ರದೇಶಗಳಿಗೆ ಪ್ರಯಾಣಿಸಬಾರದು ಎಂದು ವೈದ್ಯಕೀಯ ಅಧಿಕಾರಿಗಳು ಸೂಚಿಸುತ್ತಿದ್ದಾರೆ. ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವಂತೆ ಕರ್ನಾಟಕ ಸರ್ಕಾರ ಸೂಚಿಸಿದೆ.

ದೇಶದಲ್ಲಿ hMPV ವೈರಸ್ ಪ್ರಕರಣಗಳು ಬೆಳಕಿಗೆ ಬಂದ ಬಳಿಕ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಪ್ರಮುಖ ಘೋಷಣೆ ಮಾಡಿದ್ದಾರೆ. ಇದು ಹೊಸ ವೈರಸ್ ಅಲ್ಲ, ಇದನ್ನು 2001ರಲ್ಲಿ ಗುರುತಿಸಲಾಗಿದ್ದು, ದೇಶದಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಈ ಪರಿಸ್ಥಿತಿಯ ಸವಾಲುಗಳನ್ನು ಎದುರಿಸಲು ಸಿದ್ಧರಿದ್ದೇವೆ, ಕಾಲಕಾಲಕ್ಕೆ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ ಎಂದ ಸಚಿವರು, ಯಾರೂ ಭಯಪಡುವ ಅಗತ್ಯವಿಲ್ಲ, ಜನರು ಜಾಗೃತೆಯಿಂದ ಇರಿ ಎಂದಿದ್ದಾರೆ.

hMPV ವೈರಸ್ ಬಗ್ಗೆ ಯಾರೂ ಆತಂಕಪಡಬಾರದು ಎಂದು ICMR ಹೇಳಿದೆ. ಇದು ಸಾಮಾನ್ಯ ವೈರಸ್‌ಗಳಂತೆಯೇ ಪರಿಣಾಮ ಬೀರುತ್ತದೆ. ಶೀತ, ಜ್ವರ ತರಹದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳು ಮತ್ತು ವೃದ್ಧರಲ್ಲಿ ಈ ವೈರಸ್ ಹೆಚ್ಚಾಗಿ ಕಂಡುಬರುತ್ತದೆ. ದೇಶದ ಎಲ್ಲಾ ಆಸ್ಪತ್ರೆಗಳು ಈ ಪರಿಸ್ಥಿತಿಯ ಉಸಿರಾಟದ ಸೋಂಕು ಸಮಸ್ಯೆಗಳನ್ನು ಎದುರಿಸಲು ಸಿದ್ಧವಾಗಿವೆ ಎಂದು ಹೇಳಿದ ICMR, ಪ್ರತಿಯೊಬ್ಬರು ವೈಯಕ್ತಿಕ ಶುಚಿತ್ವವನ್ನು ಪಾಲಿಸುವಂತೆ ಜನರಲ್ಲಿ ಮನವಿ ಮಾಡಿದೆ.

ಭಾರತದಲ್ಲೂ ಚೀನಿ ವೈರಸ್ (HMPV) ಪತ್ತೆಯಾದ ಹಿನ್ನೆಲೆ ಜನರು ಆತಂಕಗೊಂಡಿದ್ದಾರೆ. ಬೆಂಗಳೂರಿನಲ್ಲಿ 2 ಸೇರಿದಂತೆ ದೇಶದಲ್ಲಿ ಒಟ್ಟು 6 ಪ್ರಕರಣಗಳು ದೃಢಪಟ್ಟಿವೆ. ಆದರೆ, ಇದು ಸಹಜ ಸೋಂಕು, ಅಪಾಯಕಾರಿ ಅಲ್ಲವೇ ಅಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ. ಹೀಗಾಗಿ ಲಾಕ್‌ಡೌನ್, ಯಾಂಡಮ್ ಪರೀಕ್ಷೆ, ಮಾಸ್ಕ್, ಶಾಲಾ ಮಕ್ಕಳಿಗೆ ಮಾರ್ಗಸೂಚಿ, ವಿಮಾನ ನಿಲ್ದಾಣದಲ್ಲಿ ಸ್ಟ್ರೀನಿಂಗ್ ಮುಂತಾದ ವಿಶೇಷ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.