ಮುಂಬೈ: ಶಾಲೆಯೊಂದರಲ್ಲಿ ನಾಲ್ಕು ವರ್ಷದ ಇಬ್ಬರು ಪುಟ್ಟ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಥಾಣೆಯಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, ಪೊಲೀಸರು ಲಾಠಿ ಮತ್ತು ಅಶ್ರುವಾಯು ಮೂಲಕ ಜನರ ಗುಂಪನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಪೊಲೀಸರ ಲಾಠಿ ಚಾರ್ಜ್‌ ನಂತರ ಆರು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಜನರಿಂದ ತುಂಬಿ ತುಳುಕುತ್ತಿದ್ದ ಬದ್ಲಾಪುರ್ ರೈಲು ನಿಲ್ದಾಣದಿಂದ ಜನರು ಚದುರಿದರು. ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟಿಸುತ್ತಿದ್ದ ಅನೇಕರು ಪೊಲೀಸರು ಲಾಠಿ ಬೀಸುತ್ತಿದ್ದಂತೆ ಓಡಲು ಪ್ರಾರಂಭಿಸಿದರು. ನಿಲ್ದಾಣದ ಇನ್ನೊಂದು ಬದಿಯಿಂದ, ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲು ತೂರಾಟಗಳನ್ನು ನಡೆಸಿದರು. ರೈಲ್ವೆ ನಿಲ್ದಾಣವು ರಣರಂಗವಾಗಿ ಮಾರ್ಪಟ್ಟತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದ ನಂತರ ಪ್ರತಿಭಟನಾಕಾರರು ಚದುರಿದರು.

ವರದಿಗಳ ಪ್ರಕಾರ ಈ ಘಟನೆ ಕಳೆದ ವಾರ ನಡೆದಿದೆ. ಆಗಸ್ಟ್ 18 ರಂದು ಪಾಲಕರಿಗೆ ದೌರ್ಜನ್ಯ ನಡೆದಿರುವುದು ತಿಳಿದು ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ 24 ವರ್ಷದ ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ. ವರದಿಯ ಪ್ರಕಾರ, ಈ ಪ್ರಕರಣದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಧ್ಯಪ್ರವೇಶಿಸಿದ ನಂತರವೇ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಘಟನೆಯನ್ನು ವಿರೋಧಿಸಿ ಹಲವು ಸಂಘಟನೆಗಳು ಬದ್ಲಾಪುರ ಬಂದ್‌ಗೆ ಕರೆ ನೀಡಿವೆ.

ಪುಟ್ಟ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಸುದ್ದಿ ಹರಡುತ್ತಿದ್ದಂತೆಯೇ ಬೆಳಿಗ್ಗೆ ಬದ್ಲಾಪುರದ ಸ್ಥಳೀಯ ರೈಲು ನಿಲ್ದಾಣಕ್ಕೆ ಸಾವಿರಾರು ಪ್ರತಿಭಟನಾಕಾರರು ಆಗಮಿಸಿ ರೈಲು ಸಂಚಾರ ತಡೆದಿದ್ದರು. ಆರು ಗಂಟೆಗಳ ನಂತರ, ಜನಸಂದಣಿಯು ಹೆಚ್ಚಾಯಿತು, ಇದು ರೈಲು ಸಂಚಾರ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಅಡ್ಡಿಪಡಿಸಲು ಕಾರಣವಾಯಿತು. ಬಾಲಕಿಯರ ಮೇಲೆ ದೌರ್ಜನ್ಯದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ 23 ವರ್ಷದ ಕ್ಲೀನರ್‌ಗೆ ಮರಣದಂಡನೆ ವಿಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.
ಪ್ರಥಮ ಮಾಹಿತಿ ವರದಿಗಾಗಿ ಬಾಲಕಿಯರ ಪೋಷಕರನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ 11 ಗಂಟೆಗಳ ಕಾಲ ಕಾಯುವಂತೆ ಮಾಡಲಾಗಿದೆ ಎಂಬ ಅಂಶ ಪ್ರತಿಭಟನಕಾರರನ್ನು ಮತ್ತಷ್ಟು ಕೆರಳಿಸಿದೆ. ಈ ಸಂಬಂಧ ಸರ್ಕಾರ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿದೆ. ಕೋಲ್ಕತ್ತಾದಲ್ಲಿ ಯುವ ವೈದ್ಯೆಯ ಅತ್ಯಾಚಾರ-ಕೊಲೆಯ ಹಿನ್ನೆಲೆಯಲ್ಲಿ ವೈದ್ಯಕೀಯ ಸಮುದಾಯದಲ್ಲಿ ಕೋಲಾಹಲವನ್ನು ಸೃಷ್ಟಿಸಿದ ಬೆನ್ನಿಗೇ ಈ ಪ್ರಕರಣವು ಸುತ್ತಮುತ್ತಲಿನ ಪ್ರದೇಶಗಳಿಂದ ಜನರನ್ನು ಸೆಳೆಯಿತು.

ಬಾಲಕಿಯರಿಗೆ ಕೇವಲ ನಾಲ್ಕು ವರ್ಷವಾಗಿರುವುದರಿಂದ ಕೋಲ್ಕತ್ತಾದ ಅತ್ಯಾಚಾರ ಹತ್ಯೆಗಿಂತ ಬದ್ಲಾಪುರದಲ್ಲಿ ನಡೆದ ಘಟನೆ “ದೊಡ್ಡದು” ಎಂದು ಮಹಾರಾಷ್ಟ್ರ ವಿಧಾನಸಭೆಯ ವಿಪಕ್ಷದ ನಾಯಕ ವಿಜಯ ವಾಡೆತ್ತಿವಾರ್ ಹೇಳಿದ್ದಾರೆ.”ಮೂರೂವರೆ ವರ್ಷದ ಬಾಲಕಿ, ನಾಲ್ಕು ವರ್ಷದ ಬಾಲಕಿಯ ಮೇಲೆ ದೌರ್ಜನ್ಯ ಎಸಗಲಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾದಾಗ 11 ಗಂಟೆಗಳ ಕಾಲ ಅವರನ್ನು (ಪೋಷಕರು) ಕಾಯುವಂತೆ ಮಾಡಲಾಗಿದೆ. ಯಾವುದೇ ಸೂಕ್ಷ್ಮತೆ ಉಳಿದಿದೆಯೇ? ನಾನು ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದೇನೆ ಮತ್ತು ಈ ವಿಳಂಬಕ್ಕೆ ಕಾರಣವಾದ ಮಹಿಳಾ ಪೊಲೀಸ್ ಅಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಹೇಳಿದ್ದೇನೆ” ಎಂದು ವಡೆಟ್ಟಿವಾರ್ ಹೇಳಿದ್ದಾರೆ.

ಆಗಸ್ಟ್ 16 ರಂದು ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರ ಶೌಚಾಲಯದಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಶಾಲಾ ಆಡಳಿತ ಮಂಡಳಿಯು ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಿದ್ದು, ತರಗತಿ ಶಿಕ್ಷಕಿ ಹಾಗೂ ದಾದಿಯನ್ನೂ ವಜಾಗೊಳಿಸಿದೆ.
ತನಿಖೆಯು ಶಾಲೆಯ ಕಡೆಯಿಂದ ಹಲವಾರು ಲೋಪದೋಷಗಳನ್ನು ಬಹಿರಂಗಪಡಿಸಿದೆ. ಮೂಲಭೂತ ಸುರಕ್ಷತೆಯ ಅವಶ್ಯಕತೆಯಾದ ಬಾಲಕಿಯರ ಶೌಚಾಲಯಗಳಲ್ಲಿ ಮಹಿಳಾ ಅಟೆಂಡರ್‌ಗಳು ಇರಲಿಲ್ಲ. ಶಾಲೆಯ ಹಲವು ಸಿಸಿಟಿವಿ ಕ್ಯಾಮೆರಾಗಳೂ ಕಾರ್ಯನಿರ್ವಹಿಸುತ್ತಿರಲಿಲ್ಲ.
ಕರ್ತವ್ಯ ಲೋಪವೆಸಗಿರುವ ಬದ್ಲಾಪುರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮತ್ತು ಹೆಡ್ ಕಾನ್‌ಸ್ಟೆಬಲ್ ಅವರನ್ನು ತಕ್ಷಣ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ದೇವೇಂದ್ರ ಫಡ್ನವೀಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ಪ್ರಕರಣದ ಸಂಬಂಧ ವಿಶೇಷ ತನಿಖಾ ತಂಡ ರಚನೆಗೆ ಆದೇಶ ನೀಡಿದ್ದು, ಮಹಿಳಾ ಐಪಿಎಸ್ ಅಧಿಕಾರಿ ನೇತೃತ್ವ ವಹಿಸಲಿದ್ದಾರೆ. ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.
ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ರಾಜ್ಯ ಸರ್ಕಾರ ಈಗಾಗಲೇ ಆದೇಶಿಸಿದೆ. ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಏಕನಾಥ ಶಿಂಧೆ, ಪ್ರಕರಣವನ್ನು ತ್ವರಿತಗತಿಯಲ್ಲಿ ಪತ್ತೆಹಚ್ಚಲಾಗುವುದು ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನು ನೇಮಿಸಲಾಗುವುದು ಎಂದು ತಿಳಿಸಿದ್ದಾರೆ.

“ನಾನು ಥಾಣೆ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದೇನೆ. ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣವನ್ನು ಶೀಘ್ರವಾಗಿ ಪತ್ತೆಹಚ್ಚಲು ಮತ್ತು ಆರೋಪಿಗಳ ಮೇಲೆ ಅತ್ಯಾಚಾರ ಯತ್ನ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಆರೋಪಿಗಳನ್ನು ದಾಖಲಿಸುವಂತೆ ಕೇಳಿದ್ದೇನೆ ಎಂದು ಅವರು ಹೇಳಿದರು.