Join The Telegram | Join The WhatsApp |
ಬೆಳಗಾವಿ :
ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ಮರಾಠಾ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸುತ್ತಾ ಬರಲಾಗಿದೆ. ಸರಕಾರದ ಮೀಸಲಾತಿ ಇಲ್ಲದೆ ಮರಾಠ ಸಮಾಜದ ಪ್ರಗತಿ ಕುಂಠಿತವಾಗಿದೆ. ಅದಕ್ಕಾಗಿಯೇ ಮೀಸಲು ಬೇಡಿಕೆ ಕುರಿತು ಸರಕಾರದ ಗಮನ ಸೆಳೆಯಲು ಡಿ.20ರ ಮಂಗಳವಾರ ಸಮಸ್ತ ಮರಾಠ ಸಮಾಜದ ವತಿಯಿಂದ ಸುವರ್ಣ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು. ರಾಜ್ಯದ ಎಲ್ಲಾ ಮರಾಠಾ ಶಾಸಕರು ಚಳಿಗಾಲದ ಅಧಿವೇಶನದಲ್ಲಿ ಮರಾಠಾ ಮೀಸಲಾತಿಗೆ ಒತ್ತಾಯಿಸಲಿದ್ದಾರೆ ಎಂದು ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮರಾಠಾ ಮೀಸಲಾತಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ನೇಮಿಸಿದ್ದ ಶಂಕರಪ್ಪ ಆಯೋಗವು ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಮೀಸಲಾತಿ ಬೇಡಿಕೆಗೆ ಸಂಬಂಧಿಸಿದಂತೆ ಈವರೆಗೆ ಎಲ್ಲಾ ಮುಖ್ಯಮಂತ್ರಿಗಳಿಗೂ ಮನವಿ ನೀಡಲಾಗಿದೆ.ಯಡಿಯೂರಪ್ಪ ಅವರು 4 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇಂದಿಗೂ ಬೇಡಿಕೆ ಈಡೇರಿಲ್ಲ. ಅದಕ್ಕಾಗಿ ಚಳಿಗಾಲದ ಅಧಿವೇಶನದಲ್ಲಿ ಮರಾಠಾ ಸಮುದಾಯದ ಮೀಸಲಾತಿಯ ಪ್ರಮುಖ ಬೇಡಿಕೆಗಾಗಿ ಸುವರ್ಣ ಸೌಧದ ಮುಂದೆ ಇಡೀ ಮರಾಠಾ ಸಮಾಜದ ಪರವಾಗಿ ಧರಣಿ ಚಳವಳಿ ನಡೆಸಲಾಗುವುದು. ಇದೇ ವೇಳೆ, ಇಡೀ ರಾಜ್ಯದ ಮರಾಠಾ ಸಮುದಾಯದ ಶಾಸಕರು ಒಗ್ಗೂಡಿ ಮೀಸಲಾತಿಯ ಪ್ರಮುಖ ಬೇಡಿಕೆಯನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ ಎಂದು ವಿವರಿಸಿದರು.
ಮರಾಠಾ ಸಮಾಜದ ಮುಖಂಡ ಕಿರಣ ಜಾಧವ್ ಮಾತನಾಡಿ, ಮರಾಠಾ ಸಮಾಜದ ಪ್ರಭು ಮಂಜುನಾಥಸ್ವಾಮಿ ನೇತೃತ್ವದಲ್ಲಿ ರಾಜ್ಯದ ಮರಾಠಾ ಸಮಾಜದ ಶಾಸಕರು ಒಗ್ಗೂಡಿ ಸದನದಲ್ಲಿ ಮರಾಠ ಮೀಸಲಾತಿ ವಿಚಾರವಾಗಿ ಚರ್ಚೆ ನಡೆಸಲಿದ್ದಾರೆ ಎಂದರು.
ಕಳೆದ ವರ್ಷ ಹೋರಾಟ ನಡೆಸಿದ ನಂತರ ಸರ್ಕಾರ ಮರಾಠಾ ಸಮುದಾಯದ ಪ್ರಗತಿಗೆ ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಿದೆ ಎಂದು ಕಿರಣ್ ಜಾಧವ್ ವಿವರಿಸಿದರು.
ಮೀಸಲಾತಿ ಬೇಡಿಕೆಯನ್ನು ಒಪ್ಪಿಕೊಳ್ಳದಿದ್ದರೆ ಇಡೀ ಮರಾಠಾ ಸಮುದಾಯದ ಹೋರಾಟ ಮುಂದುವರಿಯಲಿದೆ ಎಂದು ಮರಾಠ ಸಮುದಾಯದ ಯುವ ಮುಖಂಡ ವಿನಯ್ ಕದಂ ಎಚ್ಚರಿಸಿದರು. ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ತಿನ ಜಿಲ್ಲಾಧ್ಯಕ್ಷ ವೈಭವ್ ಕದಂ, ಯುವ ಮುಖಂಡ ಧನಂಜಯ ಜಾಧವ, ಜಿಲ್ಲಾ ಉಪಾಧ್ಯಕ್ಷ ಮಹೇಶ ರೆಡೇಕರ, ರಾಜ್ಯ ಕಾರ್ಯ ದರ್ಶಿ ವಿಠ್ಠಲ ವಾಘಮೋಡೆ, ಸಂಜಯ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
Join The Telegram | Join The WhatsApp |