ವೇಣೂರು : ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಮಾವತಿ ವೀ. ಹೆಗ್ಗಡೆ ಮತ್ತು ಕುಟುಂಬಸ್ಥರು ಮಹಾಮಸ್ತಕಾಭಿಷೇಕ ನೆರವೇರಿಸಿದ್ದಾರೆ.
ಸಂಜೆ 504 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ನೆರವೇರಿಸಿದರು.
ಹರಿದು ಬರುತ್ತಿದೆ ಜನಸಾಗರ :
ತಿಮ್ಮಣ್ಣ ಅಜಿಲರು 1604ರಲ್ಲಿ ಪ್ರತಿಷ್ಠಾಪಿಸಿದ ಬಾಹುಬಲಿ ಮೂರ್ತಿಯ ಈ ಶತಮಾನದ ಮಹಾ ಮಸ್ತಕಾಭಿಷೇಕ, ಫೆ.22ರಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ನೆರವೇರುತ್ತಿದೆ. ಯುಗಳಮುನಿ ಶ್ರೀ ಅಮೋಘ ಕೀರ್ತಿ ಮಹಾರಾಜರು ಹಾಗೂ ಪರಮಪೂಜ್ಯ 108 ಶ್ರೀ ಅಮರ ಕೀರ್ತಿ ಮಹಾರಾಜರ ಸಾನ್ನಿಧ್ಯ, ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಧಾರ್ಮಿಕ ಕಾರ್ಯಕ್ರಮ 9 ದಿನಗಳ ಕಾಲ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪ್ರತಿದಿನ ಸಂಜೆ 6.45ರ ಬಳಿಕ ವಿವಿಧ ದ್ರವ್ಯಗಳಿಂದ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ ಜರುಗುತ್ತಿದೆ.
ಅಹಿಂಸೆಯಿಂದ ಸುಖ.. ತ್ಯಾಗದಿಂದ ಶಾಂತಿ…’ ಎಂಬ ಸಂದೇಶದೊಂದಿಗೆ ವೇಣೂರು ಶ್ರೀ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕಕ್ಕೆ ಜನಸಾಗರ ಹರಿದು ಬರುತ್ತಿದೆ.
ರಾಜ್ಯದಲ್ಲಿರುವ ಪ್ರಮುಖ ನಾಲ್ಕು ಬಾಹುಬಲಿ ಮೂರ್ತಿಗಳ ಪೈಕಿ ಮೂರು ಮೂರ್ತಿಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದರೆ, ಅತಿ ಎತ್ತರದ ಮೂರ್ತಿ ಶ್ರವಣಬೆಳಗೊಳದಲ್ಲಿದೆ. ಕಾರ್ಕಳದಲ್ಲಿ42 ಅಡಿ, ವೇಣೂರಿನಲ್ಲಿ35 ಅಡಿ ಹಾಗೂ ಧರ್ಮಸ್ಥಳದಲ್ಲಿ39 ಅಡಿ ಎತ್ತರದ ಬಾಹುಬಲಿ ಮೂರ್ತಿಗಳಿವೆ. ವೇಣೂರಿನ ಅಜಿಲ ಮನೆತನದವರು ಸ್ಥಾಪಿಸಿದ ಬಾಹುಬಲಿ ಮೂರ್ತಿಗೆ ಈ ಶತಮಾನದ ಬಹು ಸಂಭ್ರಮದ ಮಹಾ ಮಸ್ತಕಾಭಿಷೇಕ. ಈ ಹಿಂದೆ 2000, 2012ರಲ್ಲಿ ಮಹಾ ಮಸ್ತಕಾಭಿಷೇಕ ನಡೆದಿತ್ತು.
ಮಾರ್ಚ್ 1ರಂದು ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.