ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ದ್ವಿತೀಯ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮಾತೃ ವಂದನಾ ಕಾರ್ಯಕ್ರಮ ನಡೆಯಿತು.

ಬಾಲಕೃಷ್ಣ ಶೆಟ್ಟಿ ಮೊಳಹಳ್ಳಿ , ನಿವೃತ್ತ ಪ್ರಾಂಶುಪಾಲರು , ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜು ಕಟೀಲು ಇವರು ಪ್ರಸ್ತುತಪಡಿಸಿ , ಈ ಭೂಮಿ ಮೇಲಿನ ಅದ್ಭುತ ದೇವತೆ ತಾಯಿ . ತಾಯಿಗೆ ಸಮನಾದ ದೇವರಿಲ್ಲ. ಅದೆಷ್ಟೋ ಅದ್ಭುತ ತಾಯಂದಿರು ಈ ಜಗತ್ತಿನಲ್ಲಿ ಹುಟ್ಟಿದ್ದಾರೆ . ಮನೆಯೆ ಮೊದಲ ಪಾಠಶಾಲೆ, ತಾಯಿ ತಾನೆ ಮೊದಲ ಗುರು ಎಂಬಂತೆ, ಭಗತ್ ಸಿಂಗ್, ಥಾಮಸ್ ಅಲ್ವಾ ಎಡಿಸನ್, ಈಶ್ವರ ಚಂದ್ರ ಇತಿಹಾಸಾಗರ್ ಅವರಂತಹ ಮಹಾನ್ ವ್ಯಕ್ತಿಗಳ ಹುಟ್ಟು ಮತ್ತು ಬೆಳವಣಿಗೆಗೆ ಕಾರಣಿಕರ್ತರಾದ ಮಹಾ ತಾಯಿಯರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು. ಇಂದು ಈ ಕಾರ್ಯಕ್ರಮದಲ್ಲಿ ಕಣ್ಣು ಹಾಯಿಸಿದಷ್ಟು ದೂರ ಸಾಮೂಹಿಕವಾಗಿ ತಾಯಿ ಮತ್ತು ಮಗು ಜೊತೆಯಾಗಿ ಕುಳಿತಿರುವುದನ್ನ ನೋಡಿದರೆ ಹೃದಯ ತುಂಬಿ ಬರುತ್ತದೆ. ಇಂತಹ ಭಾವನಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮೃತ ಭಾರತೀಯ ಪ್ರತಿಯೊಂದು ಮಗು ತನ್ನ ತಂದೆ ತಾಯಿಯನ್ನು ಎಂದು ನೋಯಿಸದೆ , ವೃದ್ಧಾಶ್ರಮಕ್ಕೆ ಸೇರಿಸದೆ , ತನ್ನನ್ನು ತಾಯಿ ಹೇಗೆ ನೋಡಿಕೊಂಡಿದ್ದಳೋ , ಅದೇ ರೀತಿ ತಾಯಿಯನ್ನು ನೋಡಿಕೊಳ್ಳುತ್ತಾರೆ ಎಂದರು.

ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಸತೀಶ್ ಪೈ , ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ನಾಯಕ್, ವಿದ್ಯಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಶೈಲೇಶ್ ಕಿಣಿ , ಟ್ರಸ್ಟಿಗಳಾದ ಬಾಲಕೃಷ್ಣ ಮಲ್ಯ , ಗಣೇಶ್ ಕಿಣಿ , ಹಾಸ್ಟೆಲ್ ಕಮಿಟಿಯ ಅಧ್ಯಕ್ಷೆ ಡಾ.ಭಾರ್ಗವಿ ಐತಾಳ್, ಸಂಸ್ಥೆಯ ಮುಖ್ಯಸ್ಥ ಅಮರೇಶ್ ಹೆಗ್ಡೆ, ಅರುಣ್ , ಅನಿತಾ, ಅಪರ್ಣಾ, ಶಕುಂತಲಾ, ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಥೆಯ ಸಂಸ್ಕೃತ ಉಪನ್ಯಾಸಕ ಹರಿಶ್ಚಂದ್ರ ಪೂಜಾ ಕೈಂಕರ್ಯ ನೆರವೇರಿಸಿದರು . ವಿದ್ಯಾರ್ಥಿಗಳು ತಮ್ಮ ತಾಯಂದಿರ ಪಾದವನ್ನು ತೊಳೆದು , ಅರಿಶಿನ ಕುಂಕುಮ ಹಚ್ಚಿ , ಆರತಿ ಬೆಳಗಿ, ಸಿಹಿ ತಿನ್ನಿಸಿ ಭಾವಪರವಶರಾದರು. ಉಪನ್ಯಾಸಕರಾದ ವೀಣೇಶ್ ಅಮೀನ್ ಸುಹಾಸ್ ನಿರೂಪಿಸಿ ವಂದಿಸಿದರು.