ಜಿತೇಂದ್ರ ಕುಂದೇಶ್ವರ
ಮಂಗಳೂರು: ಶಬರಿಮಲೆ ಅಯ್ಯಪ್ಪ ಯಕ್ಷಗಾನ ಬಯಲಾಟದಲ್ಲಿ ವಿವಾದಕ್ಕೀಡಾಗಿರುವ ಅನ್ಯಮತೀಯ ವಾವರ ಪಾತ್ರಕ್ಕೆ ಬಯಲಾಟ ಮೇಳಗಳು ಕತ್ತರಿ ಪ್ರಯೋಗಕ್ಕೆ ಮುಂದಾಗಿವೆ.
ಶಬರಿಮಲೆ ಅಯ್ಯಪ್ಪ ಕ್ಷೇತ್ರ ಮಹಾತ್ಮೆಯಲ್ಲಿ ವಾವರ ಎಂಬ ಪಾತ್ರದ ಬಗ್ಗೆ ಇತ್ತೀಚೆಗೆ ಆಕ್ಷೇಪ ಕೇಳಿ ಬಂದಿತ್ತು.ಉಜಿರೆಯಲ್ಲಿ ಅಯ್ಯಪ್ಪ ಸ್ವಾಮಿ ಬ್ರಹ್ಮಕಲಶೋತ್ಸವ ಸಂದರ್ಭ ಸಮಾರಂಭದಲ್ಲಿ ಬರೋಡಾದಲ್ಲಿ ಬೃಹತ್ ಉದ್ಯಮ ಹೊಂದಿರುವ ಉಜಿರೆಯ ಉದ್ಯಮಿ ಶಶಿಧರ ಶೆಟ್ಟಿ ಅವರು ಯಕ್ಷಗಾನ ಬಯಲಾಟಗಳಲ್ಲಿ ಶಬರಿ ಮಲೆ ಅಯ್ಯಪ್ಪ ಪ್ರಸಂಗದಲ್ಲಿ ವಾವರ ಎಂಬ ಅನ್ಯಮತೀಯ ದರೋಡೆಕೋರನ ಪಾತ್ರವನ್ನು ದೈವತ್ವಕ್ಕೆ ಏರಿಸುವ ವಾವರ ಪೂಜೆ ಕುರಿತು ಆಕ್ಷೇಪ ಎತ್ತಿದ್ದರು. ಯಕ್ಷಗಾನದ ಹಾಸ್ಯ ರಸೋತ್ಪತ್ತಿಗಾಗಿ ಪ್ರಸಂಗ ಕರ್ತರು ವಿದೂಷಕ ಪಾತ್ರವನ್ನು ಸೃಷ್ಟಿಸಿದ್ದು ಇದನ್ನು ಇತ್ತೀಚೆಗೆ ಅಯ್ಯಪ್ಪ ವೃತಧಾರಿಗಳು ಅನುಸರಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಶಬರಿಮಲೆ ಯಾತ್ರೆಗೆ ಹೋಗುವವರು ಪೂರ್ವದಲ್ಲಿ ವಾವರನ ನೆನಪಿಗೆ ಅಲ್ಲಿನ ಮಸೀದಿಗೆ ಹೋಗುವುದು ತೆಂಗಿನಕಾಯಿ, ಕಾಳುಮೆಣಸು ಕೊಡುವುದು, ದಕ್ಷಿಣೆ ಹಾಕುವುದು ತಪ್ಪು. ಇದು ಯಾವ ಪುರಾಣದಲ್ಲೂ ಇಲ್ಲ ಧರ್ಮ ಗ್ರಂಥಗಳಲ್ಲೂ ಇಲ್ಲ, ಇತಿಹಾಸವೂ ಇಲ್ಲ. ಇದು ಹಿಂದೂ ಸನಾತನ ಧರ್ಮಕ್ಕೆ ಅಪಚಾರ ಮಾಡಿದಂತಾಗುತ್ತದೆ. ವೃತಧಾರಿಗಳು ವಾವರ ಮತ್ತು ಅಯ್ಯಪ್ಪ ದೇವರು ಮೈಮೇಲೆ ಬಂದು ಯುದ್ಧ ಸನ್ನಿವೇಶದ ದರ್ಶನವನ್ನು ಮಾಡುತ್ತಿರುವುದರನ್ನು ನಿಲ್ಲಿಸಿ ಎಂದುಮನವಿ ಮಾಡಿದ್ದರು.ಯಕ್ಷಗಾನದಲ್ಲಿಯೂ ವಾವರ ಪಾತ್ರವನ್ನು ಕಿತ್ತು ತೆಗೆಯುವಂತೆ ಮೇಳಗಳ ಯಜಮಾನರುಗಳಿಗೆ, ಪಾತ್ರಧಾರಿಗಳಿಗೆ ಮನವಿ ಮಾಡಿದ್ದರು.
ವಾವರ ಕೈ ಬಿಡುವ ಭರವಸೆ !
ಪರಿಣಾಮ ಗೆಜ್ಜೆಗಿರಿ ಮೇಳವು ಶಬರಿಮಲೆ ಪ್ರಸಂಗದಲ್ಲಿ ಶಬರಿಮಲೆ ಅಯ್ಯಪ್ಪ ಪ್ರಸಂಗದಲ್ಲಿ ವಾವರ ಪಾತ್ರವನ್ನೇ ಕೈ ಬಿಟ್ಟಿದೆ. ಪಾವಂಜೆ ಮೇಳದಲ್ಲಿಯೂ ಶಬರಿಮಲೆ ಪ್ರಸಂಗ ಆಡಿಸಿದರೆ ವಾವರ ಪಾತ್ರಕ್ಕೆ ಕತ್ತರಿ ಪ್ರಯೋಗ ಮಾಡುವುದಾಗಿ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಭರವಸೆ ನೀಡಿದ್ದಾರೆ. ಕಿಶನ್ ಹೆಗ್ಡೆ ಸಂಚಾಲಕತ್ವದ ಐದು ಮೇಳಗಳಲ್ಲಿಯೂ ಶಬರಿಮಲೆ ಪ್ರಸಂಗ ಆಡಿಸುವ ಸಂದರ್ಭ ಬಂದಾಗ ವಾವರ ಪಾತ್ರಕ್ಕೆ ಕತ್ತರಿ ಪ್ರಯೋಗಕ್ಕೆ ಒಪ್ಪಿಕೊಂಡಿದ್ದಾರೆ. ಅಯ್ಯಪ್ಪ ಪ್ರಸಂಗವನ್ನು ಅತಿ ಹೆಚ್ಚು ಪ್ರದರ್ಶನ ಮಾಡುವ ಸಸಿಹಿತ್ಲು ಭಗವತಿ ಮೇಳದಲ್ಲಿಯೂ ವಾವರ ಪಾತ್ರ ಮೊಟಕುಗೊಳಿಸುವ ಕುರಿತು ಪೂರಕವಾಗಿ ಸ್ಪಂದಿಸಿದ್ದಾರೆ.
ವಾವರ ಪಾತ್ರಕ್ಕೆ ಟ್ರಿಮ್: ವಾವರ ಪಾತ್ರಧಾರಿ ಪ್ರಸಿದ್ಧ ಕಲಾವಿದ ಸರಪಾಡಿ ಅಶೋಕ ಶೆಟ್ಟರು ಅಯ್ಯಪ್ಪ ಸ್ವಾಮಿ ಜತೆ ಯುದ್ಧದಲ್ಲಿ ಸೋತು ಹೋಗುವವರೆಗಷ್ಟೇ ವಾವರ ಪಾತ್ರ. ವಾವರ ಪೂಜೆ ಮತ್ತು ಮೋಕ್ಷದ ಪ್ರಸ್ತಾಪ ಮಾಡುವುದಿಲ್ಲ ಎಂದು ಶಶಿಧರ ಶೆಟ್ಟಿ ಅವರಿಗೆ ಭರವಸೆ ನೀಡಿದ್ದಾರೆ.
ಪ್ರಸಂಗ ಚೆನ್ನಾಗಿ ಪ್ರದರ್ಶನಗೊಳ್ಳಲು ಪಾತ್ರವನ್ನು ಸೃಷ್ಟಿಸಿರಬಹುದು. ಆದರೆ ಈ ಬಯಲಾಟದ ಪರಿಣಾಮ ಈಗ ತುಳುನಾಡಿನ ಕಡೆಯಿಂದ ಹೋಗುವ ಲಕ್ಷಾಂತರ ಮಂದಿ ಅಯ್ಯಪ್ಪ ವೃತಧಾರಿಗಳು ಶಬರಿಮಲೆ ಹೋಗುವ ಮುನ್ನ ವಾವರ ಮಸೀದಿಗೆ ಹೋಗಿ ಕಾಣಿಕೆ ಹಾಕುತ್ತಿದ್ದಾರೆ. ಮಸೀದಿಯಿಂದ ಕೊಡುವ ಕರಿ ಬಟ್ಟೆ ಹಿಡಿದುಕೊಂಡು ಬರುತ್ತಿದ್ದಾರೆ. ಮನೋರಂಜನೆಗಾಗಿ ರಚಿತವಾದ ಪ್ರಸಂಗದಿಂದಾಗಿ ಸನಾತನ ಧರ್ಮದ ಆಚರಣೆಯಲ್ಲಿ ಅನ್ಯಮತೀಯ ಆಚರಣೆ ತುರುಕಿಕೊಂಡಿರುವುದು ಸರಿಯಲ್ಲ. ಇದನ್ನು ಯಕ್ಷಗಾನ ಮಾಡುವವರು ಮತ್ತು ಮಾಡಿಸುವವರು ಸರಿಪಡಿಸಬೇಕು ಎಂಬುದು ಶಶಿಧರ ಶೆಟ್ಟಿ ಆವರ ವಾದ.ವಾವರ ದರ್ಶನ ಬಂದ್:
ಶಬರಿ ಮಲೆಗೆ ತೆರಳುವ ಅಯ್ಯಪ್ಪ ವೃತಧಾರಿಗಳು ಶಿಬಿರಗಳಲ್ಲಿ ರಾತ್ರಿ ವೇಳೆ ವಾವರ – ಅಯ್ಯಪ್ಪ ಯುದ್ಧ ಸನ್ನಿವೇಶವನ್ನು ದರ್ಶನದ ಮೂಲಕ ಪ್ರಸ್ತು ಪಡಿಸುತ್ತಿದ್ದರು. ವೃತಧಾರಿಗಳಲ್ಲಿ ಒಬ್ಬರು ವಾವರನಂತೆಯೂ ಇನ್ನೊಬ್ಬರು ಅಯ್ಯಪ್ಪನಂತೆಯೂ ಮೈಮೇಲೆ ಆವೇಶ ಮಾಡಿಕೊಂಡು ದರ್ಶನ ರೂಪದಲ್ಲಿ ಮಾಡುತ್ತಿದ್ದರು. ಇದಕ್ಕೆ ಆಕ್ಷೇಪ ಬಂದ ಬಳಿಕ ಶಿಬಿರದಲ್ಲಿ ಈ ದರ್ಶನವೂ ಬಂದ್ ಆಗಿದೆ.ಸಂತೋಷ್ ಗುರೂಜಿ ಸಲಹೆ: ಇದೇ ವಿಚಾರದಲ್ಲಿ ಸಂತೋಷ್ ಗುರೂಜಿ ಹಿಂದೊಮ್ಮೆ ಪ್ರಸ್ತಾಪ ಮಾಡಿದ್ದರು. ಶಬರಿಮಲೆಗೆ ಹೋಗುವ ವೇಳೆ ಅಯ್ಯಪ್ಪ ವೃತಧಾರಿಗಳು ವಾವರನಿಗೆ ಸಂಬಂಧಿಸಿದೆ ಎನ್ನಲಾದ ಮಸೀದಿಗೆ ಭೇಟಿ ಕೊಡುವುದು ಸರಿ ಅಲ್ಲ. ಅಯ್ಯಪ್ಪ ಸ್ವಾಮಿ ಜತೆ ವಾವರನ ಯುದ್ಧ ಕಪೋಲ ಕಲ್ಪಿತ. ಆ ಸಂದರ್ಭದಲ್ಲಿ ವಿದೇಶಿ ಧರ್ಮಗಳು ಹುಟ್ಟಿರಲೇ ಇಲ್ಲ. ಯಕ್ಷಗಾನ ಕಲಾವಿದರು ಶಬರಿ ಮಲೆ ಪ್ರಸಂಗ ಆಡಿಸುವ ಸಂದರ್ಭ ಇತಿಹಾಸವನ್ನು ಅರಿತಿರಬೇಕು ಎಂದು ಕಿವಿ ಮಾತು ಹೇಳಿದ್ದರು.