( ಅ.26 ರ ಶನಿವಾರ ಕೆರೆಮನೆ ಮಹಾಬಲ ಹೆಗಡೆಯವರ 15 ನೆಯ ಮತ್ತು ರಾಮ ಹೆಗಡೆಯವರ ಐದನೆಯ ಸಂಸ್ಮರಣಾ ಕಾರ್ಯಕ್ರಮ ಗುಣವಂತೆಯಲ್ಲಿ ಜರುಗುತ್ತಿದೆ. ತನ್ನಿಮಿತ್ತ ಈ ನನ್ನ ನೆನಪಿನ ಬರೆಹ )

ಕೆರೆಮನೆ ಮಹಾಬಲ ಹೆಗಡೆಯವರು ನನ್ನ ಬಂಧುಗಳೂ ಹೌದು, ನನ್ನ ಗುರುವೂ ಹೌದು. ಬಾಲ್ಯದಿಂದಲೇ ನನಗೆ ಅವರ ಹತ್ತಿರದ ಒಡನಾಟ ಸಿಕ್ಕಿತು. ಮುಂದೆ ಅದು ಬೇರೆ ಬೇರೆ ರೀತಿಯಲ್ಲಿ ಬೆಳೆಯುತ್ತಹೋಯಿತು. ಅವರ ಪಾತ್ರಗಳನ್ನು ನೋಡುತ್ತ, ಅವರಿಂದ‌ ಹಾಡಲು ಕಲಿಯುತ್ತ, ಕ್ರಮೇಣ ಅವರೊಡನೆ ಯಕ್ಷಗಾನದ ಮತ್ತು ಸಾಹಿತ್ಯಿಕ ವಿಚಾರಗಳ ಕುರಿತು ತಿಳಿದುಕೊಳ್ಳುತ್ತ, ಚರ್ಚಿಸುತ್ತ, ಆ ಕುರಿತಾದ ಪುಸ್ತಕಗಳನ್ನು ಓದುತ್ತ ಬೆಳೆದ ನನಗೆ ಅವರು ಮಾರ್ಗದರ್ಶಕರೆನಿಸಿದರು.
ಮಹಾಬಲರ ಕುರಿತು ನನ್ನಿಂದ ನಾಲ್ಕು ಕೃತಿಗಳು ರಚನೆಯಾಗಿವೆ. ಅವರ ಐವತ್ತನೆಯ ವರ್ಷದ ಸಂದರ್ಭದಲ್ಲಿ ನನ್ನ ಸಂಪಾದಕತ್ವದಲ್ಲಿ ” ಯಕ್ಷಗಾನದ ಮಹಾಬಲ” , ನಂತರ ಮೈಸೂರು ಮುಕ್ತ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ” ಕೆರೆಮನೆ ಮಹಾಬಲ ಹೆಗಡೆ” , ಬೆಂಗಳೂರಿನ ಸುಮುಖ ಪ್ರಕಾಶನದಿಂದ ” ಮಹಾ ಬಲ” ಹಾಗೂ ” ಯಕ್ಷಗಾನ ರಂಗಪ್ರಜ್ಞೆ”( ಮಹಾಬಲರ ರಂಗಚಿಂತನೆಗಳು).
ಮಹಾಬಲರ ನೂರಾರು ಪಾತ್ರಗಳನ್ನು ನೋಡುವ ಅವಕಾಶ ನನಗೆ ದೊರಕಿದೆಯಲ್ಲದೆ ಅವರೊಡನೆ ಆರು ದಶಕಗಳಿಗೂ ಹೆಚ್ಚು ಕಾಲ ವೈಚಾರಿಕ ಒಡನಾಟ ದೊರಕಿದ್ದು ವಿಶೇಷ. ನಾನು ಅವರಿಂದ ತಿಳಿದುಕೊಂಡಿದ್ದು ಬಹಳ. ಯಕ್ಷಗಾನ ಕಲೆ, ಸಂಗೀತ, ಸಾಹಿತ್ಯ ಮೊದಲಾದವುಗಳಿಗೆ ಸಂಬಂಧಿಸಿ ನನ್ನಲ್ಲಿ ಅಭಿರುಚಿ ಆಸಕ್ತಿ ಬೆಳೆಸಿದವರು. ಅಂತಹ ಅಧ್ಯಯನಶೀಲ ಕಲಾವಿದರು ತೀರಾ ವಿರಳ.
ಯಕ್ಷಗಾನದ ಮಹಾ-ಬಲರ ಪಾತ್ರ ಪ್ರಪಂಚ

ಕೆರೆಮನೆ ಮಹಾಬಲ ಹೆಗಡೆಯವರ ಯಕ್ಷಗಾನದ ಪಾತ್ರ ಪ್ರಪಂಚ ಬಹಳ ದೊಡ್ಡದು, ವೈವಿಧ್ಯಮಯವಾದದ್ದು. ಬಹಳಷ್ಟು ಪ್ರಸಂಗಗಳಲ್ಲಿ ಅವರು ಒಂದೇ ಪ್ರಸಂಗದ ಎಲ್ಲ ಪಾತ್ರಗಳನ್ನೂ ಮಾಡಿದ್ದುಂಟು. ಪ್ರಮುಖ ಪಾತ್ರಗಳಲ್ಲಷ್ಟೇ ಅಲ್ಲ, ವಿದೂಷಕ, ಸೇವಕನ‌ಪಾತ್ರಗಳಲ್ಲೂ ಅವರು ಕಾಣಿಸಿಕೊಂಡಿದ್ದುಂಟು. ಕೆಲ ವರ್ಷ ಸ್ತ್ರೀ ಪಾತ್ರಗಳಲ್ಲೂ ಮಿಂಚಿದ್ದಿದೆ. ತಮ್ಮ ಪಾಲಿಗೆ ಬರುವ ಯಾವ ಪಾತ್ರವನ್ನೂ ಸಮರ್ಥವಾಗಿ ನಿರ್ವಹಿಸುವ ಅರ್ಹತೆಯಂತೂ ಅವರಿಗಿದ್ದೇಇತ್ತು. ಹದಿನಾಲ್ಕನೇ ವಯಸ್ಸಿನಲ್ಲಿ ಹಾಕಿದ ವೃಷಸೇನನ ಪಾತ್ರದಿಂದ ಅರವತ್ತೆಪ್ಪತ್ತರ ಆಸುಪಾಸಿನಲ್ಲಿ ನಿರ್ವಹಿಸಿದ ಪರ್ವದ ಭೀಷ್ಮನತನಕವೂ ಪೌರಾಣಿಕ ಲೋಕದ ನೂರಾರು ಪಾತ್ರಗಳನ್ನವರು ಪ್ರವೇಶಿಸಿ ಹೊರಬಂದಿದ್ದಾರೆ. ಭಕ್ತಿ, ಕರುಣೆ, ವೀರ, ರೌದ್ರ, ಶೃಂಗಾರ ರಸಗಳಲ್ಲಿ ಮಿಂದೆದ್ದಿದ್ದಾರೆ.
ರುಕ್ಮಾಂಗದನ ವೈರಾಗ್ಯ, ಸುಧನ್ವನ ಭಕ್ತಿ, ಹರಿಶ್ಚಂದ್ರನ ಶೋಕ, ದುಷ್ಟಬುದ್ಧಿಯ ದೌಷ್ಟ್ಯ, ಭೀಷ್ಮನ ಧೀರೋದಾತ್ತತೆ, ಕೌರವನ ಛಲದಂಕಮಲ್ಲತನ, ಅಶ್ವತ್ಥಾಮನ ರೌದ್ರಾವೇಶ, ವಿಶ್ವಾಮಿತ್ರನ ಪ್ರಚಂಡತನ, ಕೃಷ್ಣನ ಶೃಂಗಾರ, ಜಮದಗ್ನಿಯ ಉನ್ಮತ್ತತೆ, ಕಂಸನ ಕ್ರೌರ್ಯ, ಬಲರಾಮನ ಬೋಳೇತನ, ವಲಲನ ಅಸಹಾಯಕತೆ, ಶ್ರೀ ರಾಮನ ಉದಾತ್ತತೆ, ಕೀಚಕನ ರಸಿಕತೆ, ವಿದ್ಯುಜ್ಜಿಹ್ವನ ಹಾಸ್ಯ ಹೀಗೆ ಅವರು ನವರಸ ಪ್ರವೀಣರಾಗಿ ರಸಜ್ಞರ ಪ್ರಶಂಸೆಗೆ ಪಾತ್ರರಾದವರು. ರಸಿಕರೆದೆಯಲ್ಲಿ ಉಳಿದವರು. ಆ ಪಾತ್ರಗಳಿಗೇ ಸೊಗಸು, ಅರ್ಥ ತಂದುಕೊಟ್ಟವರು. ತಾಳಮದ್ದಳೆ ಅರ್ಥಗಾರಿಕೆಯ ಸುಸಂಬದ್ಧತೆಯನ್ನು ರಂಗದ ಪಾತ್ರಗಳಲ್ಲಿ ಕಡೆದು ನಿಲ್ಲಿಸಿದವರು.
ಒಮ್ಮೆ ಅವರು ಅಶ್ವತ್ಥಾಮ ನ ಪಾತ್ರ ನಿರ್ವಹಿಸಿ ಬಣ್ಣದ ಚೌಕಿಗೆ ಮರಳಿದಾಗ ಹಿರಿಯ ಕಲಾವಿದ ಶಂಕರನಾರಾಯಣ ಸಾಮಗರು ಅವರನ್ನು ಅಪ್ಪಿಕೊಂಡು ಅತ್ತಿದ್ದರಂತೆ. ಒಬ್ಬ ಕಲಾವಿದ ಇನ್ನೊಬ್ಬ ಕಲಾವಿದನಿಂದ ಈ ಬಗೆಯ ಮೆಚ್ಚುಗೆಯನ್ನು ಪಡೆಯುವದು ಬಹಳ ವಿರಳ. ಕಲಾವಿದ ಯಾವುದೇ ಪಾತ್ರದ ಪರಮಾವಧಿ ಸಾಧ್ಯತೆಗಳನ್ನು ಕಂಡಾಗ ಮಾತ್ರ ಇಂತಹ ಮೆಚ್ಚುಗೆ ಹೊರಬರಬಲ್ಲುದು.
ಕೆಲವರಿಗೆ ಕೆಲವು ರಸಗಳಷ್ಟೇ ಸಿದ್ಧಿಸಬಲ್ಲವು. ಕೆಲವು ಬಗೆಯ ಪಾತ್ರಗಳಷ್ಟೇ ಅವರಿಗೆ ಹೊಂದಾಣಿಕೆ ಯಾಗಬಲ್ಲವು. ಮಹಾಬಲರು ದೇಹದ ಎತ್ತರದಲ್ಲಿ ಕೆಲ ಪಾತ್ರಗಳಿಗೆ ಕಡಿಮೆ ಎನಿಸಿದರೂ ತಾವು ವಹಿಸಿದ ಪಾತ್ರದ ಎತ್ತರವನ್ನು ಮಾತ್ರ ಎಂದೂ ಕಡಿಮೆ ಮಾಡಿದವರಲ್ಲ. ಏಕೆಂದರೆ ಪ್ರತಿಯೊಂದು ಪಾತ್ರದ ಕುರಿತಾಗಿಯೂ ಅಧ್ಯಯನ, ಮನನ, ಚಿಂತನ ನಡೆಸಿ ಆ ಪಾತ್ರ ಹೀಗಿರಬೇಕು, ಹೀಗಿರಬಾರದು ಎಂಬ ಸ್ಪಷ್ಟ ಕಲ್ಪನೆ ಮಾಡಿಕೊಂಡ ಹೊರತು ಅವರು ರಂಗಕ್ಕಿಳಿಯುತ್ತಿರಲಿಲ್ಲ.
ಶಿವರಾಮ ಹೆಗಡೆಯವರು ರಂಗದಲ್ಲಿರುವತನಕ ಮಹಾಬಲರಿಗೆ ನಾಯಕ ಪಾತ್ರಕ್ಕೆ ಬಡ್ತಿ ದೊರಕುವದು ಸಾಧ್ಯವಿರಲಿಲ್ಲ. ಆದರೆ ಸಹ ಪಾತ್ರಗಳನ್ನು ನಿರ್ವಹಿಸುತ್ತಲೇ ಪ್ರೇಕ್ಷಕರು ತಮ್ಮನ್ನು ಗುರುತಿಸುವಂತೆ ಮಾಡಿಕೊಂಡವರು. ಅವರ ಕೃಷ್ಣ, ಸುಧನ್ವ, ವತ್ಸಾಖ್ಯ ಮೊದಲಾದ ಪಾತ್ರಗಳು ಅದಾಗಲೇ ಸಾಕಷ್ಟು ಜನಮೆಚ್ಚುಗೆ ಗಳಿಸಿದ್ದವು. ಆದರೆ ಅವರಿಗೆ ಮೊಟ್ಟಮೊದಲು ಭಾರೀ ಹೆಸರು ತಂದುಕೊಟ್ಟ ಪಾತ್ರ ಅಶ್ವತ್ಥಾಮ. . ಇಡಗುಂಜಿ ಮೇಳದಿಂದ ಅಂದು ಪ್ರೇಕ್ಷಕರು ಬಹಳಷ್ಟು ಬಯಸುತ್ತಿದ್ದ ಒಂದು ಪ್ರಸಂಗ ” ಗದಾಯುದ್ಧ”. ಆ ಕಾಲಘಟ್ಟದಲ್ಲಿ ಗದಾಯುದ್ಧದ ಸಾವಿರಾರು ಪ್ರದರ್ಶನಗಳು ನಡೆದವು. ಯಾವುದೇ ಒಂದು ಪ್ರಸಂಗ ಯಶಸ್ವಿಯಾಗಲು ಅದರೊಳಗಿನ ಪಾತ್ರಗಳ ಮತ್ತು ಪಾತ್ರಧಾರಿಗಳ ಹೊಂದಾಣಿಕೆ ಸಹ ಅಷ್ಟೇ ಮಹತ್ವದ್ದು. ಶಿವರಾಮ ಹೆಗಡೆಯವರ ಕೌರವ, ಮೂರೂರು ದೇವರು ಹೆಗಡೆಯವರ ಭೀಮ, ಮಹಾಬಲರ ಅಶ್ವತ್ಥಾಮ, ಆ್ಯಕ್ಟರ್ ಜೋಶಿಯವರ ಧರ್ಮರಾಯ ಆ ಪ್ರಸಂಗದ ಅಭೂತಪೂರ್ವ ಯಶಸ್ಸಿಗೆ ಕಾರಣವಾದದ್ದನ್ನು ಅಂದು ಆಟ ನೋಡಿದವರೆಲ್ಲ ಬಲ್ಲರು.

*ಬಾಲ್ಯದ ಬದುಕಿನತ್ತ ಹಿನ್ನೋಟ
*****************************
ನಾನು ಮಹಾಬಲ ಹೆಗಡೆಯವರ ಕುರಿತು ಪುಸ್ತಕ ಬರೆಯುವ ಸಂದರ್ಭದಲ್ಲಿ ಅವರಿಗೆ ಒಂದು ಪ್ರಶ್ನೆ ಕೇಳಿದ್ದೆ-” ನಿಮ್ಮ ಬಾಲ್ಯದ ಬದುಕಿನ ಕುರಿತು ಸ್ಪಲ್ಪ ಹೇಳುತ್ತೀರಾ?”
ಅಷ್ಟೇ ವೇಗದಲ್ಲಿ ಉತ್ತರವೂ ಹೊರಬಂದಿತ್ತು- ” ಬದುಕು ಅನ್ನೋದು ಎಲ್ಲಿತ್ತು‌ಆಗ?”
ಏನೆಲ್ಲ ಅಡಗಿತ್ತು ಆ ಉತ್ತರದಲ್ಲಿ!.
ಅವರ ಬಾಲ್ಯಕ್ಕೊಂದು ನಿರ್ದಿಷ್ಟ ಸ್ವರೂಪವೇ ಇರಲಿಲ್ಲ. ತಮಗರಿಯದಂತೆಯೇ ಅವರು ಬಾಲ್ಯದ ಹತ್ತು ಹನ್ನೆರಡು ವರ್ಷ ಕಳೆದುಕೊಂಡುಬಿಟ್ಟಿದ್ದರು. ಹುಟ್ಟಿದ ಮೂರು ವರ್ಷಕ್ಕೇ ತಾಯಿಯನ್ನು ಕಳೆದುಕೊಂಡಿದ್ದರು. ಅಜ್ಜ ಮಹಾಬಲ ಆಗಲೇ ದೃಷ್ಟಿ ಕಳೆದುಕೊಂಡ ವೃದ್ದ. ತಂದೆ ರಾಮಪ್ಪ ಹೆಗಡೆ ಯಾವುದನ್ನೂ ಹಚ್ಚಿಕೊಳ್ಳದ, ಯಾರ ಕಡೆಗೂ ಗಮನ ಕೊಡದ ನಿರ್ಲಿಪ್ತ ಮನಸ್ಥಿತಿಯವರು. ಕಣ್ಣಿ ಬಿಚ್ಚಿದ ಎಳೆಗರುವಿನಂತೆ ಈ ಬಾಲ- ಮಹಾಬಲ ಜಿಗಿದಾಡುತ್ತಿದ್ದ. ಕೆಲವೊಮ್ಮೆ ಹೊಟ್ಟೆ ತುಂಬ ಊಟವೂ ಇಲ್ಲದ ಪರಿಸ್ಥಿತಿ. ಒಮ್ಮೆಯಂತೂ ಒಂದು ತಿಂಗಳು ಬರೀ ಆಕಳ ಹಾಲು ಕುಡಿದು ದಿನ ಕಳೆದದ್ದೂ ಇತ್ತು. ಅಪ್ಪ‌ ಮೈತುಂಬ ಸಾಲಸೋಲ ಮಾಡಿಕೊಂಡು ಹಾಯಾಗಿದ್ದ.
ಆದರೂ ಹೇಗೋ ಗುಣವಂತೆಯಲ್ಲಿ ಆಗ ಇದ್ದ ಕನ್ನಡ ಶಾಲೆ ಸೇರಿದರು. ಹೇಗೋ ನಾಲ್ಕನೆಯ ಇಯತ್ತೆತನಕ ಬಂದಿದ್ದಾಯಿತು. ಆದರೆ ಮುಂದೆ ಐದನೇ ಇಯತ್ತೆ ಪಾಸಾದಾಗ ಸರ್ಟಿಫಿಕೇಟ್ ತೆಗೆದುಕೊಳ್ಳಲು ಹದಿನಾಲ್ಕಾಣೆ ಕೊಡಬೇಕಿತ್ತು. ಆಷ್ಟು ಹಣ ಇರಲಿಲ್ಲ. ಶಾಲೆ ಬಿಡಬೇಕಾಯಿತು. ಆಮೇಲೆ ಹೊರಗಿನಿಂದ ಮುಲ್ಕಿ ಪರೀಕ್ಷೆಗೆ ಕುಂತು ಪಾಸಾದರು.
ಹದಿನಾಲ್ಕನೇ ವರ್ಷದಲ್ಲಿ ಚಿಕ್ಕಪ್ಪ ರಂಗಕ್ಕೆ ತರುವತನಕವೂ ಇದೇ ರೀತಿಯ‌ ಅನಿಶ್ಚಿತತೆಯ ಬದುಕು. ಅದಕ್ಕೇ ಅವರು ಕೇಳಿದ್ದು-” ಬದುಕು ಅನ್ನೋದು ಎಲ್ಲಿತ್ತು ಆಗ?”. ಇದಕ್ಕೆ ಉತ್ತರ‌ ಯಾರಲ್ಲಿದೆ?

ಹಾಗೇ ತಮಾಷೆಗೆ ಒಂದು ವಿಷಯ ಹೇಳುವದಾದರೆ ಇಂತಹ ಅನಿಶ್ಚಿತ ಸನ್ನಿವೇಶದಲ್ಲಿರುವ ವ್ಯಕ್ತಿ ಎಂತಹ ಕನಸನ್ನೂ ಕಾಣಬಹುದು. ಹಾಗೆಯೇ ಮಹಾಬಲರಿಗೆ ತಾನೂ ಆ ಊರಿಗೆ ಬರುತ್ತಿದ್ದ ಸಿಪಿಸಿ ಬಸ್ಸಿನ ಡ್ರಾಯ್ವರ್ ತಿಮ್ಮಣ್ಣಿಯಂತಾಗಬೇಕೆಂಬ ಆಸೆಯೂ ಬಂದಿದ್ದುಂಟಂತೆ. (ಅವರ ಚಿಕ್ಕಪ್ಪ ಶಿವರಾಮ ಹೆಗಡೆಯವರೂ ಡ್ರಾಯ್ವರ್ ಆಗಿ ಕೆಲಸ ಮಾಡಿದವರೇ).
*
ಕೆರೆಮನೆ ಶಿವರಾಮ ಹೆಗಡೆಯವರ ಬಗ್ಗೆ ಮಹಾಬಲರಿಗೆ ಯಾವತ್ತೂ ಭಯ ಭಕ್ತಿ, ಗೌರವ , ಕೃತಜ್ಞತೆ ಎಲ್ಲವೂ ಇದ್ದವು. ತಮಗೊಂದು ಬದುಕು ಕೊಟ್ಟವರು ಎಂಬ ಕೃತಜ್ಞತಾ ಭಾವನೆ ಇಟ್ಟುಕೊಂಡಿದ್ದರು. ಅವರು ಹೇಳುತ್ತಾರೆ- ” ನಾನು ಹೆದರುವದಿದ್ದರೆ ಇಬ್ಬರು ” ಶಿವರಾಮ” ರಿಗೆ. ಒಬ್ಬರು ಶಿವರಾಮ ಹೆಗಡೆ, ಇನ್ನೊಬ್ಬರು ಶಿವರಾಮ ಕಾರಂತರು.”
‌ ‌‌‌ ಕಾರಂತರು ಹಾಗೆಲ್ಲ ಸುಖಾಸುಮ್ಮನೇ ಯಾರನ್ನೂ ಹೊಗಳುವವರಲ್ಲ. ಅವರನ್ನು ಬಲ್ಲವರಿಗೆಲ್ಲ ಇದು ಗೊತ್ತು. ಅಂತಹ ಕಾರಂತರು ಮಹಾಬಲರ ಬಗ್ಗೆ ಹೇಳುತ್ತಾರೆ-
” ಯಕ್ಷಗಾನ ಸಂಗೀತವನ್ನು ರಾಗ ಜ್ಞಾನ ಸಹಿತವಾಗಿ, ಕಿವಿಗೆ ಹಿತವಾಗಿ ಹಾಡಬಲ್ಲ ನರ್ತಕರು ಇಂದು ಯಾರಾದರೂ ಇದ್ದರೆ ಅದು ಅವರೇ ( ಮಹಾಬಲರೆ).
ಇದು ನಮ್ಮ ಶೃಂಗಾರ ಮಂಟಪ ಹೊರತಂದ. ” ಯಕ್ಷಗಾನದ ಮಹಾಬಲ” ಕೃತಿಗಾಗಿ ಕಾರಂತರು ನೀಡಿದ ಸಂದೇಶ.
ಮಹಾಬಲರನ್ನು ಯಕ್ಷರಂಗದಲ್ಲಿ ಬೆಳೆಸಿದವರೇ ಶಿವರಾಮ ಹೆಗಡೆಯವರು. ಅವರು ಈ ಮಹಾಬಲ ಮಾಣಿಯ ಬಗ್ಗೆ ಪ್ರೀತಿಯನ್ನಷ್ಟೇ ಅಲ್ಲ ಅಭಿಮಾನವನ್ನೂ ಹೊಂದಿದ್ದರು. ಅವರು ತಮ್ಮ ನೆನಪಿನ ರಂಗಸ್ಥಳ ಎಂಬ ಆತ್ಮಕಥನದಲ್ಲಿ ಮಹಾಬಲರ ಬಗ್ಗೆ ಹೇಳುತ್ತಾರೆ-
” ಆಗ ಮೇಳಕ್ಕೆ ಇವನನ್ನು ಹಾಕಿಕೊಂಡು ತಿರುಗಿದೆ. ಸಣ್ಣಪುಟ್ಟ ವೇಷ ಕೊಟ್ಟೆ. ಮಾಡಿದ. ಕೊನೆಗೆ ಒಂದು ದಾರಿ ಎನ್ನುವದನ್ನು ಕಂಡುಕೊಂಡ ತಕ್ಷಣ ಆತ ಸ್ವಪ್ರಯತ್ನಕ್ಕೆ ತೊಡಗಿದ. ತುಂಬಾ ಓದಿದ. ಸಾಕಷ್ಟು ಪ್ರಯತ್ನ ಪಟ್ಟ. ಪ್ರತಿಫಲವನ್ನೂ ಪಡೆದ. ಅದರಲ್ಲೆಲ್ಲ ಅವನ ಸ್ವಂತ ಪ್ರಯತ್ನವೇ ಬಹಳ. ಹಾಗೆ ಸಾವಿರಕೊ್ಕೊಬ್ಬ ಕಲಾವಿದನೂ ಈಗ ನಮಗೆ ಕಾಣಲಾರ. ಅಂತಹ ಸ್ವಪ್ರಯತ್ನದ ಕಲಾವಿದರು ಯಾರು? ಆತ ಶಾಲೆಗೆ ಹೋದದ್ದು ಕಡಿಮೆಯಾದರೂ ಓದಿದ್ದು ತುಂಬ. ಪ್ರಯೋಗ ಮಾಡಿ ಪ್ರಯೋಜನ ಪಡೆದುಕೊಂಡ. ”
ಇದಕ್ಕಿಂತ ಹೆಚ್ಚಿನದೇನು ಬೇಕು ಸರ್ಟಿಫಿಕೇಟ್? ಅದೂ ಶಿವರಾಮ ಹೆಗಡೆಯವರಂತಹ ಯಕ್ಷಕಲಾ ದಿಗ್ಗಜರಿಂದ ದೊರಕಿದ ಪ್ರಶಂಸೆ!

ಲಕ್ಷ್ಮೀನಾರಾಯಣ ಶಾಸ್ತ್ರಿ, ನಾಜಗಾರ