ಬೆಳಗಾವಿ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಸೂಚನೆ ನಡುವೆಯೂ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕಾರ್ಯಕರ್ತರು ಹಾಗೂ ನಾಯಕರು ಪ್ರತಿವರ್ಷದಂತೆ ಈ ವರ್ಷವೂ ಕರಾಳ ದಿನವನ್ನು ಆಚರಿಸಿದ್ದಾರೆ. ಶುಕ್ರವಾರದಂದು ಬೆಳಗಾವಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಎಂಇಎಸ್ ನಾಯಕರು ಕರ್ನಾಟಕ ಸರಕಾರದ ವಿರುದ್ಧ ಎಂದಿನಂತೆ ಘೋಷಣೆ ಕೂಗಿದರು. ಮಾಜಿ ಶಾಸಕ ಮನೋಹರ ಕಿಣೇಕರ ಅವರ ನೇತೃತ್ವದಲ್ಲಿ ನೂರಾರು ಎಂಇಎಸ್ ನಾಯಕರು ಕರಾಳ ದಿನಾಚರಣೆಯಲ್ಲಿ ಭಾಗವಹಿಸಿ ಗಮನ ಸೆಳೆದರು.

ಈ ಹಿಂದೆ ಕನ್ನಡಿಗರ ಜೊತೆ ಸೇರಿ ಶ್ರೀರಾಮ ಸೇನೆಯನ್ನು ಹುಟ್ಟು ಹಾಕಿದ್ದ ರಮಾಕಾಂತ ಕೊಂಡುಸ್ಕರ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಒಂದು ಕಾಲದಲ್ಲಿ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದ ರಮಾಕಾಂತ ಕೊಂಡುಸ್ಕರ್ ಸಹ ಇದೀಗ ಕರಾಳ ದಿನಾಚರಣೆಯಲ್ಲಿ ಭಾಗವಹಿಸುವ ಮೂಲಕ ಎಂ ಎಸ್ ಗೆ ಬಲವಾದ ಬೆಂಬಲ ನೀಡಿದ್ದಾರೆ.

ಜಿಲ್ಲಾಡಳಿತ ಮೊದಲಿನಿಂದಲೂ ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳುತ್ತ ಬಂದಿತ್ತು. ಆದರೆ, ರಾಜ್ಯೋತ್ಸವದಂದು ಎಂಇಎಸ್ ನಾಯಕರು ಕರಾಳ ದಿನಾಚರಣೆ ಆಚರಿಸಿದ್ದರೂ ಯಾವುದೇ ಕ್ರಮ ಜರುಗಿಸದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಯಿತು.

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪರೋಕ್ಷವಾಗಿ ಎಂಇಎಸ್ ನಾಯಕರ ಪ್ರತಿಭಟನೆಗೆ ರಕ್ಷಣೆ ನೀಡಿರುವುದು ಚರ್ಚೆಗೆ ಗ್ರಾಸವಾಯಿತು. ಕನ್ನಡಿಗರ ತೀವ್ರ ವಿರೋಧದ ನಡುವೆಯೂ ಕನ್ನಡ ನಾಡಿನಲ್ಲೇ ರಾಜರೋಷವಾಗಿ ಕರಾಳ ದಿನ ಆಚರಣೆ ಮಾಡುವ ಎಂಇಎಸ್ ನಾಯಕರು ಪ್ರತಿ ವರ್ಷದಂತೆ ಕಪ್ಪು ಬಟ್ಟೆ ಧರಿಸಿ ಬೆಳಗಾವಿ, ಖಾನಾಪುರ, ನಿಪ್ಪಾಣಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು ಎಂದು ಘಂಟಾಘೋಷವಾಗಿ ಕೂಗ ತೊಡಗಿದರು.