ಉಡುಪಿ/ಮಂಗಳೂರು : ಮೆಟ್ರೋ ಸಾರಿಗೆ ಸದ್ಯ ಪ್ರಯಾಣಿಕರ ಮೆಚ್ಚಿನ ಆಯ್ಕೆಯಾಗಿದೆ. ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಬಳಸುವ ಬಹುತೇಕರು ನಮ್ಮ ಮೆಟ್ರೋ ಸಂಚಾರವನ್ನೇ ಮೊದಲ ಆಯ್ಕೆಯಾಗಿ ತೆಗೆದುಕೊಳ್ಳುತ್ತಾರೆ. ಟ್ರಾಫಿಕ್‌ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಹಾಗೂ ಸಮಯ ಉಳಿಸಲು ಪ್ರತಿನಿತ್ಯ ಬೆಂಗಳೂರಿನ ಲಕ್ಷಾಂತರ ಜನರು ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮೆಟ್ರೋ ಸಾರಿಗೆ ಯಶಸ್ವಿಯಾಗುತ್ತಿದ್ದಂತೆ ಇದೀಗ ಕರ್ನಾಟಕ ರಾಜ್ಯದ ಮತ್ತೊಂದು ಭಾಗದಲ್ಲಿ ಮೆಟ್ರೋ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

ಬೆಂಗಳೂರಿನಿಂದ ತುಮಕೂರಿಗೆ ನಮ್ಮ ಮೆಟ್ರೋ ವಿಸ್ತಾರ ಪ್ರಸ್ತಾವನೆಯಲ್ಲಿ ಇರುವಾಗಲೇ ಇದೀಗ ಕರಾವಳಿ ಭಾಗದಲ್ಲಿ ಮೆಟ್ರೋ ಸಂಚಾರ ಆರಂಭವಾಗುವ ಸೂಚನೆ ಸಿಗುತ್ತಿದೆ. ಮಂಗಳೂರು- ಉಡುಪಿ ನಗರಗಳಲ್ಲಿ ಮೆಟ್ರೋ ರೈಲು ಯೋಜನೆಗೆ ರಾಜ್ಯ ಸರ್ಕಾರ ಅತ್ಯಾಸಕ್ತಿ ವಹಿಸಿದೆ.

ಮಂಗಳೂರು- ಮಣಿಪಾಲ ಹಾಗೂ ಉಡುಪಿ ನಗರಗಳ ಮಧ್ಯೆ ಇಂಟರ್‌ ಸಿಟಿ ಮೆಟ್ರೋ ರೈಲು ಸಂಪರ್ಕ ಕಾರಿಡಾರ್ ಹಂತ-1ರ ಸರಿ ಸುಮಾರು 60 ಕಿ.ಮೀ. ಉದ್ದದ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲು ತಾಂತ್ರಿಕ ಹಾಗೂ ಆರ್ಥಿಕ ಸಂಕ್ಷಿಪ್ತ ಟಿಪ್ಪಣಿ ಹಾಗೂ ವಿಸ್ತೃತ ಯೋಜನಾ ವರದಿಯನ್ನು ರೂಪಿಸುವಂತೆ ರಾಜ್ಯ ಸರಕಾರ ಬೆಂಗಳೂರು ಮೆಟ್ರೋ ರೈಲು ನಿಗಮ(BMRCL)ಗೆ ಸೂಚಿಸಿದೆ. ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿದೆ.

ಇನ್ನು ಮಂಗಳೂರು- ಉಡುಪಿ ನಗರಗಳಲ್ಲಿ ಮೆಟ್ರೋ ರೈಲು ಯೋಜನೆ ಕೈಗೊಳ್ಳುವ ಬಗ್ಗೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮೋಹನ್ ದಾಸ್ ಹೆಗ್ಡೆ ಅವರು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಪತ್ರ ಬರೆದಿದ್ದರು. ಇದೀಗ ಈ ಪ್ರಸ್ತಾವನೆಯ ಬಗ್ಗೆ ಚರ್ಚೆ ಆರಂಭವಾಗಿದ್ದು, ಶೀಘ್ರದಲ್ಲೇ ಮಂಗಳೂರು- ಮಣಿಪಾಲ ಹಾಗೂ ಉಡುಪಿ ನಗರಗಳ ಮಧ್ಯೆ ಇಂಟರ್‌ ಸಿಟಿ ಮೆಟ್ರೋ ರೈಲು ಸಂಪರ್ಕ ಕಾರಿಡಾರ್ ಹಂತ-1ರ ಯೋಜನೆ ಘೋಷಣೆಯಾಗುವ ಸಾಧ್ಯತೆ ಇದೆ.

ಮಂಗಳೂರು- ಉಡುಪಿ ನಡುವೆ ಮೆಟ್ರೊ: ಕಾರ್ಯಸಾಧ್ಯತೆ ವರದಿಗೆ ಸೂಚನೆ

ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೂಚನೆಯಂತೆ ಮಂಗಳೂರು- ಉಡುಪಿ ನಡುವೆ ಮೆಟ್ರೊ ರೈಲು ಯೋಜನೆ ಅನುಷ್ಠಾನ ಸಂಬಂಧ ಕಾರ್ಯಸಾಧ್ಯತೆ ವರದಿ ನೀಡುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶವು ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳಿಗೆ ಪತ್ರ ಬರೆದಿದೆ.

ಮಂಗಳೂರು- ಉಡುಪಿ ನಡುವೆ ಮೆಟ್ರೊ ರೈಲು ಯೋಜನೆಯು ಕರಾವಳಿಯ ಆರ್ಥಿಕತೆ ಬೆಳವಣಿಗೆ, ಜನರ ಜೀವನ ಮಟ್ಟದ ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಮಂಗಳೂರು ಮತ್ತು ಉಡುಪಿ ನಗರಗಳ ನಡುವೆ ಮೆಟ್ರೊ ರೈಲು ಯೋಜನೆ ಬಗ್ಗೆ ಕಾರ್ಯಸಾಧ್ಯತಾ ವರದಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.

ವಾಣಿಜ್ಯ ನಗರವಾಗಿರುವ ಮಂಗಳೂರಿನಲ್ಲಿ ಇರುವ ಸೌಲಭ್ಯ, ವೈದ್ಯಕೀಯ ಸೌಲಭ್ಯ, ಶಿಕ್ಷಣ ಸಂಸ್ಥೆಗಳು, ಕಡಲ ಕಿನಾರೆ ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಮೆಟ್ರೊ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಚಿವರು ತಿಳಿಸಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಈ ಪತ್ರವನ್ನು ಜಿಲ್ಲಾಧಿಕಾರಿ ಪರವಾಗಿ ನಗರಾಭಿವೃದ್ಧಿ ಕೋಶವು, ಎನ್‌ಎಂಪಿಎ, ಎಂಆರ್‌ಪಿಎಲ್‌, ನಗರ ಪೊಲೀಸ್ ಕಮಿಷನ‌ರ್, ಎನ್‌ಐಟಿಕೆ, ಡಿಎಫ್‌ಒ, ಸಾರಿಗೆ ಇಲಾಖೆ, ಮಂಗಳೂರು ವಿಶ್ವವಿದ್ಯಾನಿಲಯ, ಜಿಲ್ಲಾ ಕೈಗಾರಿಕಾ ಕೇಂದ್ರ, ಪ್ರವಾಸೋದ್ಯಮ ಇಲಾಖೆ, ಆರೋಗ್ಯ ಇಲಾಖೆ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯನಿರ್ವಹಣಾಧಿಕಾರಿ, ಕೆನರಾ ವಾಣಿಜ್ಯೋದ್ಯಮ ಕೈಗಾರಿಕಾ ಸಂಘಕ್ಕೆ ಕಳುಹಿಸಿದೆ.