ಬಸವನಬಾಗೇವಾಡಿ: ಗಾಣಿಗ ಸಮಾಜದವರು ಹೃದಯ ವೈಶಾಲ್ಯದವರಾಗಿದ್ದು ಯಾರಿಗೂ ಕೆಡುಕನ್ನು ಬಯಸುವವರಲ್ಲ. ಗಾಣಿಗ ಸಮಾಜದವರು ಸಾಮಾಜಿಕ ಹಾಗೂ ಶೈಕ್ಷಣಿಕ ಹಾಗೂ ರಾಜಕೀಯವಾಗಿ ಬೆಳವಣಿಗೆ ಹೊಂದಲು ಸಂಘಟಿಕರಾಗುವದು ಅವಶ್ಯಕ ಎಂದು ಮಾಜಿ ಸಚಿವ ಎಸ್‌. ಕೆ ಬೆಳ್ಳುಬ್ಬಿ ಹೇಳಿದರು.

ಪಟ್ಟಣದ ಯಲ್ಲಾಲಿಂಗೇಶ್ವರ ಮಠದಲ್ಲಿ ತಾಲೂಕು ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ತಾಲೂಕು ಗಾಣಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ನಗರ ಘಟಕ ಮತ್ತು ಮಹಿಳಾ ಘಟಕ ಇವರ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದವನ್ನ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸ ಓದಿದಾಗ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ ಎನ್ನುವ ಹಾಗೆ ಸಮಾಜದ ಪ್ರತಿಯೊಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು, ಪ್ರತಿ ಆರು ತಿಂಗಳಿಗೊಮ್ಮ ಇಂತಹ ಸಭೆ ಸಮಾರಂಭಗಳು ಜರುಗಬೇಕು. ಸಮಾಜ ಬಾಂಧವರು ಎಲ್ಲರು ಒಟ್ಟಾಗಿ ಸಮಾಜದ ಅಭಿವೃದ್ದಿಗೆ ಶ್ರಮಿಸುವಂತಾಗಬೇಕು. ಸಂಕ್ರಮಣದ ನಂತರ ಎಲ್ಲರು ಒಟ್ಟಾಗಿ ಬೃಹತ್ ಪ್ರಮಾಣದಲ್ಲಿ ಸಮಾವೇಶ ಹಮ್ಮಿಕೊಳ್ಳೋಣ ಎಂದರು.

ಕೊಲ್ದಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಮಾತನಾಡಿ, ಗಾಣಿಗ ಸಮಾಜ ದೇಶಕ್ಕೆ ಮೋದಿಯಂತಹ ಶ್ರೇಷ್ಠ ರಾಜಕಾರಣಿಯನ್ನು ನೀಡುವ ಮೂಲಕ ನಮ್ಮ ಸಮಾಜ ದೇಶಕ್ಕೆ ಅಪಾರ ಕೊಡುಗೆಯನ್ನು ನೀಡಿದೆ. ಪ್ರತಿಯೊಬ್ಬ ಗಾಣಿಗ ಸಮಾಜದವರು ಹೆಮ್ಮೆಯಿಂದ ಹೇಳಬೇಕು. ನಾನು ಗಾಣಿಗ ಸಮಾಜದವನು ಎಂದು, ದುಡಿಯುವ ಗುಣವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿಸುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎ೦ದರು.

ಅರಕೇರಿ ಸರಕಾರಿ ಪ್ರೌಡಶಾಲೆಯ ಶಿಕ್ಷಕ ಕಲ್ಲಪ್ಪ ಗಾಣಿಗೇರ ಉಪನ್ಯಾಸ ನೀಡಿದರು. ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಮುಖಂಡರಾದ ಎಸ್.ಎಂ.ಸಜ್ಜನ, ಕಲ್ಲು ಸೊನ್ನದ, ಸಿದ್ಧಲಿಂಗ ಚೌಧರಿ, ಚಂದ್ರಕಾಂತ ಡೊಣಗಿ, ಅರವಿಂದ ಸಜ್ಜನ, ಡಾ: ಆರ್.ಜಿ.ಡಫಳೆ, ಪರಶುರಾಮ ತುಪ್ಪದ, ಶ್ರೀಶೈಲ ಪರಮಗೊಂಡ, ಸುರೇಶ ಗೋಲಗೊಂಡ, ಡಾ.ಎಸ್.ಐ.ಹತ್ತರಕಿ, ಎಸ್.ಎಂ. ಬಿಸ್ಟಗೊಂಡ, ಪುಷ್ಪಾ ತುಪ್ಪದ ಸೇರಿದಂತೆ ಇತರರು ಉಪಸ್ಥಿತರಿದ್ದರು.