Join The Telegram | Join The WhatsApp |
ಬೆಂಗಳೂರು :
ರಾಜ್ಯದ ಎಲ್ಲ 16 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಗೆ ಮುಂದಾಗಿರುವ ರಾಜ್ಯ ಸರ್ಕಾರ ಐಐಟಿಗಳ ಮಾದರಿಯಲ್ಲಿ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಹತ್ತರಿಂದ ಹದಿನೈದು ಮಂದಿ ಸದಸ್ಯರ ಆಡಳಿತ ಮಂಡಳಿ (ಬಿಒಜಿ) ರಚಿಸಲು ಯೋಜಿಸಿದೆ. ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಕೈಗೊಂಡಿರುವ ಸುಧಾರಣಾ ಕ್ರಮಗಳ ಬಗ್ಗೆ ನಗರದ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಬುಧವಾರ ಆಯೋಜಿಸಿದ್ದ ಸಂವಾದದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾಹಿತಿ ನೀಡಿದರು.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ವ್ಯವಸ್ಥೆಯನ್ನು ಬಲಗೊಳಿಸಲು ಐಐಟಿ ಮಾದರಿಯಲ್ಲಿ ಆಡಳಿತ ಮಂಡಳಿ ರಚಿಸಿ ಕೈಗಾರಿಕೋದ್ಯಮಿಗಳು, ನೀತಿ ನಿರೂಪಕರು (ಪಾಲಿಸಿ ಮೇಕರ್ಸ್), ಶಿಕ್ಷಣ ತಜ್ಞರು, ಪ್ರಾಂಶುಪಾಲರು, ಪ್ರಾಧ್ಯಾಪಕರು ಸೇರಿದಂತೆ ವಿವಿಧ ಕ್ಷೇತ್ರದ ಪರಿಣತರನ್ನು ಸರ್ಕಾರವೇ ನಾಮನಿರ್ದೇಶನ ಮಾಡಲಿದೆ. ವಿದ್ಯಾರ್ಥಿಗಳು ವ್ಯಾಸಂಗದ ವೇಳೆಯೇ ಕೈಗಾರಿಕೆಗಳು, ತಾಂತ್ರಿಕ ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್ ಮಾಡುವುದು, ಓದು ಮುಗಿದ ಕೂಡಲೇ ಉದ್ಯೋಗಾವಕಾಶಗಳು ದೊರಕುವಂತಾಗಲು ಸಮಿತಿ ಸಹಕಾರಿಯಾಗಲಿದೆ ಎಂದರು.
ಶುಲ್ಕ ಪ್ರಕಟಣೆ ಕಡ್ಡಾಯ:
ರಾಜ್ಯದ ಎಲ್ಲ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಹಣಕಾಸು ಲೆಕ್ಕದ ಪಾರದರ್ಶಕತೆಗಾಗಿ ಪ್ರತಿ ವರ್ಷ ಮಕ್ಕಳ ದಾಖಲಾತಿ ಸಂಖ್ಯೆ, ಅವರಿಂದ ಪ್ರತಿ ಕೋರ್ಸುಗಳಿಗೆ ಪಡೆದ ಶುಲ್ಕದ ಮಾಹಿತಿ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನೂ ತಮ್ಮ ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಯಾವುದೇ ವಿವಿ, ಕಾಲೇಜುಗಳು ಡೊನೇಷನ್ ಪಡೆಯುವುದನ್ನು ನಿಷೇಧಿಸಲಾಗಿದೆ ಎಂದು ಎಂದು ಇದೇ ವೇಳೆ ಸಚಿವರು ತಿಳಿಸಿದರು.
ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕಾರ್ಯಚಟುವಟಿಕೆಗಳನ್ನು ಒಂದೇ ವೇದಿಕೆಯಲ್ಲಿ ತರಲು ಜಾರಿಗೆ ತರಲಾಗಿರುವ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯಲ್ಲಿ (ಯುಯುಸಿಎಂಎಸ್) ಕೆಲವು ಸಮಸ್ಯೆಗಳಿರುವುದು ನಿಜ ಅವುಗಳನ್ನು ಪರಿಹರಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು. ಸಂವಾದದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Join The Telegram | Join The WhatsApp |