ಬೆಳಗಾವಿ ಸುವರ್ಣಸೌಧ : ರಾಜ್ಯದಲ್ಲಿ ಹಿಮೋಫಿಲಿಯಾ ರೋಗವನ್ನು ಶೀಘ್ರದಲ್ಲಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಹಿಮೋಫಿಲಿಯಾ ಪತ್ತೆ ಹಚ್ಚುವ ಯಂತ್ರೋಪಕರಣಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಇಂದು ವಿಧಾನ ಪರಿಷತ್‍ನಲ್ಲಿ ತಿಳಿಸಿದರು.

ಸದಸ್ಯ ಎಸ್.ರುದ್ರೇಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ರಾಜ್ಯ ರಕ್ತಕೋಶ ಕಾರ್ಯಕ್ರಮದಡಿಯಲ್ಲಿ ಹಿಮೋಫಿಲಿಯಾ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ಮತ್ತು ಆರೈಕೆಯನ್ನು ಮಾಡಲಾಗುತ್ತಿದೆ. ಹಿಮೋಫಿಲಿಯಾ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಗಾಗಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಕೆಲವು ವೈದ್ಯಕೀಯ ಆಸ್ಪತ್ರೆಗಳಲ್ಲಿ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ 6 ರಿಂದ 8 ಹಾಸಿಗೆಗಳ ದಿನದ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಈ ಆರೈಕೆ ಕೇಂದ್ರಗಳಲ್ಲಿ ಇಬ್ಬರು ಶುಶ್ರೂಷಕಿಯರಿಗೆ ರಕ್ತಸಂಬಂಧಿತ ಖಾಯಿಲೆಗಳ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಯ ಆರಂಭಿಕ ತರಬೇತಿಯನ್ನು ನೀಡಲಾಗಿದೆ. ಈ ಕೇಂದ್ರಗಳಲ್ಲಿ ಉಚಿತ ಆಂಟಿ ಹಿಮೋಫಿಲಿಯಾ, ಉಚಿತ ರಕ್ತ ನೀಡುವುದು, ಉಚಿತ ಸಮಾಲೋಚನೆ, ಉಚಿತ ಫೀಜಿಯೊಥೆರಪಿ, Intra Cranial Bleeding ಹೆಚ್ಚಿನ ಚಿಕಿತ್ಸೆ, ಉಚಿತ Genetic Counseling , ಉಚಿತ ರೋಗಪತ್ತೆ (Screening)ಸೇವೆಗಳನ್ನು ಒದಗಿಸುತ್ತಿದ್ದು, ಒಬ್ಬ ಹಿಮೋಫಿಲಿಯಾ ರೋಗಿಗೆ ಪ್ರತಿ ವರ್ಷ ಅಂದಾಜು ರೂ. 3 ರಿಂದ 4 ಲಕ್ಷ ವೆಚ್ಚವಾಗಲಿದೆ ಎಂದರು.

ಹಿಮೋಫಿಲಿಯಾ ರೋಗಕ್ಕೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಪ್ರತಿ ವರ್ಷ ಜಿಲ್ಲಾವಾರು ಕಾರ್ಯಾಗಾರಗಳನ್ನು ಹಿಮೋಫಿಲಿಯಾ ಸೊಸೈಟಿ ಸಹಭಾಗಿತ್ವದೊಂದಿಗೆ ಆಯೋಜಿಸಿ ಮಾಹಿತಿಯನ್ನು ನೀಡಲಾಗುತ್ತಿದೆ. ಎಲ್ಲಾ ಹಿಮೋಫಿಲಿಯಾ ರೋಗಿಗಳಿಗೆ IEC ಚಟುವಟಿಕೆ ಮತ್ತು ತರಬೇತಿ (Rehabilitation Workshops) ಮುಖಾಂತರ ಹಿಮೋಫಿಲಿಯಾ ಆರೈಕೆ ಮತ್ತು ಚಿಕಿತ್ಸೆ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಪ್ರತಿ ವರ್ಷ 17ನೇ ಏಪ್ರಿಲ್ ರಂದು ವಿಶ್ವ ಹಿಮೋಫಿಲಿಯಾ ದಿನಾಚರಣೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ಆಚರಿಸಲಾಗುತ್ತಿದ್ದು, ರಾಜ್ಯದಲ್ಲಿ ಈವರೆಗೆ 2706 ಹಿಮೋಫಿಲಿಯಾ ರೋಗಿಗಳನ್ನು ಪತ್ತೆ ಹಚ್ಚಲಾಗಿದೆ. ಇವರಿಗೆ ಆಂಟಿ ಹಿಮೋಫಿಲಿಯಾ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಇದಕ್ಕಾಗಿ ವಾರ್ಷಿಕ 20 ರಿಂದ 30 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ ಎಂದರು.