ಬೆಳಗಾವಿ : ಬಸರೀಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎರಡು ಹೆಚ್ಚುವರಿ ಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಗ್ರಾಮಸ್ಥರ ಬೇಡಿಕೆಯಂತೆ ಶಾಲೆಗೆ ಹೆಚ್ಚುವರಿ ಕೊಠಡಿಗಳನ್ನು ಮಂಜೂರು ಮಾಡಿಸಿದ್ದೇನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದೆನ್ನುವ ಕಾರಣಕ್ಕೆ ಇಡೀ ಕ್ಷೇತ್ರದಲ್ಲಿ ಅಗತ್ಯವಿರುವ ಎಲ್ಲ ಮೂಲಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಯಾವುದೇ ಕಾರಣದಿಂದ ನಿಮ್ಮ ಮಕ್ಕಳು ವಿದ್ಯಾಭ್ಯಾಸ ಮೊಟಕುಗೊಳಿಸದಂತೆ ನೋಡಿಕೊಳ್ಳಿ ಎಂದು ಸಚಿವರು ಗ್ರಾಮಸ್ಥರಿಗೆ ಸಲಹೆ ನೀಡಿದರು.

ಇದೇ‌ ವೇಳೆ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿದ ಸಚಿವರು, ಗ್ರಾಮದ ವಿವಿಧ ಅಭಿವೃದ್ಧಿ ಕೆಲಸಗಳ ಕುರಿತು ಸಹ ಚರ್ಚೆ ನಡೆಸಿದರು. ನೀವು ನಮ್ಮ ಕ್ಷೇತ್ರದ ಶಾಸಕರಾದ ನಂತರವಷ್ಟೇ ನಮ್ಮ ಗ್ರಾಮಕ್ಕೆ ಅಭಿವೃದ್ಧಿ ಕೆಲಸಗಳು ಬರುತ್ತಿವೆ. ಹಿಂದೆ ಅಭಿವೃದ್ಧಿ ಎಂದರೇನೆಂದೇ ತಿಳಿದಿರಲಿಲ್ಲ. ಸದಾ ನಾವು ನಿಮ್ಮ ಬೆಂಬಲಕ್ಕಿರುತ್ತೇವೆ ಎಂದು ಗ್ರಾಮಸ್ಥರು ಸಚಿವರಿಗೆ ಭರವಸೆ ನೀಡಿದರು.

ಈ‌ ವೇಳೆ , ಸಿದ್ರಾಯಿ ಪಾಟೀಲ, ಬಸವಣ್ಣಿ ಕೊಂಡಸಕೊಪ್ಪ, ಸುರೇಶ ಶಿಂಧೆ, ಹೊಳೆಪ್ಪ ಪೂಜೇರಿ, ದಿಲೀಪ್ ಕೊಂಡಸಕೊಪ್ಪ, ಪ್ರಶಾಂತ ಕಲ್ಲನಾಂಚೆ, ಸಿದ್ದರಾಮ್ ಕೋಲಕಾರ ಸೇರಿದಂತೆ ಹಿರಿಯರು, ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.